ಆಪ್ ಅಭ್ಯರ್ಥಿ ಬೋಬಿ
ಆಪ್ ಅಭ್ಯರ್ಥಿ ಬೋಬಿ

ದೆಹಲಿ ಮಹಾನಗರ ಪಾಲಿಕೆ ಚುನಾವಣೆ: ಗೆದ್ದು ದಾಖಲೆ ಬರೆದ ಮಂಗಳಮುಖಿ

ತೀವ್ರ ಕುತೂಹಲ ಕೆರಳಿರುವ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಮಂಗಳಮುಖಿ ಚುನಾವಣೆ ಗೆದ್ದು ದಾಖಲೆ ಬರೆದಿದ್ದಾರೆ.
Published on

ನವದೆಹಲಿ: ತೀವ್ರ ಕುತೂಹಲ ಕೆರಳಿರುವ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಮಂಗಳಮುಖಿ ಚುನಾವಣೆ ಗೆದ್ದು ದಾಖಲೆ ಬರೆದಿದ್ದಾರೆ.

ಹೌದು.. ದೆಹಲಿ ಮಹಾನಗರ ಪಾಲಿಕೆಯ ಸುಲ್ತಾನ್ ಪುರಿ ಮಜ್ರಾ ಎ ವಾರ್ಡ್ ನಿಂದ ಆಪ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬೋಬಿ ಜಯಭೇರಿ ಭಾರಿಸಿದ್ದಾರೆ. ಆ ಮೂಲಕ ಮೊದಲ ಬಾರಿಗೆ, MCD ಚುನಾವಣೆಯಲ್ಲಿ ಟ್ರಾನ್ಸ್ ಜೆಂಡರ್ ಸಮುದಾಯದ ಸದಸ್ಯರೊಬ್ಬರು ಪಾಲಿಕೆಗೆ ಆಯ್ಕೆಯಾಗಿ ಬಂದಿದ್ದಾರೆ.

ಬೋಬಿ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ವರುಣಾ ಢಾಕಾ ಅವರನ್ನು 6,714 ಮತಗಳ ಅಂತರದಿಂದ ಸೋಲಿಸಿದ್ದಾರೆ. ಪಕ್ಷವನ್ನು ಪ್ರತಿನಿಧಿಸಲು ಆಯ್ಕೆಯಾದ ನಂತರ, ತನ್ನ ಕ್ಷೇತ್ರವನ್ನು ಸುಂದರಗೊಳಿಸಲು ಮತ್ತು ತನ್ನ ನೆರೆಹೊರೆಯವರ ಜೀವನವನ್ನು ಸುಧಾರಿಸಲು ಬಯಸುವುದಾಗಿ ಬೋಬಿ ಹೇಳಿದ್ದರು. ಅಂತೆಯೇ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಯಿಂದ ಭ್ರಷ್ಟಾಚಾರವನ್ನು ತೊಡೆದುಹಾಕಲು ತಾನು ಕೆಲಸ ಮಾಡುತ್ತೇನೆ ಎಂದು ಬೋಬಿ ಪ್ರಮಾಣ ಮಾಡಿದ್ದರು. ಇದೀಗ ಅಭೂತಪೂರ್ವ ರೀತಿಯಲ್ಲಿ ಅವರು ಜಯಗಳಿಸಿದ್ದಾರೆ.

ಬುಧವಾರ ಪ್ರಕಟಲವಾಗುತ್ತಿರುವ ಪಾಲಿಕೆ ಚುನಾವಣೆಯ ಫಲಿತಾಂಶದಲ್ಲಿ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ 250 ವಾರ್ಡ್‌ಗಳ ಮತಗಳ ಎಣಿಕೆಯಲ್ಲಿ ಆಮ್ ಆದ್ಮಿ ಪಕ್ಷವು 125ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಈ ಹಿಂದೆ ನಡೆದ ಎಕ್ಸಿಟ್ ಪೋಲ್ ನಲ್ಲೂ ಇಂತಹುದೇ ಫಲಿತಾಂಶ ನಿರೀಕ್ಷಿಸಲಾಗಿತ್ತು. 

ಇತ್ತೀಚಿನ ವರದಿಗಳು ಬಂದಾಗ ದೆಹಲಿಯ 250 ವಾರ್ಡ್‌ಗಳ ಪೈಕಿ 133 ವಾರ್ಡ್ ಗಳಲ್ಲಿ ಎಎಪಿ ಮುನ್ನಡೆ ಸಾಧಿಸಿದೆ. ಆರಂಭದಲ್ಲೇ ನೋಡಿದ ಟ್ರೆಂಡ್‌ಗಳಲ್ಲಿ ಹಲವು ಬಾರಿ ಎಎಪಿಯನ್ನು ಹಿಂದಿಕ್ಕಿದ ಬಿಜೆಪಿ ಈಗ 104 ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸಿದೆ. 149 ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು. ಈ ಪೈಕಿ ಎಎಪಿ 82, ಬಿಜೆಪಿ 62, ಕಾಂಗ್ರೆಸ್ 4, ಮತ್ತು ಒಂದು ಸ್ವತಂತ್ರ ಅಭ್ಯರ್ಥಿ ಗೆಲವು ಸಾಧಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com