ರಾಂಚಿ: ಜಾರ್ಖಂಡ್ ರಾಜಕೀಯ ಬಿಕ್ಕಟ್ಟು ಮುಂದುವರೆದಿರುವಂತೆಯೇ ಯೂ ಟರ್ನ್ ಹೊಡೆದಿರುವ ಯುಪಿಎ ಶಾಸಕರು ಗೆಸ್ಟ್ ಹೌಸ್ ನಿಂದ ರಾಂಚಿಯತ್ತ ಧಾವಿಸಿದ್ದಾರೆ.
ಹೌದು.. ಹೇಮಂತ್ ಸೊರೇನ್ ರ ಶಾಸಕತ್ವ ಅನರ್ಹತೆ ಕುರಿತ ಚುನಾವಣಾ ಆಯೋಗದ ಶಿಫಾರಸ್ಸಿನ ನಡುವೆಯೇ ಜಾರ್ಖಂಡ್ ನಲ್ಲಿ ಭುಗಿಲೆದ್ದಿರುವ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ಲತ್ರಾಟು ಗೆಸ್ಟ್ ಹೌಸ್ ಗೆ ತೆರಳಿದ್ದ ಶಾಸಕರು ಇದೀಗ ರಾಂಚಿಗೆ ವಾಪಸ್ ಆಗಿದ್ದಾರೆ. ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್ ಮತ್ತು ಆರ್‌ಜೆಡಿ ಶಾಸಕರು ಮಧ್ಯಾಹ್ನ ಮೂರು ಬಸ್‌ಗಳಲ್ಲಿ ರಾಜ್ಯ ರಾಜಧಾನಿಯಿಂದ ಹೊರಟು ಇಲ್ಲಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಖುಂಟಿ ಜಿಲ್ಲೆಯ ಲಟ್ರಾಟು ಎಂಬಲ್ಲಿ ಕೆಲವು ಗಂಟೆಗಳ ಕಾಲ ಕಳೆದ ನಂತರ ರಾಂಚಿಗೆ ಮರಳಿದ್ದಾರೆ.
"ನಾವು ಮೋಜು ತುಂಬಿದ ದೋಣಿ ವಿಹಾರ ಮತ್ತು ಪಿಕ್ನಿಕ್ ಮಾಡಿದ್ದೇವೆ" ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ಶಾಸಕರು ಲಗೇಜ್ ಸಮೇತ ಸಭೆಗಾಗಿ ಮುಖ್ಯಮಂತ್ರಿಗಳ ನಿವಾಸಕ್ಕೆ ಆಗಮಿಸಿದ ಕಾರಣ ಅವರು ಪಶ್ಚಿಮ ಬಂಗಾಳ ಅಥವಾ ಛತ್ತೀಸ್‌ಗಢದಂತಹ ಬಿಜೆಪಿಯೇತರ ಸರ್ಕಾರವಿರುವ ರಾಜ್ಯದಲ್ಲಿ ಬಹಿರಂಗಪಡಿಸದ ತಾಣಕ್ಕೆ ಹೋಗುತ್ತಾರೆ ಎಂಬ ಊಹಾಪೋಹಗಳು ಈ ಹಿಂದೆ ಹರಡಿದ್ದವು. 'ಮಹಾರಾಷ್ಟ್ರದ ರೀತಿಯಲ್ಲಿ' ಸರ್ಕಾರವನ್ನು ಉರುಳಿಸುವ ಪ್ರಯತ್ನದಲ್ಲಿ ಬಿಜೆಪಿಯು ತನ್ನ ಮತ್ತು ಕಾಂಗ್ರೆಸ್‌ನ ಶಾಸಕರನ್ನು ಆಪರೇಷನ್ ಕಮಲ ಮಾಡಲು ಗಂಭೀರ ಪ್ರಯತ್ನ ನಡೆಸಬಹುದು ಮತ್ತು 'ಸುರಕ್ಷಿತ ಜಾಗ'ದಲ್ಲಿ ಶಾಸಕರನ್ನು ಇಡುವ ಅಗತ್ಯವಿದೆ ಎಂದು ಸೊರೆನ್‌ರ ಜೆಎಂಎಂ ಈ ಕ್ರಮ ಕೈಗೊಂಡಿದೆ ಎನ್ನಲಾಗಿತ್ತು.
ಆಡಳಿತಾರೂಢ ಮೈತ್ರಿಕೂಟದ ಶಾಸಕ ಬೆಂಬಲ ಉಳಿಸಿಕೊಳ್ಳಲು 'ರೆಸಾರ್ಟ್ ರಾಜಕೀಯ' ಇಂದಿನ ಅಗತ್ಯವಾಗಿದೆ ಎಂದು ಜೆಎಂಎಂ ಮೂಲಗಳು ಹಿಂದಿನ ದಿನ ತಿಳಿಸಿತ್ತು. ಲಾಭದ ಕಚೇರಿ ಪ್ರಕರಣದಲ್ಲಿ ಸೊರೆನ್ ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸುವಂತೆ ಕೋರಿ ಬಿಜೆಪಿ ಸಲ್ಲಿಸಿದ ಅರ್ಜಿಯ ನಂತರ, ಚುನಾವಣಾ ಆಯೋಗವು ಆಗಸ್ಟ್ 25 ರಂದು ತನ್ನ ನಿರ್ಧಾರವನ್ನು ರಾಜ್ಯ ರಾಜ್ಯಪಾಲ ರಮೇಶ್ ಬೈಸ್‌ಗೆ ಕಳುಹಿಸಿತ್ತು. ಚುನಾವಣಾ ಆಯೋಗದ ನಿರ್ಧಾರವನ್ನು ಇನ್ನೂ ಅಧಿಕೃತಗೊಳಿಸಲಾಗಿಲ್ಲವಾದರೂ, ಈ ಬಗ್ಗೆ ವ್ಯಾಪಕ ಚರ್ಚೆ ಎದ್ದಿದೆ. ಚುನಾವಣಾ ಸಮಿತಿಯು ಮುಖ್ಯಮಂತ್ರಿ ಸೊರೇನ್ ರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಶಿಫಾರಸು ಮಾಡಿದೆ. ಈ ಕುರಿತು ಸೋಮವಾರ ರಾಜ್ಯಪಾಲರು ಕರೆ ನೀಡಲಿದ್ದಾರೆ ಎಂದು ರಾಜಭವನದ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಜಾರ್ಖಂಡ್ ಉಸ್ತುವಾರಿ ಅವಿನಾಶ್ ಪಾಂಡೆ ಇಲ್ಲಿಗೆ ಆಗಮಿಸಿದ್ದು, ಪಕ್ಷದ ಶಾಸಕರೊಂದಿಗೆ ಸಭೆ ನಡೆಸಿ ಪರಿಸ್ಥಿತಿಯನ್ನು ಚರ್ಚಿಸಲು ಮತ್ತು ಕಾರ್ಯತಂತ್ರವನ್ನು ಯೋಜಿಸಿದ್ದಾರೆ. ರಾಂಚಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಂಡೆ, "ಸರ್ಕಾರವನ್ನು ಅಸ್ಥಿರಗೊಳಿಸಲು ಎದುರಾಳಿ ಪ್ರಯತ್ನಿಸುತ್ತಿರುವ ರೀತಿ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ, ನಾವು ಚರ್ಚಿಸಿ ಪರಿಸ್ಥಿತಿಯನ್ನು ಅವಲೋಕಿಸಿ ಕಾರ್ಯತಂತ್ರವನ್ನು ರೂಪಿಸುತ್ತೇವೆ. ಚುನಾವಣಾ ಆಯೋಗದ ವರದಿಯ ಮೇಲೆ, "ಇದುವರೆಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ, ಆದ್ದರಿಂದ ಈ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ಯುಪಿಎ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ ಎಂದು ಹೇಳಿದರು.
ನಂತರ ಕಾಂಗ್ರೆಸ್ ಸಭೆ ನಡೆಸಿ ಸೊರೇನ್ ಸರ್ಕಾರದ ಪರ ನಿಲ್ಲಲು ನಿಲುವು ತಳೆದಿದ್ದು, ಈ ಬಗ್ಗೆ ಮಾತನಾಡಿದ್ದ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ರಾಜೇಶ್ ಠಾಕೂರ್, ಪಕ್ಷವು ಹೇಮಂತ್ ಸೊರೇನ್ ಸರ್ಕಾರದ ಪರವಾಗಿ ನಿಲ್ಲುತ್ತದೆ ಎಂದು ಹೇಳಿದರು.
ಅತಿದೊಡ್ಡ ಪಕ್ಷವಾದ ಜೆಎಂಎಂ 30 ಶಾಸಕರನ್ನು ಹೊಂದಿದ್ದು, ಕಾಂಗ್ರೆಸ್ 18 ಶಾಸಕರನ್ನು ಮತ್ತು ಆರ್‌ಜೆಡಿ ಒಂದು ಶಾಸಕರನ್ನು ಹೊಂದಿದೆ. ಸದನದಲ್ಲಿ ಪ್ರಮುಖ ಪ್ರತಿಪಕ್ಷ ಬಿಜೆಪಿ 26 ಶಾಸಕರನ್ನು ಹೊಂದಿದೆ.
Advertisement