ಬಿಹಾರದಲ್ಲಿ 20 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ: ಸ್ವಾತಂತ್ರ್ಯೋತ್ಸವದ ವೇಳೆ ನಿತೀಶ್ ಕುಮಾರ್ ಘೋಷಣೆ

ಬಿಹಾರದ ಯುವಕರಿಗೆ 10 ಲಕ್ಷ ಉದ್ಯೋಗಗಳನ್ನು ಒದಗಿಸುವ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಮಹತ್ವಾಕಾಂಕ್ಷೆಯ ಭರವಸೆಯನ್ನು ಬೆಂಬಲಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂದು ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ತೇಜಸ್ವಿ ಯಾದವ್
ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ತೇಜಸ್ವಿ ಯಾದವ್
Updated on

ಪಾಟ್ನಾ: ಬಿಹಾರದ ಯುವಕರಿಗೆ 10 ಲಕ್ಷ ಉದ್ಯೋಗಗಳನ್ನು ಒದಗಿಸುವ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಮಹತ್ವಾಕಾಂಕ್ಷೆಯ ಭರವಸೆಯನ್ನು ಬೆಂಬಲಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂದು ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅದಷ್ಟೇ ಅಲ್ಲ, ಒಟ್ಟು ಉದ್ಯೋಗಾವಕಾಶಗಳು ಅಂತಿಮವಾಗಿ ದ್ವಿಗುಣಗೊಳ್ಳಬಹುದು ಎಂದಿದ್ದಾರೆ.

ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಜನತಾ ದಳ ಮತ್ತು ಜನತಾ ದಳ (ಯುನೈಟೆಡ್) ಮೈತ್ರಿ ಸರ್ಕಾರವು ಸರ್ಕಾರದಲ್ಲಿ ರಾಜ್ಯದಲ್ಲಿ ಕನಿಷ್ಠ 10 ಲಕ್ಷ ಉದ್ಯೋಗಗಳನ್ನು ಮತ್ತು ವಿವಿಧ ಕ್ಷೇತ್ರಗಳಲ್ಲಿ ಹೆಚ್ಚುವರಿಯಾಗಿ 10 ಲಕ್ಷ ಉದ್ಯೋಗಗಳನ್ನು ಒದಗಿಸುವ ಪರಿಕಲ್ಪನೆಯನ್ನು ಹೊಂದಿದೆ ಎಂದು ಹೇಳಿದರು.

'ರಾಜ್ಯದ ಯುವಜನತೆಗೆ ಸರ್ಕಾರಿ ಉದ್ಯೋಗ ಮತ್ತು ಹೊರಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನಾವು ಕೆಲಸ ಮಾಡುತ್ತೇವೆ. ಇದರಲ್ಲಿ ನಾವು ಯಶಸ್ವಿಯಾದರೆ, ಈ ಸಂಖ್ಯೆಯನ್ನು 20 ಲಕ್ಷಕ್ಕೆ ಕೊಂಡೊಯ್ಯಲು ನಾವು ಬಯಸುತ್ತೇವೆ. ಇದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಶ್ರಮಿಸುತ್ತದೆ' ಎಂದು ಅವರು ಹೇಳಿದರು.

2020ರ ವಿಧಾನಸಭಾ ಚುನಾವಣೆಯಲ್ಲಿ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಭರವಸೆ ನೀಡಿದ್ದರು. ಆದರೆ, ಇದೇ ವಿಚಾರವಾಗಿ ಪದೇ ಪದೇ ಟೀಕೆಗೆ ಗುರಿಯಾಗಿದ್ದಾರೆ. ಈ ಬಾರಿ ಜೆಡಿಯು ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿರುವ ಆರ್‌ಜೆಡಿಯ ಯುವ ನಾಯಕ ಈ ಹಿಂದೆ ನೀಡಿದ್ದ ತನ್ನ ಉದ್ಯೋಗ ಭರವಸೆಗೆ ಮುಖ್ಯಮಂತ್ರಿಯಿಂದ ಒಪ್ಪಿಗೆ ಸಿಕ್ಕಿದೆ ಎಂದು ಹೇಳಿದ್ದರು.

ತಮ್ಮ ಭರವಸೆಯ ಬಗ್ಗೆ ಮುಖ್ಯಮಂತ್ರಿಯಿಂದಲೇ ಸ್ಪಷ್ಟವಾದ ಸಾರ್ವಜನಿಕ ಘೋಷಣೆ ದೊರಕಿದ ಬಳಿಕ ತೇಜಸ್ವಿ ಯಾದವ್, ಮುಖ್ಯಮಂತ್ರಿ ಮಾಡಿರುವ ಈ  'ಬೃಹತ್ ಘೋಷಣೆ'ಯು ಮಾಧ್ಯಮಗಳು ಗಮನಹರಿಸಬೇಕಾದ 'ನೈಜ ವಿಷಯ'ವಾಗಿದೆ ಮತ್ತು ಇದನ್ನು ಮಾಡಲು ಎರಡು ಪಕ್ಷಗಳು ಒಟ್ಟಾಗಿ ಕೆಲಸ ಮಾಡುತ್ತವೆ ಎಂದು ಹೇಳಿದರು.

'ಹಿಂದೂ-ಮುಸ್ಲಿಂ ವಿಷಯಗಳ ಬದಲು ಉದ್ಯೋಗದ ಬಗ್ಗೆ ಕೇಳುತ್ತಿರುವುದೇ ಯಶಸ್ಸು. ಈ ಹಿಂದೆ ಯಾವತ್ತೂ ಉದ್ಯೋಗದ ಬಗ್ಗೆ ಕೇಳದೆ ಮಲಗಿದ್ದ ಜನರಿಗೆ ಹಾಗೂ ಈಗ ಎಚ್ಚೆತ್ತುಕೊಂಡಿರುವ ಮಾಧ್ಯಮಗಳಿಗೂ ನನ್ನ ಧನ್ಯವಾದಗಳು. ಇದು ಯಶಸ್ಸಲ್ಲವೇ?' ಎಂದು ಪ್ರಶ್ನಿಸಿದ್ದಾರೆ.

'ಆದರೆ 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷ 2 ಕೋಟಿ ಉದ್ಯೋಗಗಳನ್ನು ಒದಗಿಸುವ ಭರವಸೆ ನೀಡಿದ್ದರು. ಅದು ಏನಾಯಿತು ಎಂದು ಅವರನ್ನು (ಬಿಜೆಪಿ) ಕೇಳಿ. ಅವರು ಸುಮಾರು ಎರಡು ವರ್ಷಗಳ ಕಾಲ ಅಧಿಕಾರದಲ್ಲಿದ್ದರು. ಆದರೆ, ಅವರು ಭರವಸೆ ನೀಡಿದ 19 ಲಕ್ಷ ಉದ್ಯೋಗಗಳ ಪೈಕಿ, 19 ಉದ್ಯೋಗಗಳನ್ನಾದರೂ ಬಿಜೆಪಿ ನೀಡಿದೆಯೇ?' ಎಂದು ಎರಡು ದಿನಗಳ ಹಿಂದಷ್ಟೇ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಪ್ರಶ್ನಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com