ಸಮವಸ್ತ್ರದ ವಿಚಾರವಾಗಿ ದಲಿತ ಬಾಲಕಿಗೆ ಥಳಿಸಿ, ಶಾಲೆಯಿಂದ ಹೊರಹಾಕಿದ ಗ್ರಾಮದ ಮಾಜಿ ಮುಖ್ಯಸ್ಥ!

ಸಮವಸ್ತ್ರ ಧರಿಸಿಲ್ಲ ಎಂಬ ಕಾರಣಕ್ಕೆ ಇಲ್ಲಿನ ಗ್ರಾಮದ ಮಾಜಿ ಮುಖ್ಯಸ್ಥರೊಬ್ಬರು, ದಲಿತ ಬಾಲಕಿಗೆ ಜಾತಿ ನಿಂದನೆ ಮಾಡುವುದಲ್ಲದೆ, ಥಳಿಸಿ ಶಾಲೆಯಿಂದ ಹೊರಹಾಕಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಭದೋಹಿ: ಸಮವಸ್ತ್ರ ಧರಿಸಿಲ್ಲ ಎಂಬ ಕಾರಣಕ್ಕೆ ಇಲ್ಲಿನ ಗ್ರಾಮದ ಮಾಜಿ ಮುಖ್ಯಸ್ಥರೊಬ್ಬರು, ದಲಿತ ಬಾಲಕಿಗೆ ಜಾತಿ ನಿಂದನೆ ಮಾಡುವುದಲ್ಲದೆ, ಥಳಿಸಿ ಶಾಲೆಯಿಂದ ಹೊರಹಾಕಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಆರೋಪಿಯನ್ನು ಮನೋಜ್ ಕುಮಾರ್ ದುಬೆ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದರು.

ಆರೋಪಿಯು ಅಧಿಕಾರಿಯೂ ಅಲ್ಲ, ಶಿಕ್ಷಕನೂ ಅಲ್ಲ. ಆದರೂ ಪ್ರತಿದಿನ ಶಾಲೆಗೆ ಹೋಗಿ ಶಿಕ್ಷಕರು ಮತ್ತು ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು. ಮನೋಜ್ ಕುಮಾರ್ ದುಬೆ ಅವರು ಸೋಮವಾರ ಸರ್ಕಾರಿ ಶಾಲೆಯ 8 ನೇ ತರಗತಿ ವಿದ್ಯಾರ್ಥಿನಿಯನ್ನು ಸಮವಸ್ತ್ರ ಧರಿಸದ ಬಗ್ಗೆ ಪ್ರಶ್ನಿಸಿದ್ದಾರೆ ಎಂದು ಚೌರಿ ಪೊಲೀಸ್ ಠಾಣೆ ಪ್ರಭಾರಿ ಗಿರಿಜಾ ಶಂಕರ್ ಯಾದವ್ ತಿಳಿಸಿದ್ದಾರೆ.

ಇದಕ್ಕೆ ಬಾಲಕಿ, ತನ್ನ ತಂದೆ ತನಗಾಗಿ ಖರೀದಿಸಿದಾಗ ಧರಿಸುವುದಾಗಿ ಉತ್ತರಿಸಿದ್ದಾಳೆ. ಇದನ್ನು ಕೇಳಿದ ಮನೋಜ್ ಕುಮಾರ್ ದುಬೆ, ಬಾಲಕಿಯನ್ನು ಥಳಿಸಿ, ಆಕೆಯ ವಿರುದ್ಧ ಜಾತಿ ನಿಂದನೆ ಮಾಡಿ ಶಾಲೆಯಿಂದ ಹೊರಹಾಕಿದ್ದಾನೆ ಎಂದು ಅವರು ಹೇಳಿದರು.

ಬಾಲಕಿಯ ತಾಯಿ ನೀಡಿರುವ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಹಲ್ಲೆ, ಬೆದರಿಕೆ ಮತ್ತು ಪರಿಶಿಷ್ಟ ಜಾತಿ, ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಗಿರಿಜಾ ಶಂಕರ್ ಯಾದವ್ ತಿಳಿಸಿದ್ದಾರೆ.

ಸದ್ಯ ತಲೆಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸಲು ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com