ಅಫ್ಘಾನಿಸ್ತಾನ ಕ್ಯಾಬಿನೆಟ್ ನಲ್ಲಿ ಭಯೋತ್ಪಾದಕರು; ಭಾರತದ ಮುಂದಿನ ನಡೆಯೇನು?
ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲೀಬಾನ್ ತನ್ನ ಸರ್ಕಾರದಲ್ಲಿ ಹಕ್ಕಾನಿ ನೆಟ್ವರ್ಕ್ ನ ಸಿರಾಜ್ ಹಕ್ಕಾನಿ ಸೇರಿದಂತೆ ವಿಶ್ವಸಂಸ್ಥೆಯಿಂದ ನಿಷೇಧ ಎದುರಿಸುತ್ತಿರುವ ಉಗ್ರರಿಗೆ ಸ್ಥಾನ ನೀಡಿದ್ದು ಭಾರತಕ್ಕೆ ಇರುವ ಆತಂಕಗಳು ಇನ್ನೂ ಹೆಚ್ಚಾಗಿದೆ.
Published: 09th September 2021 12:09 PM | Last Updated: 09th September 2021 01:07 PM | A+A A-

ಅಫ್ಘಾನಿಸ್ತಾನ ಅಧ್ಯಕ್ಷರ ಕಚೇರಿಯಲ್ಲಿ ತಾಲೀಬಾನಿಗಳು
ನವದೆಹಲಿ: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲೀಬಾನ್ ತನ್ನ ಸರ್ಕಾರದಲ್ಲಿ ಹಕ್ಕಾನಿ ನೆಟ್ವರ್ಕ್ ನ ಸಿರಾಜ್ ಹಕ್ಕಾನಿ ಸೇರಿದಂತೆ ವಿಶ್ವಸಂಸ್ಥೆಯಿಂದ ನಿಷೇಧ ಎದುರಿಸುತ್ತಿರುವ ಉಗ್ರರಿಗೆ ಸ್ಥಾನ ನೀಡಿದ್ದು ಭಾರತಕ್ಕೆ ಇರುವ ಆತಂಕಗಳು ಇನ್ನೂ ಹೆಚ್ಚಾಗಿದೆ.
ತಜ್ಞರ ಅಭಿಪ್ರಾಯದ ಪ್ರಕಾರ ತಾಲೀಬಾನ್ ನಡೆ ಭಾರತಕ್ಕೆ ಅಚ್ಚರಿಯೇನಲ್ಲ, ಹಕ್ಕಾನಿ ನೆಟ್ವರ್ಕ್ ನ ಜೊತೆಗೂಡಿ ತಾಲೀಬಾನಿಗಳು ಸರ್ಕಾರ ರಚಿಸಿದರೂ ಅದನ್ನು ಎದುರಿಸಲು ಭಾರತ ತಯಾರಾಗಿದೆ.
ಹಕ್ಕಾನಿ ನೆಟ್ವರ್ಕ್ ಪಾಕಿಸ್ತಾನದ ಐಎಸ್ಐ ಹಾಗೂ ಅಲ್ ಖೈದಾಗೆ ನಿಕಟವಾಗಿರುವ ಸಂಘಟನೆಯಾಗಿದ್ದು ಈ ತಾಲೀಬಾನ್ ನ ಸರ್ಕಾರದಿಂದ ಭಾರತಕ್ಕೆ ಅಸ್ಥಿರತೆ ಹೆಚ್ಚು ಎದುರಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆದರೂ ಬೆಳವಣಿಗೆಗಳು ಇನ್ನೂ ಚಾಲ್ತಿಯಲ್ಲಿದ್ದು, ಪಾಕಿಸ್ತಾನ-ಅಪ್ಘಾನಿಸ್ತಾನದ ಗಡಿಯಲ್ಲಿ ಅಸ್ಥಿರತೆ ಹೆಚ್ಚಾಗಲಿದ್ದು ಪಾಕಿಸ್ತಾನದ ಗಮನ ಅತ್ತ ಹೆಚ್ಚಾಗಿ ಇರಲಿದೆ ಎಂದು ಹೇಳಲಾಗುತ್ತಿದೆ.
