social_icon

ವರುಣನ ಆರ್ಭಟ: ಉತ್ತರಾಖಂಡದಲ್ಲಿ 42, ಉತ್ತರ ಪ್ರದೇಶದಲ್ಲಿ 4 ಸಾವು; ಕೇರಳದಲ್ಲಿ ಇಡುಕ್ಕಿ ಡ್ಯಾಂ ಓಪನ್

ಉತ್ತರಾಖಂಡದಲ್ಲಿ ಕಳೆದ 3 ದಿನಗಳಿಂದ ಸುರಿಯುತ್ತಿರುವ ಮಹಾಮಳೆಯು ಮಂಗಳವಾರ ದೊಡ್ಡ ಅನಾಹುತವನ್ನೇ ಸೃಷ್ಟಿಸಿದೆ. ಹಲವು ಭಾಗಗಳಲ್ಲಿ ಸುರಿದ ಭಾರೀ ಮಳೆಗೆ ಅವಘಡಗಳು ಸಂಭವಿಸಿದ್ದು, 42 ಜನರು ಸಾವಿಗೀಡಾಗಿದ್ದಾರೆ. ಪಕ್ಕದ ಉತ್ತರ ಪ್ರದೇಶದಲ್ಲೂ 4 ಜನ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. 

Published: 20th October 2021 08:35 AM  |   Last Updated: 20th October 2021 01:41 PM   |  A+A-


NDRF soldiers rescue people stranded in floodwaters in Udham Singh Nagar, Uttarakhand.

ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ರಕ್ಷಣೆ ಮಾಡುತ್ತಿರುವ ಎನ್'ಡಿಆರ್'ಎಫ್ ಪಡೆ.

Posted By : manjula
Source : The New Indian Express

ನವದೆಹಲಿ: ಉತ್ತರಾಖಂಡದಲ್ಲಿ ಕಳೆದ 3 ದಿನಗಳಿಂದ ಸುರಿಯುತ್ತಿರುವ ಮಹಾಮಳೆಯು ಮಂಗಳವಾರ ದೊಡ್ಡ ಅನಾಹುತವನ್ನೇ ಸೃಷ್ಟಿಸಿದೆ. ಹಲವು ಭಾಗಗಳಲ್ಲಿ ಸುರಿದ ಭಾರೀ ಮಳೆಗೆ ಅವಘಡಗಳು ಸಂಭವಿಸಿದ್ದು, 42 ಜನರು ಸಾವಿಗೀಡಾಗಿದ್ದಾರೆ. ಪಕ್ಕದ ಉತ್ತರ ಪ್ರದೇಶದಲ್ಲೂ 4 ಜನ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. 

ಭಾರೀ ಮಳೆಯಿಂದ ನೈನಿತಾಲ್‌ ಹಾಗೂ ಅನೇಕ ನಗರಗಳು, ಗ್ರಾಮಗಳಲ್ಲಿ ಪ್ರವಾಹದ ಸ್ಥಿತಿ ಸೃಷ್ಟಿಯಾಗಿದೆ. ಮಳೆಯ ಆರ್ಭಟಕ್ಕೆ ಭೂಕುಸಿತಗಳು ಸಂಭವಿಸುತ್ತಿವೆ. ಹೀಗಾಗಿ ಅನೇಕ ಮನೆ-ಕಟ್ಟಡಗಳು ಧರಶಾಯಿಯಾಗಿವೆ. 

ರಾಮಗಂಗಾ, ಕೋಸಿ, ಚಂದ್ರಭಾಗಾ, ಗೌಲಾ, ಚಲ್ತಿ ಸೇರಿದಂತೆ ಅನೇಕ ನದಿಗಳು ಉಕ್ಕೇರಿವೆ. ಹೀಗಾಗಿ ಅವಶೇಷಗಳಲ್ಲಿ ಹಾಗೂ ಪ್ರವಾಹದಲ್ಲಿ ಸಿಲುಕಿ ಸಾವನ್ನಪ್ಪುವವರ ಸಂಖ್ಯೆ ಇನ್ನಷ್ಟುಏರಿಕೆ ಆಗುವ ಆತಂಕವಿದೆ. ಪ್ರವಾಹದಿಂದ ತೊಂದರೆಗೆ ಒಳಗಾದವರ ದೃಶ್ಯಗಳು ಮನಕಲಕುವಂತಿವೆ.

ಚಾರ್‌ಧಾಮ್‌ ಯಾತ್ರೆ ಕೈಗೊಂಡಿರುವ ಯಾತ್ರಾರ್ಥಿಗಳು ಹರಿದ್ವಾರ, ರಿಷಿಕೇಶ್‌, ಶ್ರೀನಗರ, ತೆಹ್ರಿ, ಉತ್ತರಕಾಶಿ, ರುದ್ರಪ್ರಯಾಗ್‌, ಗುಪ್ತಕಾಶಿ, ಉಖಿಮಠ, ಕರ್ಣಪ್ರಯಾಗ್‌, ಜೋಶಿಮಠ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸುರಕ್ಷಿತವಾಗಿ ತಂಗಿದ್ದು, ಮಳೆ ನಿಯಂತ್ರಣಕ್ಕೆ ಬರುವವರೆಗೆ ಅವರು ಇದ್ದಲ್ಲೇ ಇರಬೇಕು ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರು ಮನವಿ ಮಾಡಿಕೊಂಡಿದ್ದಾರೆ. 

