ಅಕ್ರಮ ಗಣಿಗಾರಿಕೆ: ಜಾರ್ಖಂಡ್ ಸಿಎಂಗೆ ಅನರ್ಹತೆ ಭೀತಿ; ರಾಜ್ಯಪಾಲರಿಗೆ ಚು.ಆಯೋಗ ಶಿಫಾರಸು 'ಬಿಜೆಪಿ ರಚಿತ' ಎಂದ ಸೊರೇನ್

ಜಾರ್ಖಂಡ್ ನಲ್ಲಿ ದಿಢೀರ್ ರಾಜಕೀಯ ಹೈಡ್ರಾಮಾ ನಡೆಯುತ್ತಿದ್ದು, ಅಕ್ರಮ ಗಣಿಗಾರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಅನರ್ಹತೆ ಭೀತಿ ಎದುರಿಸುತ್ತಿದ್ದಾರೆ.
ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್
ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್

ರಾಂಚಿ: ಜಾರ್ಖಂಡ್ ನಲ್ಲಿ ದಿಢೀರ್ ರಾಜಕೀಯ ಹೈಡ್ರಾಮಾ ನಡೆಯುತ್ತಿದ್ದು, ಅಕ್ರಮ ಗಣಿಗಾರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಅನರ್ಹತೆ ಭೀತಿ ಎದುರಿಸುತ್ತಿದ್ದಾರೆ.

ಭ್ರಷ್ಟಾಚಾರ ಸೇರಿದಂತೆ ಹಲವು ಆರೋಪ ಎದುರಿಸುತ್ತಿರುವ ಜಾರ್ಖಂಡ್ ರಾಜ್ಯದ ಮುಖ್ಯಮಂತ್ರಿ ಹೇಮಂತ್ ಸೊರೆನ್ (Jharkhand CM Hemant Soren) ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಕೇಂದ್ರ ಚುನಾವಣಾ ಆಯೋಗ ಶಿಫಾರಸು ಮಾಡಿದೆ ಎನ್ನಲಾಗಿದೆ. ಈ ಕುರಿತು ಹಲವು ಮಾಧ್ಯಮಗಳು ವರದಿ ಮಾಡಿದ್ದು, ಈ ಕುರಿತು ಚುನಾವಣಾ ಆಯೋಗ ಮಾತ್ರ ಅಧಿಕೃತ ಹೇಳಿಕೆ ನೀಡಿಲ್ಲ.

ಗಣಿಗಾರಿಕೆ ಸೇರಿದಂತೆ ಹಲವು ಮಹತ್ವದ ಖಾತೆಗಳನ್ನು ತಮ್ಮೊಳಗೆ ಉಳಿಸಿಕೊಂಡಿರುವ ಹೇಮಂತ್ ಸೊರೆನ್ ಅಕ್ರಮ ನಡೆಸಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ನಾಯಕರು ಈ ಹಿಂದೆ ರಾಜ್ಯಪಾಲರಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ರಾಜ್ಯಪಾಲರು ಪತ್ರ ಬರೆದಿದ್ದರು. ಈ ಪತ್ರ ಆಧರಿಸಿ ಹಲವು ಅಂಶಗಳನ್ನು ಪರಿಶೀಲಿಸಿದ ಚುನಾವಣಾ ಆಯೋಗವು ಮುಖ್ಯಮಂತ್ರಿಯನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿದೆ ಎನ್ನಲಾಗಿದೆ.

ಏನಿದು ಪ್ರಕರಣ?
ಬಿಜೆಪಿ ಸಲ್ಲಿಸಿದ್ದ ದೂರಿನ ಬಗ್ಗೆ ರಾಜ್ಯಪಾಲರು ಚುನಾವಣಾ ಆಯೋಗದ ಅಭಿಪ್ರಾಯ ಕೇಳಿದ್ದರು. ತಮ್ಮ ಹೆಸರಿನ ಕಂಪನಿಗೆ ಕಲ್ಲುಗಣಿಗಾರಿಕೆ ಲೈಸೆನ್ಸ್​ ಪಡೆದುಕೊಳ್ಳುವ ಮೂಲಕ ‘ಲಾಭದಾಯಕ ಹುದ್ದೆ’ ಹೊಂದಿರುವ ಅವರು ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಘಿಸಿದ್ದಾರೆ ಎಂದು ಬಿಜೆಪಿಯ ಜಾರ್ಖಂಡ್ ರಾಜ್ಯ ಘಟಕದ ಅಧ್ಯಕ್ಷರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು. ಚುನಾವಣಾ ಆಯೋಗದಿಂದ ಅನರ್ಹತೆಯ ಬಗ್ಗೆ ಶಿಫಾರಸು ಬಂದಿರುವುದನ್ನು ಜಾರ್ಖಂಡ್​ ಸರ್ಕಾರದ ಉನ್ನತ ಮೂಲಗಳು ದೃಢಪಡಿಸಿವೆ. ರಾಜ್ಯಪಾಲರು ಈ ಬಗ್ಗೆ ಏನು ತೀರ್ಮಾನ ತೆಗೆದುಕೊಂಡಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ರಾಜ್ಯಪಾಲರ ಕಚೇರಿಯಲ್ಲಿ ಅಗತ್ಯ ವಿಧಿವಿಧಾನಗಳು ಪೂರ್ಣಗೊಂಡ ನಂತರವೇ ಈ ಕುರಿತು ಮಾಹಿತಿ ಅಧಿಕೃತವಾಗಿ ಹೊರಬೀಳಲಿದೆ.

ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿರುವ ರಾಜ್ಯಪಾಲ ರಮೇಶ್ ಬಿಯಾಸ್, ಇಂದು ಜಾರ್ಖಂಡ್ ರಾಜಧಾನಿ ರಾಂಚಿಗೆ ಮರಳಲಿದ್ದಾರೆ. ಜಾರ್ಖಂಡ್​ನ ಆಡಳಿತಾರೂಢ ಯುಪಿಎ ಮೈತ್ರಿಕೂಟವು ಚುನಾವಣಾ ಆಯೋಗದ ಶಿಫಾರಸಿಗಾಗಿ ಕಾತರದಿಂದ ಕಾಯುತ್ತಿತ್ತು. ಪ್ರತಿಪಕ್ಷ ಬಿಜೆಪಿಯು ಮುಂದಿನ ಸಿದ್ಧತೆಯನ್ನು ಅದಾಗಲೇ ಆರಂಭಿಸಿದ್ದು, ಯುಪಿಎ ವಿರುದ್ಧ ಅಭಿಯಾನ ನಡೆಸಲು ಮುಂದಾಗಿದೆ.

'ಬಿಜೆಪಿ ರಚಿತ' ಎಂದ ಸಿಎಂ ಸೊರೇನ್
ಇದೇ ವೇಳೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಹೇಮಂತ್ ಸೊರೇನ್, 'ಚುನಾವಣಾ ಆಯೋಗದಿಂದ ತಮಗೆ ಯಾವುದೇ ರೀತಿಯ ಮಾಹಿತಿ ಬಂದಿಲ್ಲ. ಆದರೆ ಈ ಬಗ್ಗೆ ಹಲವಾರು ಮಾಧ್ಯಮ ವರದಿಗಳು ಮತ್ತು ಬಿಜೆಪಿಯ ಹೇಳಿಕೆಗಳನ್ನು ನೋಡಿದಾಗ ಇದು ಬಿಜೆಪಿ ರಚಿತ ಪಿತೂರಿ ಎನಿಸುತ್ತಿದೆ. ನನ್ನ ಶಾಸಕ ಸ್ಥಾನವನ್ನು ಅನರ್ಹತೆಗೊಳಿಸಲು ಶಿಫಾರಸು ಮಾಡಿದ್ದಾರೆ. ಬಿಜೆಪಿ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದ್ದಾರೆ.

ಇನ್ನು ಇದೇ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಸರ್ಕಾರದ ಕಿರಿಯ ಪಾಲುದಾರ ಕಾಂಗ್ರೆಸ್, ಯಾವುದೇ ಸಂದರ್ಭದಲ್ಲಿ ಮೈತ್ರಿಗೆ ಸಂಖ್ಯಾಬಲವಿದೆ ಎಂದು ಹೇಳಿದೆ. ನಾನು ಸಿಎಂ ಅವರನ್ನು ಭೇಟಿ ಮಾಡಿದ್ದೇನೆ, ಅವರು ಮೊಹರು ಮಾಡಿದ ವರದಿಯ ಬಗ್ಗೆ ನನಗೆ ಇನ್ನೂ ಯಾವುದೇ ಸಂವಹನ ಸಿಕ್ಕಿಲ್ಲ. ರಾಜ್ಯಪಾಲರು ನಿರ್ಧರಿಸಲಿ. ನಾವು ನಮ್ಮ ಕಾರ್ಯತಂತ್ರದ ಮೇಲೆ ಕೆಲಸ ಮಾಡುತ್ತಿದ್ದೇವೆ" ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಅಲಂಗೀರ್ ಆಲಂ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com