ನವದೆಹಲಿ: ಲೋಕನಾಯಕ ಜೈ ಪ್ರಕಾಶ್ ನಾರಾಯಣ (ಎಲ್‌ಎನ್‌ಜೆಪಿ) ಆಸ್ಪತ್ರೆಗೆ ದಾಖಲಾದ ಮಹಿಳೆಯೊಬ್ಬರಿಗೆ ಮಂಕಿಪಾಕ್ಸ್ ತಗುಲಿರುವುದು ಪತ್ತೆಯಾಗಿದ್ದು, ಈ ಮೂಲಕ ದೆಹಲಿಯಲ್ಲಿ 5ನೇ ಮಂಕಿಪಾಕ್ಸ್ ಪ್ರಕರಣ ವರದಿಯಾಗಿದೆ. ಇದರೊಂದಿಗೆ ದೇಶದಲ್ಲಿ ಇದೀಗ ಒಟ್ಟು 10 ಜನರು ಮಂಕಿಪಾಕ್ಸ್ ಕಾಯಿಲೆಗೆ ತುತ್ತಾಗಿದ್ದಾರೆ.
ದೆಹಲಿಯ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳ ಪೈಕಿ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದು, ಮತ್ತೊಬ್ಬರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ವೈದ್ಯರ ತಂಡವು ರೋಗಿಗೆ ಚಿಕಿತ್ಸೆಯನ್ನು ನೀಡುತ್ತಿದೆ ಎಂದು ಎಲ್‌ಎನ್‌ಜೆಪಿ ಆಸ್ಪತ್ರೆಯ ಡಾ. ಸುರೇಶ್ ಕುಮಾರ್ ತಿಳಿಸಿದ್ದಾರೆ.
ದೇಶದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು, ರೋಗಕ್ಕೆ ತುತ್ತಾಗುವುದನ್ನು ತಪ್ಪಿಸಲು ಮಾಡಬೇಕಾದ ಮತ್ತು ಮಾಡಬಾರದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸೋಂಕಿತ ವ್ಯಕ್ತಿಯೊಂದಿಗೆ ದೀರ್ಘಕಾಲದ ಅಥವಾ ಪುನರಾವರ್ತಿತ ಸಂಪರ್ಕ ಹೊಂದಿದರೆ ಸೋಂಕು ತಗುಲಬಹುದು ಎಂದೂ ಅದು ಹೇಳಿದೆ.
ರೋಗ ಹರಡದಂತೆ ಸೋಂಕಿತ ವ್ಯಕ್ತಿಯನ್ನು ಇತರರಿಂದ ಪ್ರತ್ಯೇಕಿಸಲು, ಹ್ಯಾಂಡ್ ಸ್ಯಾನಿಟೈಸರ್ ಬಳಕೆ, ಸಾಬೂನು ಮತ್ತು ನೀರಿನಿಂದ ಕೈಗಳನ್ನು ತೊಳೆಯುವುದು, ಮಾಸ್ಕ್‌ಗಳಿಂದ ಬಾಯಿಯನ್ನು ಮುಚ್ಚುವುದು, ರೋಗಿಯ ಹತ್ತಿರ ಇರುವಾಗ ಬಿಸಾಡಬಹುದಾದ ಕೈಗವಸುಗಳಿಂದ ಕೈಗಳನ್ನು ಬಳಸುವುದು ಹಾಗೂ ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಲು ಸೋಂಕು ನಿವಾರಕಗಳನ್ನು ಬಳಸಬೇಕೆಂದು ಸಚಿವಾಲಯ ಸಲಹೆ ನೀಡಿದೆ.
Advertisement