ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಪರಿಸ್ಥಿತಿ ಚಿಂತಾಜನಕ; ನಿರ್ಣಯ ಕೈಗೊಳ್ಳುವ ಸಮಯ ಬಂದಿದೆ: ಶರದ್ ಪವಾರ್

ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ನಡುವಿನ ಗಡಿಕ್ಯಾತೆ ಉಲ್ಬಣಗೊಂಡಿರುವ ಹೊತ್ತಿನಲ್ಲೇ ಮಹಾರಾಷ್ಟ್ರದ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಗಡಿಯಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದ್ದು, ನಿಲುವು ತೆಗೆದುಕೊಳ್ಳುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಶರದ್ ಪವಾರ್
ಶರದ್ ಪವಾರ್
Updated on

ಮುಂಬೈ: ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ನಡುವಿನ ಗಡಿಕ್ಯಾತೆ ಉಲ್ಬಣಗೊಂಡಿರುವ ಹೊತ್ತಿನಲ್ಲೇ ಮಹಾರಾಷ್ಟ್ರದ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಗಡಿಯಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದ್ದು, ನಿಲುವು ತೆಗೆದುಕೊಳ್ಳುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಮಂಗಳವಾರ ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿ ಪ್ರದೇಶಗಳಲ್ಲಿನ ಪರಿಸ್ಥಿತಿ ಕುರಿತು ಮಾತನಾಡಿದ್ದು, ಗಡಿಯಲ್ಲಿ ಪರಿಸ್ಥಿತಿ "ಚಿಂತಾಜನಕ"ವಾಗಿದ್ದು, ಅಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿದ ನಂತರ ನಿಲುವು ತೆಗೆದುಕೊಳ್ಳುವ ಸಮಯ ಬಂದಿದೆ ಎಂದು ಹೇಳಿದರು.

ಕರ್ನಾಟಕದೊಂದಿಗೆ ರಾಜ್ಯದ ಗಡಿ ವಿವಾದವನ್ನು ಸಮನ್ವಯಗೊಳಿಸಲು ನೇಮಕಗೊಂಡಿರುವ ಮಹಾರಾಷ್ಟ್ರ ಸಚಿವರಾದ ಚಂದ್ರಕಾಂತ್ ಪಾಟೀಲ್ ಮತ್ತು ಶಂಭುರಾಜ್ ದೇಸಾಯಿ ಅವರು ಮಂಗಳವಾರ ದಕ್ಷಿಣ ರಾಜ್ಯದ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಕಾರ್ಯಕರ್ತರನ್ನು ಭೇಟಿ ಮಾಡಿ ದಶಕಗಳ ಹಿಂದಿನ ಗಡಿ ಸಮಸ್ಯೆಯ ಕುರಿತು ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿತ್ತು. ಆದರೆ ಬೆಳಗಾವಿಗೆ ಬಂದರೆ ಪರಿಸ್ಥಿತಿ ಬಿಗಡಾಯಿಸುತ್ತದೆ ಎಂಬ ರಾಜ್ಯಸರ್ಕಾರದ ಎಚ್ಚರಿಕೆ ಬಳಿಕ ಸಚಿವರು ತಮ್ಮ ಭೇಟಿಯನ್ನು ಮುಂದೂಡಿದ್ದಾರೆ ಎನ್ನಲಾಗಿದೆ. 

ಅಲ್ಲದೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ತಮ್ಮ ಸಂಪುಟ ಸಹೋದ್ಯೋಗಿಗಳನ್ನು ಬೆಳಗಾವಿಗೆ ಕಳುಹಿಸದಂತೆ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಕೇಳಿಕೊಳ್ಳುವುದಾಗಿ ಹೇಳಿದ್ದಾರೆ, ಏಕೆಂದರೆ ಅವರ ಭೇಟಿಯಿಂದ ಗಡಿ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಯಾಗಬಹುದು ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಮಹಾರಾಷ್ಟ್ರದೊಂದಿಗಿನ ಗಡಿ ವಿವಾದ ಇತ್ಯರ್ಥವಾಗಿದೆ ಎಂದು ಪ್ರತಿಪಾದಿಸಿದ ಸಿಎಂ, ಸಚಿವರು ಭೇಟಿಗೆ ಮುಂದಾದರೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದು, ಯಾವುದೇ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಹಿಂಜರಿಯುವುದಿಲ್ಲ ಎಂದು ಹೇಳಿದರು.

ಏತನ್ಮಧ್ಯೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎನ್ ಸಿಪಿ ಮುಖ್ಯಸ್ಥ ಪವಾರ್, ಕಳೆದ ಕೆಲವು ವಾರಗಳಿಂದ ಕರ್ನಾಟಕದ ಸಿಎಂ ಬೊಮ್ಮಾಯಿ ಪರಿಸ್ಥಿತಿಯನ್ನು ಬೇರೆ ದಿಕ್ಕಿಗೆ ಕೊಂಡೊಯ್ಯಲು ಪ್ರಜ್ಞಾಪೂರ್ವಕ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಗಡಿ ಪ್ರದೇಶಗಳಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿದ ನಂತರ ನಿಲುವು ತೆಗೆದುಕೊಳ್ಳುವ ಸಮಯ ಬಂದಿದೆ. ಅಲ್ಲಿನ ಪರಿಸ್ಥಿತಿ ಚಿಂತಾಜನಕವಾಗಿದೆ" ಎಂದು ಪವಾರ್ ಹೇಳಿದ್ದಾರೆ. 

ಮಹಾರಾಷ್ಟ್ರವು 1960 ರಲ್ಲಿ ಪ್ರಾರಂಭವಾದಾಗಿನಿಂದ, ಬೆಳಗಾವಿ ಜಿಲ್ಲೆ ಮತ್ತು ದಕ್ಷಿಣ ರಾಜ್ಯದ ನಿಯಂತ್ರಣದಲ್ಲಿರುವ ಇತರ 80 ಮರಾಠಿ ಮಾತನಾಡುವ ಹಳ್ಳಿಗಳ ಸ್ಥಾನಮಾನದ ಕುರಿತು ಕರ್ನಾಟಕದೊಂದಿಗೆ ವಿವಾದದಲ್ಲಿ ಸಿಲುಕಿಕೊಂಡಿದೆ. ವಿವಾದ ಸುಪ್ರೀಂ ಕೋರ್ಟ್‌ನಲ್ಲಿದ್ದು ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಮತ್ತೆ ಗಡಿ ವಿವಾದ ಭುಗಿಲೆದ್ದಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com