ಭಾರತಕ್ಕೆ ಗೋಧಿ ಆಮದು ಮಾಡಿಕೊಳ್ಳುವ ಯೋಜನೆಯಿಲ್ಲ: ಕೇಂದ್ರ ಸರ್ಕಾರ

ದೇಶದ ಅಗತ್ಯತೆಗಳನ್ನು ಪೂರೈಸಲು ಸಾಕಾಗುವಷ್ಟು ದಾಸ್ತಾನು ಇರುವುದರಿಂದ ಗೋಧಿಯನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವ ಯಾವುದೇ ಯೋಜನೆಯನ್ನು ಸರ್ಕಾರ ಹೊಂದಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ನವದೆಹಲಿ: ದೇಶದ ಅಗತ್ಯತೆಗಳನ್ನು ಪೂರೈಸಲು ಸಾಕಾಗುವಷ್ಟು ದಾಸ್ತಾನು ಇರುವುದರಿಂದ ಗೋಧಿಯನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವ ಯಾವುದೇ ಯೋಜನೆಯನ್ನು ಸರ್ಕಾರ ಹೊಂದಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಬಳಿ ಸಾರ್ವಜನಿಕ ವಿತರಣೆಗೆ ಸಾಕಾಗುವಷ್ಟು ದಾಸ್ತಾನು ಹೊಂದಿದೆ.

ಭಾರತವು ಆಹಾರಧಾನ್ಯವನ್ನು ಆಮದು ಮಾಡಿಕೊಳ್ಳಬಹುದು ಎಂಬ ಕೆಲವು ವರದಿಗಳ ಹಿನ್ನೆಲೆಯಲ್ಲಿ, 'ಭಾರತಕ್ಕೆ ಗೋಧಿಯನ್ನು ಆಮದು ಮಾಡಿಕೊಳ್ಳುವ ಯಾವುದೇ ಯೋಜನೆ ಇಲ್ಲ. ನಮ್ಮ ದೇಶೀಯ ಅವಶ್ಯಕತೆಗಳನ್ನು ಪೂರೈಸಲು ದೇಶವು ಸಾಕಷ್ಟು ದಾಸ್ತಾನನ್ನು ಹೊಂದಿದೆ' ಎಂದು ಮೂಲವೊಂದು ತಿಳಿಸಿದೆ.

ಭಾರತದ ಗೋಧಿ ಉತ್ಪಾದನೆಯು ಈ ಬಾರಿ ಸುಮಾರು ಶೇಕಡ 3ರಷ್ಟು ಕಡಿಮೆಯಾಗಿದೆ ಎಂದು ಅಂದಾಜಿಸಲಾಗಿದೆ. 106.84 ದಶಲಕ್ಷ ಟನ್‌ಗಳಿಗೆ ಉತ್ಪಾದನೆ ಕುಸಿದಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದೇ ಹೊತ್ತಲ್ಲೇ ಒಟ್ಟಾರೆ ಆಹಾರ ಧಾನ್ಯ ಉತ್ಪಾದನೆಯು 2021-22ರ ಸಾಲಿನಲ್ಲಿ ದಾಖಲೆಯ 315.72 ದಶಲಕ್ಷ ಟನ್‌ಗಳಷ್ಟಾಗಿದೆ ಎಂದು ಅಂದಾಜಿಸಲಾಗುತ್ತಿದೆ.

ಉತ್ತರ ಭಾರತದ ರಾಜ್ಯಗಳಾದ ಪಂಜಾಬ್ ಮತ್ತು ಹರಿಯಾಣಗಳಲ್ಲಿ ಬಿಸಿಗಾಳಿಯಿಂದಾಗಿ ಗೋಧಿ ಉತ್ಪಾದನೆ ಕುಸಿದಿದೆ ಎಂದು ಹೇಳಲಾಗುತ್ತಿದೆ.