ಅಲ್ಲದೆ, ಮಳೆಯಿಂದಾಗಿ ಮನೆ ಕಳೆದುಕೊಂಡಿರುವವರಿಗೆ 1,9 ಲಕ್ಷ ರೂ ಹಾಗೂ ಮೃತರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಸಿಎಂ ಘೋಷಣೆ ಮಾಡಿದ್ದಾರೆ. ಪ್ರವಾಹದಲ್ಲಿ ಸಿಲುಕಿಕೊಂಡವರ ರಕ್ಷಣಾ ಕಾರ್ಯ ಮುಂದುವರೆದಿದ್ದು, ಎಲ್ಲ ರೀತಿಯ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಈ ನಡುವೆ ಉತ್ತರಾಖಂಡದ ವಿವಿಧ ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಿಲುಕಿಕೊಂಡವರ ರಕ್ಷಣಾ ಕಾರ್ಯ ಮುಂದುವರೆದಿದ್ದು, ಇಲ್ಲಿಯವರೆಗೆ ಎನ್​​ಡಿಆರ್​ಫ್​​ 300 ಮಂದಿ ರಕ್ಷಣೆ ಮಾಡಿದೆ. 

ಉತ್ತರಾಖಂಡದಲ್ಲಿನ ಭೀಕರ ಮಳೆಯಲ್ಲಿ ಪ್ರಾಣ ಕಳೆದುಕೊಂಡಿರುವ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಪ್ರಧಾನಿ ಮೋದಿ, ಕೇಂದ್ರದಿಂದ ಅಗತ್ಯ ನೆರವು ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.

ಸಂಪರ್ಕ ಕಡಿದುಕೊಂಡ ನೈನಿತಾಲ್
ನೈನಿತಾಲ್ ನಲ್ಲಿ ಭಾರೀ ಮಳೆಗೆ ಸರಣಿ ಭೂಕುಸಿತ ಉಂಟಾಗಿದ್ದು, ಪರಿಣಾಮ ನೈನಿತಾಲ್ ಜಿಲ್ಲೆಯು ರಾಜ್ಯದ ಇತರೆ ಪ್ರದೇಶಗಳಿಂದ ಸಂಪರ್ಕವನ್ನೇ ಕಡಿದುಕೊಂಡಿದೆ. ಈ ಜಿಲ್ಲೆಯೊಂದರಲ್ಲಿಯೇ 28 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಚಮೋಲಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಗುಡ್ಡ ಕುಸಿದು ಬಿದ್ದಿರುವ ಕಾರಣ ಬದ್ರಿನಾಥ ಹೆದ್ದಾರಿ ಬಂದ್ ಆಗಿದೆ. 

ರಾಮಗಢದ ತಲ್ಲಾ ಸೇರಿದಂತೆ ಉತ್ತರಾಂಖಂಡದ ಬಹುಭಾಗಗಳು ಮಳೆ ನೀರಿನಲ್ಲಿ ಮುಳುಗಿ ಹೋಗಿವೆ. ನೈನಿತಾಲ್ ಸೇರಿದಂತೆ ಇತರ ಪ್ರದೇಶಗಳಲ್ಲಿ ರಸ್ತೆ, ಬೀದಿಗಳು, ಸೇತುವೆಗಳು ಮತ್ತು ರೈಲ್ವೇ ಹಳಿಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಮಳೆಗೆ ಬೆಚ್ಚಿಬಿದ್ದಿರುವ ಜನರು ತಮ್ಮ ಮನೆಗಳ ಮಹಡಿಗಳನ್ನು ಹತ್ತಿ ನೆರವಿಗಾಗಿ ಕೂಗುತ್ತಿದ್ದಾರೆ. ಕಾರ್ಬೆಟ್ ನ್ಯಾಷನಲ್ ಪಾರ್ಕ್'ನ ಪಾಕ್ಕಿಂಗ್ ಸ್ಥಳವು ಕೋಸಿ ನದಿ ಪ್ರವಾಹದಿಂದ ಜಲಾವೃತವಾಗಿವೆ. 

