ತಮಿಳುನಾಡು: ಪಳನಿಸ್ವಾಮಿ ಬಣಕ್ಕೆ ಭಾರೀ ಹಿನ್ನಡೆ; ಹೊಸದಾಗಿ ಎಐಎಡಿಎಂಕೆ ಕೌನ್ಸಿಲ್ ಸಭೆ ನಡೆಸಲು ಮದ್ರಾಸ್ ಹೈಕೋರ್ಟ್ ಆದೇಶ

ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ತಿರುವು ನೀಡಿರುವ ಎಐಎಡಿಎಂಕೆ ಬಣ ರಾಜಕೀಯಕ್ಕೆ ಮದ್ರಾಸ್ ಹೈಕೋರ್ಟ್ ಮತ್ತೊಂದು ತಿರುವು ನೀಡಿದ್ದು, ಹೊಸದಾಗಿ ಎಐಎಡಿಎಂಕೆ ಕೌನ್ಸಿಲ್ ಸಭೆ ನಡೆಸುವಂತೆ ಆದೇಶ ನೀಡಿದೆ.
ಪನ್ನೀರ್ ಸೆಲ್ವಂ-ಪಳನಿಸ್ವಾಮಿ
ಪನ್ನೀರ್ ಸೆಲ್ವಂ-ಪಳನಿಸ್ವಾಮಿ

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ತಿರುವು ನೀಡಿರುವ ಎಐಎಡಿಎಂಕೆ ಬಣ ರಾಜಕೀಯಕ್ಕೆ ಮದ್ರಾಸ್ ಹೈಕೋರ್ಟ್ ಮತ್ತೊಂದು ತಿರುವು ನೀಡಿದ್ದು, ಹೊಸದಾಗಿ ಎಐಎಡಿಎಂಕೆ ಕೌನ್ಸಿಲ್ ಸಭೆ ನಡೆಸುವಂತೆ ಆದೇಶ ನೀಡಿದೆ.

ಜುಲೈ 11ರಂದು ಸಾಮಾನ್ಯ ಮಂಡಳಿ ಸಭೆ ನಡೆಸಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರನ್ನು ಎಐಎಡಿಎಂಕೆ ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿತ್ತು. ಈ ಸಭೆಯನ್ನು ಮದ್ರಾಸ್ ಹೈಕೋರ್ಟ್ ಇಂದು ರದ್ದುಗೊಳಿಸಿದೆ. ಎಐಎಡಿಎಂಕೆ ಪಕ್ಷದಲ್ಲಿ ಹೊಸದಾಗಿ ಜನರಲ್ ಕೌನ್ಸಿಲ್ ಸಭೆ ನಡೆಸಲು ಮದ್ರಾಸ್ ಹೈಕೋರ್ಟ್ ಆದೇಶಿಸಿದೆ. 

ಜುಲೈ 11ರಂದು ಜನರಲ್ ಕೌನ್ಸಿಲ್ ಸಭೆ ನಡೆಯುವ ಮೊದಲು ಯಾವ ಪರಿಸ್ಥಿತಿಯಿತ್ತೋ ಅದನ್ನೇ ಮುಂದುವರೆಸಲು ನ್ಯಾಯಾಲಯ ಆದೇಶ ನೀಡಿದ್ದು, ಜನರಲ್ ಕೌನ್ಸಿಲ್ ಸಭೆ ಕರೆಯುವ ಅಧಿಕಾರ ಸಂಯೋಜಕರು ಮತ್ತು ಜಂಟಿ ಸಂಯೋಜಕರಿಗೆ ಮಾತ್ರ ಇದೆ ಎಂದು ನ್ಯಾಯಾಲಯ ಘೋಷಿಸಿದೆ. ಈ ಹಿಂದಿನ ಪಕ್ಷದ ಜನರಲ್ ಕೌನ್ಸಿಲ್ ಸಭೆ ಮತ್ತು ಪಕ್ಷದಿಂದ ತನ್ನನ್ನು ಉಚ್ಚಾಟಿಸಿರುವುದನ್ನು ಪ್ರಶ್ನಿಸಿ ತಮಿಳುನಾಡು ಮಾಜಿ ಸಿಎಂ ಓ ಪನೀರ್​ ಸೆಲ್ವಂ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಜಿ. ಜಯಚಂದ್ರನ್ ಅವರ ಪೀಠವು ಇಂದು ವಿಚಾರಣೆ ನಡೆಸಿದೆ. ಈ ವೇಳೆ ಪನೀರ್​ ಸೆಲ್ವಂ ಅವರನ್ನು ಉಚ್ಛಾಟನೆ ಮಾಡಿರುವ ಆದೇಶಕ್ಕೆ ಕೋರ್ಟ್ ತಡೆ ನೀಡಿದ್ದು ಮಾತ್ರವಲ್ಲದೇ ಜುಲೈನಲ್ಲಿ ನಡೆದ ಜನರಲ್ ಕೌನ್ಸಿಲ್ ಸಭೆಯನ್ನು ಜಸ್ಟಿಸ್ ಜಿ ಜಯಚಂದ್ರನ್ ನೇತೃತ್ವದ ಪೀಠ ರದ್ದುಗೊಳಿಸಿದೆ.

