ನಾನು ಉಪರಾಷ್ಟ್ರಪತಿ ಅಭ್ಯರ್ಥಿಯಾಗಲು ಬಯಸಿದ್ದೆನೇ? ಏನ್ ತಮಾಷೆ ಮಾಡ್ತಿದ್ದೀರಾ?: ನಿತೀಶ್ ಕುಮಾರ್
ಪಾಟ್ನಾ: ಉಪ ರಾಷ್ಟ್ರಪತಿ ಸ್ಥಾನಕ್ಕೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ನಾಮನಿರ್ದೇಶನ ಮಾಡಲು ಜೆಡಿಯು ಪಕ್ಷದ ಕೆಲವರು ಬಯಸಿದ್ದರು ಎನ್ನುವ ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ಅವರ ಹೇಳಿಕೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಳ್ಳಿಹಾಕಿದ್ದಾರೆ.
'ನಾವು ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳನ್ನು ಬೆಂಬಲಿಸಿದ್ದೇವೆ. ನಾನು ಉಪರಾಷ್ಟ್ರಪತಿಯಾಗಲು ಬಯಸುವುದು ತಮಾಷೆಯ ವಿಷಯ' ಎಂದು ಎಂಟನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದ ನಂತರ ನಿತೀಶ್ ಕುಮಾರ್ ತಿಳಿಸಿದ್ದಾರೆ.
ನಿತೀಶ್ ಕುಮಾರ್ ಅವರನ್ನು ಉಪ ರಾಷ್ಟ್ರಪತಿಯನ್ನಾಗಿ ಮಾಡಬೇಕೆಂದು ಬಯಸಿದ್ದ ಜೆಡಿಯುನ ನಾಯಕರು ನಿತೀಶ್ ಕುಮಾರ್ ಅವರು ಉಪರಾಷ್ಟ್ರಪತಿಯಾಗಿ ದೆಹಲಿಗೆ ಹೋದರೆ, ನೀವು ಬಿಹಾರ ಮುಖ್ಯಮಂತ್ರಿಯಾಗಬಹುದು ಎಂಬ ಯೋಜನೆಯೊಂದಿಗೆ ನನ್ನನ್ನು ಸಂಪರ್ಕಿಸಿದ್ದರು ಎಂದು ನಿನ್ನೆ ಸುಶೀಲ್ ಕುಮಾರ್ ತಿಳಿಸಿದ್ದರು.
'ನಿತೀಶ್ ಕುಮಾರ್ ಅವರನ್ನು ಉಪರಾಷ್ಟ್ರಪತಿಯನ್ನಾಗಿ ಮಾಡಿ ಮತ್ತು ಬಿಹಾರದಲ್ಲಿ ನೀವೇ ಆಡಳಿತ ನಡೆಸಬೇಕು' ಎಂದು ಹೇಳಲು ಕೆಲವು ಜೆಡಿಯು ನಾಯಕರು ನನ್ನ ಬಳಿಗೆ ಬಂದಿದ್ದರು' ಎಂದು ಮೋದಿ ಸುದ್ದಿಗಾರರಿಗೆ ತಿಳಿಸಿದರು.
ಜೆಡಿಯು ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಲಾಲನ್ ಸಿಂಗ್ ಕೂಡ ನಿನ್ನೆ ಸುಶೀಲ್ ಕುಮಾರ್ ಮೋದಿ ಮಾಡಿರುವ ಆರೋಪವನ್ನು ತಳ್ಳಿ ಹಾಕಿದ್ದರು. ಬಿಜೆಪಿಯೊಂದಿಗೆ ಸಂಬಂಧವನ್ನು ಕಡಿದುಕೊಂಡರೆ ನಿತೀಶ್ ಕುಮಾರ್ ಅವರು ವಿರೋಧ ಪಕ್ಷದ ರಾಷ್ಟ್ರಪತಿ ಅಥವಾ ಉಪರಾಷ್ಟ್ರಪತಿ ಅಭ್ಯರ್ಥಿಯಾಗುತ್ತಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಜೆಡಿಯು ಅಂತಹ ಯಾವುದೇ ಘಟನೆ ಸಂಭವಿಸುವ ಸಾಧ್ಯತೆಯನ್ನು ಸ್ಪಷ್ಟವಾಗಿ ನಿರಾಕರಿಸಿದೆ. 'ಅವರು ಕೇವಲ ಕಥೆಗಳನ್ನು ಹೇಳುತ್ತಿದ್ದಾರೆ' ಎಂದು ಪ್ರತಿಕ್ರಿಯಿಸಿದರು.
ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿದುಕೊಳ್ಳಲು ನಿತೀಶ್ ಕುಮಾರ್ ಅವರು ಹಲವಾರು ಕಾರಣಗಳನ್ನು ನೀಡಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ಬಿಜೆಪಿಯು ಬಿಹಾರದಲ್ಲಿಯೂ ಮಹಾರಾಷ್ಟ್ರದಲ್ಲಿ ಮಾಡಿದಂತೆಯೇ ಮಾಡಲು ಪ್ರಯತ್ನಿಸಬಹುದು ಎಂದು, ಜೊತೆಗೆ, ಜೆಡಿಯು ಪಕ್ಷವನ್ನು ಒಳಗಿನಿಂದ ಟೊಳ್ಳಾಗಿ ಮಾಡಲು ಮರೆಯಲ್ಲಿ ಕೆಲಸ ಮಾಡುತ್ತಿದೆ' ಎಂದು ಆರೋಪಿಸಿದ್ದರು.
Related Article
ಬಿಹಾರ: ದಾಖಲೆಯ 8ನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್, ಡಿಸಿಎಂ ಆಗಿ ತೇಜಸ್ವಿ ಪ್ರಮಾಣ!
ಸತತ 8ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಇಂದು ಪ್ರಮಾಣ ವಚನ: ಜೆಡಿಯುಗೆ ಎಡಪಕ್ಷಗಳ ಬೆಂಬಲ
ಬಿಹಾರದ ರಾಜಕೀಯ ಬೆಳವಣಿಗೆ ಬಗ್ಗೆ ದೇವೇಗೌಡ ಅಭಿಪ್ರಾಯ ಇದು...
ಬಿಹಾರ: ಮಹಾಘಟಬಂಧನ್ ಸರ್ಕಾರ, ಬುಧವಾರ ನಿತೀಶ್ ಕುಮಾರ್, ತೇಜಸ್ವಿ ಯಾದವ್ ಪ್ರಮಾಣ ವಚನ ಸ್ವೀಕಾರ
ಬಿಹಾರ: ನಿತೀಶ್ ಕುಮಾರ್ ಗೆ ಮಹಾಘಟಬಂಧನ್ 7 ಪಕ್ಷಗಳ 164 ಶಾಸಕರು ಸಾಥ್; ಬಿಜೆಪಿ ಬಹುತೇಕ ಏಕಾಂಗಿ!
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