
ಹೈದರಾಬಾದ್: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳದಿಂದ ಭಾನುವಾರ ತೆಲಂಗಾಣ ರಾಷ್ಟ್ರ ಸಮಿತಿ ಎಂಎಲ್‌ಸಿ ಕೆ. ಕವಿತಾ ಅವರನ್ನು ವಿಚಾರಣೆಗೆ ಒಳಪಡಿಸುವ ಗಂಟೆಗಳ ಮುನ್ನ ಅವರ ನಿವಾಸದ ಬಳಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಆಕೆಯ ನಿವಾಸದ ಬಳಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ ಮತ್ತು ಮನೆ ಹತ್ತಿರ ಯಾರೂ ತೆರಳಲು ಅವಕಾಶವಿಲ್ಲ.
ಟಿಆರ್‌ಎಸ್ ಮೂಲಗಳ ಪ್ರಕಾರ, ನಿವಾಸದಲ್ಲಿ ಅನಗತ್ಯವಾಗಿ ಸೇರದಂತೆ ಪಕ್ಷದ ಕಾರ್ಯಕರ್ತರಿಗೆ ಟಿಆರ್‌ಎಸ್ ಉನ್ನತ ನಾಯಕತ್ವ ಸೂಚನೆ ನೀಡಿದೆ. ನಾವು ತನಿಖಾ ಸಂಸ್ಥೆಯೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತೇವೆ ಎಂದು ಮೂಲಗಳು ತಿಳಿಸಿವೆ.
ಹೈದರಾಬಾದ್‌ನಲ್ಲಿರುವ ಕವಿತಾ ಅವರ ಬಂಜಾರಾ ಹಿಲ್ಸ್ ನಿವಾಸದಲ್ಲಿ ವಿಚಾರಣೆ ನಡೆಯಲಿದೆ.
ಟಿಆರ್‌ಎಸ್ ನಾಯಕಿಯನ್ನು ಸಿಬಿಐ ವಿಚಾರಣೆಗೆ ಒಳಪಡಿಸುವ ಒಂದು ದಿನದ ಮೊದಲು, ಹೈದರಾಬಾದ್‌ನಲ್ಲಿ 'ಹೋರಾಟಗಾರನ ಮಗಳು ಎಂದಿಗೂ ಹೆದರುವುದಿಲ್ಲ' ಎಂಬ ಘೋಷಣೆಯೊಂದಿಗೆ ಹಲವಾರು ಪೋಸ್ಟರ್‌ಗಳು ಕಂಡುಬಂದವು. 'ಕವಿತಕ್ಕನ ಜೊತೆ ನಾವಿದ್ದೇವೆ' ಎಂದು ಪೋಸ್ಟರ್‌ಗಳಲ್ಲಿ ಬರೆಯಲಾಗಿತ್ತು.
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 6 ರಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ, ತಾವು ಡಿಸೆಂಬರ್ 11 ರಂದು ಬೆಳಿಗ್ಗೆ 11 ಗಂಟೆಗೆ ತಮ್ಮ ನಿವಾಸದಲ್ಲಿ ವಿಚಾರಣೆಗೆ ಲಭ್ಯವಾಗಲಿದ್ದಾರೆ ಎಂದು ಹೇಳಿದರು
ಡಿಸೆಂಬರ್ 11 ರಂದು ಬೆಳಿಗ್ಗೆ 11 ಗಂಟೆಗೆ ಅವರ ನಿವಾಸಕ್ಕೆ ಭೇಟಿ ನೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಯನ್ನು ದಾಖಲಿಸಿಕೊಳ್ಳುವುದಾಗಿ ಸಿಬಿಐ ಅವರಿಗೆ ಪತ್ರ ಬರೆದ ನಂತರ ಕವಿತಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಡಿ. 6ರಂದು ವಿಚಾರಣೆಗೆ ಹಾಜರಾಗುವಂತೆ ಟಿಆರ್‌ಸಿ ಎಂಎಲ್‌ಸಿ ಆಗಿರುವ ಕೆ. ಕವಿತಾ ಅವರಿಗೆ ಸಿಬಿಐ ನೋಟಿಸ್ ಜಾರಿಗೊಳಿಸಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕವಿತಾ, ಪೂರ್ವನಿಯೋಜಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಡಿಸೆಂಬರ್ 6ರಂದು ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಡಿ. 11 ರಿಂದ 15 ದಿನಾಂಕಗಳ (13ನ್ನು ಹೊರತುಪಡಿಸಿ) ಪೈಕಿ ಸಿಬಿಐ ಅನುಕೂಲಕ್ಕೆ ತಕ್ಕಂತೆ ತಮ್ಮ ನಿವಾಸದಲ್ಲಿ ಭೇಟಿಗೆ ಸಿದ್ಧವಿರುವುದಾಗಿ ತಿಳಿಸಿದ್ದರು.
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪ್ರಕರಣದ ಆರೋಪಿಗಳಲ್ಲಿ ಒಬ್ಬರು. ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಸಿಬಿಐ ತನಿಖೆಗೆ ಶಿಫಾರಸು ಮಾಡಿದ ನಂತರ ದೆಹಲಿ ಸರ್ಕಾರದ ಹೊಸ ಅಬಕಾರಿ ನೀತಿಯನ್ನು ರದ್ದುಗೊಳಿಸಲಾಯಿತು.
Advertisement