ಘಾಜಿಯಾಬಾದ್: ಹುಟ್ಟುಹಬ್ಬದ ಪಾರ್ಟಿಯ ನಂತರ 19 ವರ್ಷದ ಯುವತಿಯ ಮೇಲೆ ಮೂವರು ಯುವಕರು ಅತ್ಯಾಚಾರ ಎಸಗಿರುವ ಘಟನೆ ಗಾಜಿಯಾಬಾದ್ ಜಿಲ್ಲೆಯ ಮೋದಿ ನಗರದಲ್ಲಿ ಮಂಗಳವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಯುವತಿಯು ಭಾನುವಾರ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ಯಾರೋ ಅವರಿಗೆ ಮತ್ತು ಬರುವ ಪದಾರ್ಥವನ್ನು ಬೆರೆಸಿದ ಪಾನೀಯವನ್ನು ನೀಡಿದ್ದಾರೆ ಎಂದು ಅವರು ಹೇಳಿದರು.
ಇದಾದ ನಂತರ, ಒಬ್ಬ ವ್ಯಕ್ತಿ ಆಕೆಯನ್ನು ಕೋಣೆಗೆ ಕರೆದೊಯ್ದಿದ್ದಾನೆ ಮತ್ತು ತನ್ನ ಸ್ನೇಹಿತರನ್ನೂ ಕರೆದಿದ್ದಾನೆ. ಬಳಿಕ ಅವರೆಲ್ಲರೂ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ವಲ್ಪ ಹೊತ್ತಿನ ನಂತರ ಯುವತಿಗೆ ಪ್ರಜ್ಞೆ ಬಂದು ಕೃತ್ಯವನ್ನು ವಿರೋಧಿಸಿದಾಗ, ಅವರು ಆಕೆಯನ್ನು ಥಳಿಸಿದ್ದಾರೆ. ಈ ಘಟನೆಯನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂತ್ರಸ್ತೆಯು ತನ್ನ ಮನೆಗೆ ಬಂದು ಕುಟುಂಬಸ್ಥರಿಗೆ ವಿಚಾರವನ್ನು ತಿಳಿಸಿದ್ದಾಳೆ. ಸೋಮವಾರ ಆಕೆ ತನ್ನ ತಂದೆಯೊಂದಿಗೆ ಮೋದಿ ನಗರ ಪೊಲೀಸ್ ಠಾಣೆಗೆ ಆಗಮಿಸಿ ಪ್ರಕರಣ ದಾಖಲಿಸಿದ್ದಾಳೆ.
ಪೊಲೀಸರು ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ.
ಎಲ್ಲಾ ಮೂವರು ಆರೋಪಿಗಳನ್ನು ಶೇಖರ್, ಕೃಷ್ಣ ಮತ್ತು ಅರ್ಜುನ್ ಎಂದು ಗುರುತಿಸಲಾಗಿದೆ ಎಂದು ಗ್ರಾಮೀಣ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಇರಾಜ್ ರಾಜಾ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
Advertisement