ಕೇಂದ್ರ ಕೃಷಿ ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿದ 2021-22ರ ಬೆಳೆ ವರ್ಷದ ನಾಲ್ಕನೇ ಮುಂಗಡ ಅಂದಾಜಿನ ಪ್ರಕಾರ, ಅಕ್ಕಿ, ಜೋಳ, ಬೇಳೆ ಕಾಳುಗಳು, ಸಾಸಿವೆ, ಎಣ್ಣೆಕಾಳುಗಳು ಮತ್ತು ಕಬ್ಬುಗಳಿಗೆ ದಾಖಲೆಯ ಉತ್ಪಾದನೆಯಾಗಿದೆ.

ಈ ತಿಂಗಳ ಆರಂಭದಲ್ಲಿ ಗೋಧಿ ಹಿಟ್ಟಿನ ಗಿರಣಿಗಾರರ ಸಂಸ್ಥೆಯು ದೇಶೀಯ ಸರಬರಾಜು ಹೆಚ್ಚಿಸಲು ಮತ್ತು ಬೆಲೆಗಳನ್ನು ನಿಯಂತ್ರಿಸಲು ಗೋಧಿಯ ಮೇಲೆ ವಿಧಿಸಲಾಗುವ ಶೇ. 40ರ ಆಮದು ಸುಂಕವನ್ನು ರದ್ದುಗೊಳಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿತ್ತು.

‘ರೋಲರ್ ಫ್ಲೋರ್ ಮಿಲ್ಲರ್ಸ್ ಫೆಡರೇಶನ್ ಆಫ್ ಇಂಡಿಯಾ’ದ ಸದಸ್ಯರು ಬುಧವಾರ ಕೇಂದ್ರ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಅವರನ್ನು ಭೇಟಿ ಮಾಡಿ ಮಾರುಕಟ್ಟೆಯಲ್ಲಿ ಗೋಧಿಯ ಬೆಲೆ ಏರಿಕೆ ಮತ್ತು ಕೊರತೆಯ ಕುರಿತು ಚರ್ಚೆ ಮಾಡಿದೆ. ಈ ಬಗ್ಗೆ ಫೆಡರೇಶನ್‌ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದೆ.

ಫೆಡರೇಷನ್‌ನ ಅಧ್ಯಕ್ಷ ಅಂಜನಿ ಅಗರ್ವಾಲ್ ಮಾತನಾಡಿ, ಕಳೆದ 15 ದಿನಗಳಲ್ಲಿ ಗೋಧಿ ಬೆಲೆ ಕ್ವಿಂಟಲ್‌ಗೆ ₹300-350 ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಗೋದಿ ಕೊಯ್ಲು ಅವಧಿ ಒಂದು ತಿಂಗಳ ಹಿಂದಷ್ಟೇ ಮುಗಿದಿದ್ದು, ಹೊಸ ಬೆಳೆ ಲಭ್ಯವಾಗುವ ಹೊತ್ತಿಗೆ ಇನ್ನೂ ಎಂಟು ತಿಂಗಳಾದರೂ ಬೇಕಾಗುತ್ತದೆ. ಅಷ್ಟರಲ್ಲೇ ಕಳೆದ ಕೆಲವು ದಿನಗಳಲ್ಲಿ ಗೋಧಿ ಅಲಭ್ಯತೆ ಮತ್ತು ಬೆಲೆಯಲ್ಲಿ ತೀವ್ರ ಏರಿಕೆಯಾಗುತ್ತಿರುವ ಬಗ್ಗೆ ಫೆಡರೇಷನ್‌ ಕಳವಳ ವ್ಯಕ್ತಪಡಿಸಿತ್ತು.

ಮೇ ತಿಂಗಳಲ್ಲಿ, ಬಿಸಿ ಗಾಳಿಯಿಂದಾಗಿ ಗೋಧಿ ಉತ್ಪಾದನೆಯು ಹಾನಿಗೊಳಗಾಗುವ ಆತಂಕದ ನಡುವೆ ದೇಶದಲ್ಲಿ ಗೋಧಿ ಬೆಲೆ ಏರಿಕೆಯನ್ನು ನಿಯಂತ್ರಿಸುವ ಸಲುವಾಗಿ ಭಾರತವು ಗೋಧಿ ರಫ್ತುಗಳನ್ನು ನಿಷೇಧಿಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com