ಈ ನಡುವೆ ಸಂಕಷ್ಟದಲ್ಲಿ ಸಿಲುಕಿರುವವರ ರಕ್ಷಣೆಗೆ 3 ಸೇನಾ ಹೆಲಿಕಾಪ್ಟರ್ ಗಳು ಉತ್ತರಾಖಂಡಕ್ಕೆ ಬಂದಿವೆ. ಮನೆಗಳು, ರಸ್ತೆಗಳು ಮತ್ತು ಭಾರೀ ಭೂಕುಸಿತದ ಅತಿಹೆಚ್ಚು ಸಾವು-ನೋವು ಕಂಡಿರುವ ನೈನಿತಾಲ್ ನಲ್ಲಿ ಎರಡು ಸೇನಾ ಹೆಲಿಕಾಪ್ಟರ್ ಗಳು ಕಾರ್ಯಾಚರಣೆ ನಡೆಸುತ್ತಿವೆ. ಗಢವಾಲ್ ಪ್ರಾಂತ್ಯದಲ್ಲಿ ಮತ್ತೊಂದು ಹೆಲಿಕಾಪ್ಟರ್ ರಕ್ಷಣಾ ಕಾರ್ಯಾಚರಣೆಗೆ ನೆರವಾಗಲಿದೆ. 

ಇನ್ನು 15 ಎನ್'ಡಿಆರ್'ಎಫ್ ತಂಡಗಳು ಪ್ರವಾಹ ಸ್ಥಳಗಳಲ್ಲಿ ದೋಣಿಗಳ ಮೂಲಕ ಸಾಗಿ, ಮನೆಗಳಲ್ಲಿ ಸಿಲುಕಿದವರನ್ನು ದೋಣಿಯಲ್ಲಿ ಕರೆತಂದು ರಕ್ಷಣೆ ಮಾಡುತ್ತಿವೆ. 

ಈ ನಡುವೆ ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ, ಮಧ್ಯಪ್ರದೇಶ, ತಮಿಳುನಾಡು ಸೇರಿದಂತೆ ದೇಶದ ಇತರೆ ಭಾಗಗಳಲ್ಲಿಯೂ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿದ್ದು, ಮುಂದಿನ 4-5 ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ. 

ಇನ್ನು ಕೇರಳ ರಾಜ್ಯದಲ್ಲಿ ಮಂಗಳವಾರ ಮತ್ತೆ ಮಳೆಯಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿಗೀಡಾದವರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. 

ಕೇರಳದಲ್ಲಿ ಈ ತಿಂಗಳು ವಾಡಿಕೆಗಿಂತ ಶೇ.135 ಅಧಿಕ ಮಳೆಯಾಗಿದೆ ಎಂದು ತಿಳಿದುಬಂದಿದೆ. ಅರಬ್ಬಿ ಸಮುದ್ರ-ಬಂಗಾಳಕೊಲ್ಲಿಯಲ್ಲಿ ಏಕಕಾಲಕ್ಕೆ ಚಂಡಮಾರುತ ಉಂಟಾಗಿದ್ದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. 

ಭರ್ತಿಯಾಗಿರುವ ಕೇರಳದ ಇಡುಕ್ಕಿ, ಇಡಮಮಲಯಾರ್, ಪಂಪ ಮತ್ತು ಕಾಕಿ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಹೊರಬಿಡಲು ಆರಂಭಿಸಲಾಗಿದೆ. ಹೀಗಾಗಿ ತಗ್ಗು ಪ್ರದೇಶಗಳು ಮತ್ತು ನದಿ ಪಾತ್ರದ ಪ್ರದೇಶಗಳಲ್ಲಿರುವ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ. 

ಈ ಪೈಕಿ ಇಡುಕ್ಕಿ ಜಲಾಶಯ ಏಶ್ಯಾದ ದೊಡ್ಡ ಅಣೆಕಟ್ಟುಗಳಲ್ಲೊಂದಾಗಿದೆ. 2018ರಲ್ಲಿ ಕೇರಳ ಕಂಡು ಕೇಳರಿಯದ ಮಳೆ ಕಂಡಿತ್ತು. ಆಗ ಇಡುಕ್ಕಿ ಜಲಾಯಶಯದ ಗೇಟು ತೆರೆಯುವಲ್ಲಿ ಮೀನ-ಮೇಷ ಏಣಿಸಲಾಗಿತ್ತು. ಈ ವೈಫಲ್ಯದಿಂದ ಭಾರೀ ಪ್ರವಾಹ ಉಂಟಾಗಿ ಸಾಕಷ್ಟು ಸಾವು-ನೋವುಗಳು ಸಂಭವಿಸಿತ್ತು. ಇದರಿಂದ ಪಾಠ ಕಲಿತಿರುವ ಕೇರಳ, ಇದೀಗ ಅಣೆಕಟ್ಟು ಗೇಟನ್ನು ತೆರೆದಿದೆ. ಇದರ ಗೇಟು ತೆರಿದಿದ್ದು ಡ್ಯಾಂನ ಇತಿಹಾಸದಲ್ಲಿಯೇ 5ನೇ ಬಾರಿ ಸಲ ಹಾಗೂ 3 ವರ್ಷದಲ್ಲಿ ಮೊದಲನೇ ಬಾರಿಯಾಗಿದೆ. 


Stay up to date on all the latest ದೇಶ news
Poll
K Annamalai

ಎನ್‌ಡಿಎಯಿಂದ ಹೊರಬರುವ ಎಐಎಡಿಎಂಕೆ ನಿರ್ಧಾರವು 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಸಾಧನೆ ಮೇಲೆ ಪರಿಣಾಮ ಬೀರಲಿದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp