ಸಿಎಂ ಕೇಜ್ರಿವಾಲ್ ನಿವಾಸದಲ್ಲಿ ಮಹತ್ವದ ಸಭೆ: 62 ಶಾಸಕರ ಪೈಕಿ 53 ಮಂದಿ ಭಾಗಿ, 'ಆಪರೇಷನ್ ಕಮಲ' ಆರೋಪ ನಿರಾಕರಿಸಿದ ಬಿಜೆಪಿ

ಆಮ್ ಆದ್ಮಿ ಪಕ್ಷದಲ್ಲಿ ಆಪರೇಷನ್ ಕಮಲ ನಡೆಯುತ್ತಿದೆಯೇ ಎಂಬ ಊಹಾಪೋಹಗಳ ಮಧ್ಯೆ ಇಂದು ಗುರುವಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಒಟ್ಟು 62 ಶಾಸಕರ ಪೈಕಿ 53 ಶಾಸಕರು ಭಾಗಿಯಾಗಿದ್ದಾರೆ. 
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ನವದೆಹಲಿ: ಆಮ್ ಆದ್ಮಿ ಪಕ್ಷದಲ್ಲಿ ಆಪರೇಷನ್ ಕಮಲ ನಡೆಯುತ್ತಿದೆಯೇ ಎಂಬ ಊಹಾಪೋಹಗಳ ಮಧ್ಯೆ ಇಂದು ಗುರುವಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಒಟ್ಟು 62 ಶಾಸಕರ ಪೈಕಿ 53 ಶಾಸಕರು ಭಾಗಿಯಾಗಿದ್ದಾರೆ. 

ಇದಕ್ಕೂ ಮುನ್ನ 12 ಆಪ್ ಶಾಸಕರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅವರು ಎಲ್ಲಿದ್ದಾರೆ ಎಂಬ ಸುಳಿವು ಕೂಡ ಇರಲಿಲ್ಲ, ಹೀಗಾಗಿ ಅವರನ್ನು ಸೆಳೆಯಲು ಬಿಜೆಪಿ ಪ್ರಯತ್ನ ಮಾಡುತ್ತಿದೆಯೇ ಎಂಬ ಸಂದೇಹ ದಟ್ಟವಾಗಿತ್ತು. ಇಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ನಿವಾಸದಲ್ಲಿ ಆಪ್ ಶಾಸಕರ ಮಹತ್ವದ ಸಭೆ ಕರೆದಿದ್ದರು. ಬಿಜೆಪಿ ಆಪ್ ಶಾಸಕರನ್ನು ಸೆಳೆಯುವ ಯತ್ನ ಬಗ್ಗೆ ಚರ್ಚಿಸಲು ಕರೆದಿರುವ ಮಹತ್ವದ ಸಭೆ ಇದಾಗಿತ್ತು.

ಬೆಳಗ್ಗೆ 11 ಗಂಟೆಗೆ ಆರಂಭವಾದ ಸಭೆ ಕೆಲವೇ ನಿಮಿಷಗಳಲ್ಲಿ ಮುಗಿದುಹೋಗಿದೆ, ಸಭೆಯಲ್ಲಿ 53 ಶಾಸಕರು ಭಾಗಿಯಾಗಿದ್ದಾರೆ. ಕೆಲವು ಶಾಸಕರು ಸಂಚಾರದಟ್ಟಣೆಯಲ್ಲಿ ಸಿಕ್ಕಿಹಾಕಿಕೊಂಡಿರಬಹುದು, ಹಾಗಾಗಿ ಬಹುಶಃ ಅವರು ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲದಿರಬಹುದು. ಆದರೆ ದೆಹಲಿ ಆಪ್ ಸರ್ಕಾರ ಬಿದ್ದುಹೋಗುವುದಿಲ್ಲ. ಎಲ್ಲಾ ಶಾಸಕರು ಸಭೆಗೆ ಬರುತ್ತಾರೆ ಎಂದು ಆಪ್ ಹಿರಿಯ ನಾಯಕ ಸೌರಭ್ ಭಾರದ್ವಾಜ್ ಮುಖ್ಯಮಂತ್ರಿ ಕೇಜ್ರಿವಾಲ್ ನಿವಾಸದ ಹೊರಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಯಾರೆಲ್ಲಾ ಇಂದಿನ ಸಭೆಗೆ ಗೈರಾಗಿದ್ದಾರೆ ಎಂದು ಕೇಳಿದ್ದಕ್ಕೆ ಆಪ್ ನಾಯಕರು ಸದ್ಯಕ್ಕೆ ಹೆಸರು ಹೇಳಲು ನಿರಾಕರಿಸಿದ್ದಾರೆ. ನಿನ್ನೆ ನಾಲ್ವರು ಆಪ್ ಶಾಸಕರು ತಮ್ಮನ್ನು ಬಿಜೆಪಿ ನಾಯಕರು ದೊಡ್ಡ ಅವಕಾಶದೊಂದಿಗೆ ಸಂಪರ್ಕಿಸಿದ್ದಾರೆ ಎಂದು ಹೇಳಿಕೊಂಡಿದ್ದರು. ಇನ್ನು ಕೇಜ್ರಿವಾಲ್ ನೇತೃತ್ವದ ಸರ್ಕಾರದಲ್ಲಿನ 20-25 ಶಾಸಕರೊಂದಿಗೆ ಬಿಜೆಪಿ ಸಂಪರ್ಕದಲ್ಲಿದೆ ಎಂದು ಹೇಳಲಾಗುತ್ತಿದೆ.

ಸಿಬಿಐ, ಇಡಿ ತನಿಖೆಗಳು, ತನ್ನ ಸಚಿವರನ್ನು ಗುರಿಯಾಗಿಸಿಕೊಂಡು ಭಾರತೀಯ ಜನತಾ ಪಕ್ಷ ಪ್ರೇರಿತ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಆಪ್ ನಾಳೆ ದೆಹಲಿ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆದಿದೆ. ಈ ಮಧ್ಯೆ, ಪಕ್ಷ ಬದಲಾಯಿಸುವ ಪ್ರಸ್ತಾಪದೊಂದಿಗೆ ತನ್ನ ಶಾಸಕರನ್ನು ಸಂಪರ್ಕಿಸಿದವರ ಹೆಸರನ್ನು ಬಹಿರಂಗಪಡಿಸುವಂತೆ ಎಎಪಿಗೆ ಬಿಜೆಪಿ ಸವಾಲು ಹಾಕಿದೆ. ಕೇಜ್ರಿವಾಲ್ ನೇತೃತ್ವದ ಪಕ್ಷವು ದೆಹಲಿ ಸರ್ಕಾರದ ಮದ್ಯ "ಹಗರಣ"ದಿಂದ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ, ಇದಕ್ಕಾಗಿ ಬಿಜೆಪಿಯನ್ನು ಸುಖಾಸುಮ್ಮನೆ ಎಳೆದುತರುತ್ತಿದೆ. ಇದು ಕೇಜ್ರಿವಾಲ್ ಸರ್ಕಾರದ ಪ್ರಚಾರ ತಂತ್ರವಷ್ಟೆ ಎಂದು ಕೇಸರಿ ಪಕ್ಷ ಆರೋಪಿಸಿದೆ. 

ಬಿಜೆಪಿ ಸಂಸದ ಮನೋಜ್ ತಿವಾರಿ, ಆಪ್ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ. ದೆಹಲಿ ಅಬಕಾರಿ ನೀತಿ ವಿವಾದ ಬಗ್ಗೆ ಮುಖ್ಯಮಂತ್ರಿ ಕೇಜ್ರಿವಾಲ್ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದೆ. 

ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳ ಆರೋಪದ ಮೇಲೆ ಎಎಪಿ ಸರ್ಕಾರವನ್ನು ಕಾಂಗ್ರೆಸ್ ಟೀಕಿಸಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಭ್ರಷ್ಟಾಚಾರದಲ್ಲಿ ಇಬ್ಬರಿಗೂ ಭಾರತ ರತ್ನ ಸಿಗಬೇಕು ಎಂದು ಟೀಕಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com