

ಪಾಟ್ನಾ: ಎಂಟನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಗಸ್ಟ್ 24ರಂದು ಬಿಹಾರ ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತುಪಡಿಸುವ ಪ್ರಕ್ರಿಯೆ ನಡೆಯಲಿದೆ.
ಭಾರತೀಯ ಜನತಾ ಪಾರ್ಟಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ(ಎನ್‌ಡಿಎ) ಮೈತ್ರಿಯನ್ನು ಜೆಡಿಯು ಮುರಿದುಕೊಂಡಿತ್ತು ಮತ್ತು 'ಮಹಾಘಟಬಂಧನ್' ಸರ್ಕಾರವನ್ನು ರಚಿಸಲು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಜೊತೆ ಕೈಜೋಡಿಸಿತು.
ಈ ಮಧ್ಯೆ, ಬಿಹಾರದ ನೂತನ ಮಹಾಮೈತ್ರಿ ಕೂಟದ ಸರ್ಕಾರವು ವಿಧಾನಸಭೆ ಸ್ಪೀಕರ್, ಬಿಜೆಪಿ ಶಾಸಕ ವಿಜಯ್ ಕುಮಾರ್ ಸಿನ್ಹಾ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಮುಂದಾಗಿದೆ. ಹಲವು ಶಾಸಕರು ಸಹಿ ಹಾಕಿರುವ ಅವಿಶ್ವಾಸ ಗೊತ್ತುವಳಿ ಅರ್ಜಿಯನ್ನು ವಿಧಾನಸಭೆ ಕಾರ್ಯದರ್ಶಿಗೆ ಹಸ್ತಾಂತರಿಸಲಾಗಿದೆ ಎಂದು ಜೆಡಿಯುನ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ನಿಯಮದ ಪ್ರಕಾರ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಿದ ಬಳಿಕ ಸ್ಪೀಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ನಿರ್ಣಯವನ್ನು ಕೈಗೊಳ್ಳಬಹುದು ಎಂದು ಚೌಧರಿ ಹೇಳಿದ್ದಾರೆ. ಮಹಾಮೈತ್ರಿ ಸರ್ಕಾರದ ಪರ ಒಟ್ಟು 164 ಶಾಸಕರು ಇದ್ದಾರೆ. ಬಿಜೆಪಿಗೆ 77 ಶಾಸಕರ ಬಲವಿದೆ.
ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ದಾಖಲೆಯ ಎಂಟನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಗಸ್ಟ್ 10ರಂದು ಪ್ರಮಾಣ ವಚನ ಸ್ವೀಕರಿಸಿದರು. ಆರ್‌ಜೆಡಿ ನಾಕಕ ತೇಜಸ್ವಿ ಯಾದವ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಸ್ಪೀಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಹೊರಡಿಸಲು ಮಹಾಮೈತ್ರಿ ಕೂಟ ಮುಂದಾಗಿದೆ ಎನ್ನಲಾಗಿದೆ.
Advertisement