ಉತ್ತರಪ್ರದೇಶ: ಶಿವ ದೇವಸ್ಥಾನದಲ್ಲಿ ಮಾಂಸ ಎಸೆದಿದ್ದ ಪ್ರಕರಣ; ಪ್ರಮುಖ ಆರೋಪಿ ಬಂಧನ
ಕನ್ನೌಜ್: ಕಳೆದ ತಿಂಗಳು ಕೋಮುಗಲಭೆಗೆ ಕಾರಣವಾಗಿದ್ದ ತಾಲ್ಗ್ರಾಮ್ ಪಟ್ಟಣದ ದೇವಸ್ಥಾನದಲ್ಲಿ ಮಾಂಸವನ್ನು ಎಸೆದಿದ್ದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಚಂಚಲ್ ತ್ರಿಪಾಠಿ ಪ್ರಮುಖ ಆರೋಪಿಯಾಗಿದ್ದು ಈತ ಕಟುಕನಾಗಿದ್ದ ಮನ್ಸೂರ್ ಕಸಾಯಿಗೆ 10 ಸಾವಿರ ರೂಪಾಯಿಗಳ ಆಮಿಷ ಒಡ್ಡಿ ಈ ಕೆಲಸ ಮಾಡಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕುನ್ವರ್ ಅನುಪಮ್ ಸಿಂಗ್ ಹೇಳಿದ್ದಾರೆ.
ಚಂಚಲ್ ತ್ರಿಪಾಠಿಗೆ ಆಗಿನ ಎಸ್‌ಎಚ್‌ಒ ಹರಿ ಶ್ಯಾಮ್ ಸಿಂಗ್ ಅವರೊಂದಿಗೆ ಉತ್ತಮ ಸಂಬಂಧ ಇರಲಿಲ್ಲ. ಹೀಗಾಗಿ ಅವರನ್ನು ಹುದ್ದೆಯಿಂದ ತೆಗೆದುಹಾಕಲು ಈ ರೀತಿಯ ಕುಕೃತ್ಯಕ್ಕೆ ಕೈಹಾಕಿದ್ದರು ಎಂದು ತಿಳಿಸಿದ್ದಾರೆ.
ಕಳೆದ ಜುಲೈ 16ರಂದು ದೇವಸ್ಥಾನದಲ್ಲಿ ಮಾಂಸದ ತುಂಡು ಪತ್ತೆಯಾದ ಹಿನ್ನಲೆಯಲ್ಲಿ ಕೋಮುಗಲಭೆ ಸೃಷ್ಟಿಯಾಗಿತ್ತು. ಅಲ್ಲದೆ ಒಂದು ಸಮುದಾಯಕ್ಕೆ ಸೇರಿದ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ಇದುವರೆಗೆ 17 ಮಂದಿಯನ್ನು ಬಂಧಿಸಿದ್ದಾರೆ.
ಮನ್ಸೂರ್ ಕಸಾಯಿಯನ್ನು ಬಂಧಿಸಿದ ನಂತರ, ಘಟನೆಯ ದುರುದ್ದೇಶ ಹೊರಬಂದಿದೆ. ರಾನ್ವಾ ಗ್ರಾಮದ ನಿವಾಸಿ ಚಂಚಲ್ ತ್ರಿಪಾಠಿ ಮಾಂಸದ ತುಂಡುಗಳನ್ನು ದೇವಸ್ಥಾನದಲ್ಲಿ ಇಡುವಂತೆ ಹೇಳಿದ್ದರೂ ಎಂದು ಮನ್ಸೂರ್ ಪೊಲೀಸರಿಗೆ ತಿಳಿಸಿದ್ದಾರೆ.
ಇನ್ನು ಈ ಘಟನೆ ನಂತರ ಅಂದಿನ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಮಿಶ್ರಾ, ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಶ್ರೀವಾಸ್ತವ ಮತ್ತು ತಾಲ್ಗ್ರಾಮ್ ಪೊಲೀಸ್ ಠಾಣೆ ಪ್ರಭಾರಿ ಹರಿ ಶ್ಯಾಮ್ ಸಿಂಗ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