ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆಗೆ ದರ ನಿಗದಿ: ಒಂದು ಡೋಸ್ಗೆ 800 ರೂಪಾಯಿ!
ನವದೆಹಲಿ: ವಿಶ್ವದ ಮೊದಲ ಇಂಟ್ರಾನಾಸಲ್ ಕೋವಿಡ್ ಲಸಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಭಾರತ್ ಬಯೋಟೆಕ್ ಸಂಸ್ಥೆಯ iNCOVACC ಅಥವಾ BBV154 ಕೋವಿಡ್ ಲಸಿಕೆಗೆ ದರ ನಿಗದಿ ಮಾಡಲಾಗಿದ್ದು, ಪ್ರತೀ ಡೋಸ್ಗೆ 800 ರೂಪಾಯಿ ನಿಗದಿ ಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಭಾರತ್ ಬಯೋಟೆಕ್ ಈ ಲಸಿಕೆಯನ್ನು ವಾಷಿಂಗ್ಟನ್ ಯೂನಿವರ್ಸಿಟಿ ಸೇಂಟ್ ಲೂಯಿಸ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿಗದ್ದು, ವಿಶ್ವದ ಮೊದಲ ಇಂಟ್ರಾನಾಸಲ್ ಕೋವಿಡ್ ಲಸಿಕೆ ಎಂಬ ಹೆಗ್ಗಳಿಕೆಗೆ iNCOVACC ಅಥವಾ BBV154 ಲಸಿಕೆಯು ಪಾತ್ರವಾಗಿದೆ. ಮೂಗಿನ ಮೂಲಕ ಎರಡು ಹನಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಇದು ಇಂಜೆಕ್ಟ್ ಮಾಡುವ ಲಸಿಕೆಗಿಂತಲೂ ಸುರಕ್ಷಿತ ಎನ್ನಲಾಗಿದೆ.
ಈ ಇಂಟ್ರಾನಾಸಲ್ ಲಸಿಕೆಯ ಒಂದು ಡೋಸ್ಗೆ ಖಾಸಗಿ ಆಸ್ಪತ್ರೆಗಳಲ್ಲಿ 800 ರೂಪಾಯಿ (+ ಶೇ.5ರಷ್ಟು ಜಿಎಸ್ಟಿ ಸೇರಿ ಒಂದು ಡೋಸ್ಗೆ 840 ರೂ.) ಇರಲಿದೆ. ಈ ಲಸಿಕೆ ಸದ್ಯ ಡಿಸೆಂಬರ್ 23ರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಾಗುತ್ತಿದೆ. ಮುಂಬರುವ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲೂ ಲಭ್ಯವಾಗಲಿದ್ದು, ಇಲ್ಲಿ ಬೆಲೆ ಒಂದು ಡೋಸ್ಗೆ 325 ರೂಪಾಯಿ ಇರಲಿದೆ ಎಂದು ಹೇಳಲಾಗಿದೆ.
ಇಲ್ಲಿ ಖಾಸಗಿ ಆಸ್ಪತ್ರೆಗಳು ಲಸಿಕೀಕರಣದ ನಿರ್ವಹಣಾ ವೆಚ್ಚವನ್ನಾಗಿ 150 ರೂಪಾಯಿ ಶುಲ್ಕವನ್ನು ಜನಸಾಮಾನ್ಯರಿಗೆ ವಿಧಿಸಬಹುದಾಗಿದೆ. ಹೀಗೆ ಎಲ್ಲ ಸೇರಿಸಿದರೆ ಈ ಇಂಟ್ರಾನಾಸಲ್ ಕೊವಿಡ್ 19 ಲಸಿಕೆಯ ಒಂದು ಡೋಸ್ ಪಡೆಯಲು ಸುಮಾರು 1000 ರೂಪಾಯಿ ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ.
ವಿಶ್ವದ ಮೊದಲ ಇಂಟ್ರಾನಾಸಲ್ ಕೋವಿಡ್ ಲಸಿಕೆ ಎನ್ನಿಸಿರುವ iNCOVACC ನ್ನು ವಾಷಿಂಗ್ಟನ್ ಯೂನಿವರ್ಸಿಟಿ ಸೇಂಟ್ ಲೂಯಿಸ್ ಸಹಭಾಗಿತ್ವದಲ್ಲಿ ಭಾರತ್ ಬಯೋಟೆಕ್ ಕಂಪನಿಯು ತಯಾರಿಸಿದೆ. ಈಗಾಗಲೇ ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಲಸಿಕೆಗಳ ಎರಡೂ ಡೋಸ್ ಪಡೆದ 18 ವರ್ಷ ಮೇಲ್ಪಟ್ಟವರು, ಈ ಮೂಗಿನ ಮೂಲಕ ತೆಗೆದುಕೊಳ್ಳುವ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ಪಡೆಯಬಹುದಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