ಭಾರತದ ವಿರುದ್ಧ ದೀರ್ಘಾವಧಿಯಿಂದ ಪಾಕಿಸ್ತಾನದ ನೆಲದ ಆಚೆಗೂ ಪರೋಕ್ಷ ಯುದ್ಧ ನಡೆಸುತ್ತಿರುವ ಐಎಸ್ಐ ಅಫ್ಘಾನಿಸ್ತಾನ ಸರ್ಕಾರ ಪ್ರಮುಖ ಪಾತ್ರ ವಹಿಸುತ್ತಿದೆ ಎಂಬುದು ಗಮನಾರ್ಹ ಎಂದು ಸಂಘರ್ಷ ನಿರ್ವಹಣಾ ಸಂಸ್ಥೆಯಲ್ಲಿ ಸಂಶೋಧನಾ ಸದಸ್ಯರಾಗಿರುವ ಅಜಿತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಅಫ್ಘಾನಿಸ್ತಾನದ ಕ್ಯಾಬಿನೆಟ್ ನಲ್ಲಿ ಹಕ್ಕಾನಿಗಳಿರುವುದರ ಬಗ್ಗೆ ಭಾರತಕ್ಕೆ ಆತಂಕಗಳಿದ್ದರೂ ಅದು ಸದ್ಯಕ್ಕೆ ಏನೂ ಮಾಡಲಾಗುವುದಿಲ್ಲ. ಹೆಚ್ಚೆಂದರೆ ಅಲ್ಲಿನ ಸರ್ಕಾರವನ್ನು ಮಾನ್ಯ ಮಾಡುವುದಕ್ಕೆ ನಿರಾಕರಿಸಬಹುದು ಅಥವಾ ವಾಸ್ತವವನ್ನು ಅರಿತು ಸರ್ಕಾರದೊಂದಿಗೆ ಮಾತುಕತೆ ನಡೆಸಿ ಉಳಿದವರಿಗೂ ಇದೇ ಮಾದರಿಯನ್ನು ಅನುಸರಿಸುವಂತೆ ಮಾಡಬಹುದು ಆದರೆ ಬೇರೆಯವರು ಅಫ್ಘಾನಿಸ್ತಾನ ಸರ್ಕಾರದೊಂದಿಗೆ ಮಾತುಕತೆ ಪ್ರಾರಂಭಿಸಿದಲ್ಲಿ ಭಾರತಕ್ಕೆ ಅದನ್ನು ತಡೆಯುವ ಶಕ್ತಿ ಇಲ್ಲ. ಭಾರತ ಹೆಚ್ಚೆಂದರೆ ಮಾಹಿತಿ ವಿಧಾನಗಳನ್ನು ಅವಲಂಬಿಸಿ ಈ ಸರ್ಕಾರವನ್ನು ನಂಬದಿರುವಂತೆ ಮಾಡಲು ಯತ್ನಿಸಬಹುದು ಎಂದು ರಷ್ಯಾ ಮೂಲದ ವಿಶ್ಲೇಷಕ ಆಂಡ್ರ್ಯೂ ಕೊರಿಬ್ಕೊ" ಹೇಳಿದ್ದಾರೆ.
"ಏನೇ ಆದರೂ ಭಾರತದ ಭದ್ರತಾ ಪಡೆಗಳು ಭಯೋತ್ಪಾದನೆ ನಿಗ್ರಹದಲ್ಲಿ ಹೆಚ್ಚು ಅನುಭವ ಹೊಂದಿರುವುದರಿಂದ ಭಾರತಕ್ಕೆ ಅಫ್ಘಾನಿಸ್ತಾನದಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಹೆಚ್ಚಿನ ಆತಂಕ ಇರುವುದಿಲ್ಲ" ಎನ್ನುತ್ತಾರೆ ಅಜಿತ್ ಕುಮಾರ್ ಸಿಂಗ್.