ಒಪಿಎಸ್ ಪರ ಹಿರಿಯ ವಕೀಲರಾದ ಗುರು ಕೃಷ್ಣಕುಮಾರ್, ಪಿಎಚ್ ಅರವಿಂದ್ ಪಾಂಡಿಯನ್ ಮತ್ತು ಎಕೆ ಶ್ರೀರಾಮ್ ವಾದ ಮಂಡಿಸಿದರೆ, ಇಪಿಎಸ್ ಪರ ಹಿರಿಯ ವಕೀಲ ವಿಜಯ್ ನಾರಾಯಣ್, ಎಸ್ ಆರ್ ರಾಜಗೋಪಾಲ್ ಮತ್ತು ನರ್ಮದಾ ಸಂಪತ್ ವಾದ ಮಂಡಿಸಿದ್ದರು.

ಈ ಹಿಂದೆ, ಒಪಿಎಸ್ ಅವರ ಅರ್ಜಿಗಳನ್ನು ಹೊಸದಾಗಿ ಪರಿಗಣಿಸಲು ಮತ್ತು ಮೂರು ವಾರಗಳಲ್ಲಿ ಆದೇಶಗಳನ್ನು ನೀಡುವಂತೆ ಮದ್ರಾಸ್ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ವಾದಗಳ ಸಂದರ್ಭದಲ್ಲಿ, ಸಂಯೋಜಕರು ಮತ್ತು ಜಂಟಿ ಸಂಯೋಜಕರ ಅನುಮೋದನೆಯಿಲ್ಲದೆ ಯಾವುದೇ ಸಭೆಯನ್ನು ಕರೆಯುವಂತಿಲ್ಲ ಎಂದು ಒಪನ್ನೀರ್ ಸೆಲ್ವಂ ಬಣದವರು ಪ್ರತಿಪಾದಿಸಿದರು. ಒಪಿಎಸ್ ಅವರನ್ನು 1.5 ಕೋಟಿ ಪ್ರಾಥಮಿಕ ಸದಸ್ಯರಿಂದ ಪಕ್ಷದ ಸಂಯೋಜಕರನ್ನಾಗಿ ನೇಮಿಸಲಾಗಿದೆ. ಹಾಗಾಗಿ, ಕೇವಲ 2,665 ಸದಸ್ಯರನ್ನು ಒಳಗೊಂಡಿರುವ ಜನರಲ್ ಕೌನ್ಸಿಲ್ ಸಭೆ ತೆಗೆದುಕೊಂಡ ನಿರ್ಧಾರದಿಂದ ಅವರನ್ನು ಆ ಸ್ಥಾನದಿಂದ ಹೊರಹಾಕಲು ಸಾಧ್ಯವಿಲ್ಲ ಎಂದು ಸಹ ವಾದಿಸಿತ್ತು. 2,500ಕ್ಕೂ ಹೆಚ್ಚು ಎಐಎಡಿಎಂಕೆ ಪಕ್ಷದ ಸದಸ್ಯರು ವಿನಂತಿಸಿದ ನಂತರ ಜೂನ್ 23ರ ಜನರಲ್ ಕೌನ್ಸಿಲ್ ಸಭೆಯಲ್ಲಿ ಜುಲೈ 11ರಂದು ಜನರಲ್ ಕೌನ್ಸಿಲ್ ಸಭೆಯನ್ನು ಕರೆಯುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಇಪಿಎಸ್ ಬಣ ಕೋರ್ಟ್ ನಲ್ಲಿ ಪ್ರತಿಪಾದಿಸಿದೆ.

ಜುಲೈ 11ರಂದು ಸಭೆ ಕರೆಯುವ ಪ್ರಕಟಣೆಯನ್ನು ಎಲ್ಲಾ ಪತ್ರಿಕೆಗಳಲ್ಲಿ ಪ್ರಸಾರ ಮಾಡಲಾಗಿದ್ದು, ಅದನ್ನು ನೋಟಿಸ್ ಎಂದು ಪರಿಗಣಿಸಬಹುದು ಎಂದು ಸಹ ವಾದಿಸಲಾಗಿತ್ತು. ಸಭೆ ಕರೆಯಲು 15 ದಿನಗಳ ಕಾಲಾವಕಾಶದ ಅಗತ್ಯವಿದ್ದರೂ ಪಕ್ಷದ 5ನೇ 1 ಭಾಗದಷ್ಟು ಸದಸ್ಯರು ಸಭೆಯನ್ನು ಕೋರಿದಾಗ ಅದೇ ಅಗತ್ಯವಿರಲಿಲ್ಲ. ಹೀಗಾಗಿ, ಜುಲೈ 11ರಂದು ನಡೆದ ಸಾಮಾನ್ಯ ಸಭೆಯನ್ನು ನಿಯಮಾನುಸಾರ ಕ್ರಮಬದ್ಧವಾಗಿ ನಡೆಸಲಾಗಿದೆ ಎಂದು ಪಳನಿಸ್ವಾಮಿ ಬಣ ವಾದಿಸಿದೆ.

ಎಐಎಡಿಎಂಕೆ ನಾಯಕ ಓ ಪನ್ನೀರಸೆಲ್ವಂ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ನಿಟ್ಟಿನಲ್ಲಿ ಮದ್ರಾಸ್ ಹೈಕೋರ್ಟ್ ಬುಧವಾರ ಎಐಎಡಿಎಂಕೆಯ ವ್ಯವಹಾರಗಳಲ್ಲಿ ಜೂನ್ 23 ರಿಂದ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com