ರಾಹುಲ್‌ ಗಾಂಧಿ ಕುರಿತಾಗಿ ಸುಳ್ಳುಸುದ್ದಿ ಪ್ರಸಾರ: ಪೊಲೀಸರಿಂದ ಪತ್ರಕರ್ತ ರೋಹಿತ್‌ ರಂಜನ್‌ ಬಂಧನ!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪದ ಮೇರೆಗೆ ಜೀ ನ್ಯೂಸ್‌ನ ನಿರೂಪಕ ರೋಹಿತ್ ರಂಜನ್ ಅವರನ್ನು ಮಂಗಳವಾರ ಬೆಳಗ್ಗೆ ಉತ್ತರ ಪ್ರದೇಶದಲ್ಲಿ ಛತ್ತೀಸ್‌ಗಢ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪದ ಮೇರೆಗೆ ಜೀ ನ್ಯೂಸ್‌ನ ನಿರೂಪಕ ರೋಹಿತ್ ರಂಜನ್ (Rohit Ranjan) ಅವರನ್ನು ಮಂಗಳವಾರ ಬೆಳಗ್ಗೆ ಉತ್ತರ ಪ್ರದೇಶದಲ್ಲಿ ಛತ್ತೀಸ್‌ಗಢ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಪತ್ರಕರ್ತ ರೋಹಿತ್ ಅವರ ಉತ್ತರ ಪ್ರದೇಶದ (Uttar Pradesh) ಇಂದಿರಾಪುರಂ (Indirapuram) ಮನೆಯ ಹೊರಗೆ ಬೆಳಿಗ್ಗೆ 5.30 ಕ್ಕೆ ತಲುಪಿದ ಛತ್ತೀಸ್‌ಗಢ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಮನೆಯ ಬಾಗಿಲಲ್ಲಿ ಪೊಲೀಸರನ್ನು ನೋಡಿದ ರೋಹಿತ್ ಈ ಕುರಿತಾಗಿ ಟ್ವೀಟ್‌ ಮಾಡಿ ಉತ್ತರ ಪ್ರದೇಶ ಪೊಲೀಸರ ಸಹಾಯ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಗಾಜಿಯಾಬಾದ್ ಪೊಲೀಸರು (Ghaziabad Police) ಸಹಾಯ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಟ್ವೀಟ್‌ ಮಾಡಿತ್ತು. ಇನ್ನೊಂದೆಡೆ, ಛತ್ತೀಸ್‌ ಗಢದ ರಾಯ್‌ಪುರ ಪೊಲೀಸರು ಕೂಡ ಆ್ಯಂಕರ್‌ಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದು, ತನಿಖೆಗೆ ಸಹಕರಿಸುವಂತೆ ಹೇಳಿದ್ದರು.

ಕಾಂಗ್ರೆಸ್ ಶಾಸಕ ದೇವೇಂದ್ರ ಯಾದವ್ ಅವರ ದೂರಿನ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಮತ್ತು ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಆರೋಪದ ಮೇಲೆ ಭಾನುವಾರ ಜೀ ನ್ಯೂಸ್‌ ನಿರೂಪಕ ರಂಜನ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ರಾಯ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಅಗರವಾಲ್ ತಿಳಿಸಿದ್ದಾರೆ.

ಮನೆಯಲ್ಲಿ ಹೈಡ್ರಾಮಾ
ಈ ಮಧ್ಯೆ ಗಾಜಿಯಾಬಾದ್‌ನ ಇಂದಿರಾಪುರಂನ ಪೊಲೀಸರು ರೋಹಿತ್‌ ಅವರ ಮನೆಗೆ ತಲುಪಿದ್ದಾರೆ. ರೋಹಿತ್ ಬಂಧನಕ್ಕೆ ಸಂಬಂಧಿಸಿದಂತೆ ರಾಯಪುರ ಮತ್ತು ಇಂದಿರಾಪುರಂ ಪೊಲೀಸರ ನಡುವೆ ಜಟಾಪಟಿ ನಡೆಯುವ ನಡುವೆ ನೋಯ್ಡಾ ಪೊಲೀಸರು ಇಲ್ಲಿ ಪ್ರವೇಶ ಪಡೆದಿದ್ದರು. ರೋಹಿತ್ ವಿರುದ್ಧ ಪ್ರಕರಣ ದಾಖಲಾಗಿದ್ದು, ರಾಯ್‌ಪುರ ಪೊಲೀಸರ ಮುಂದೆಯೇ ರೋಹಿತ್‌ರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ಬೆಳಗ್ಗೆ 5:30ಕ್ಕೆ ರಾಯ್‌ಪುರ ಪೊಲೀಸರು ಆ್ಯಂಕರ್ ರೋಹಿತ್‌ನನ್ನು ಬಂಧಿಸಲು ಘಾಜಿಯಾಬಾದ್‌ಗೆ ತಲುಪಿದ್ದರು. ರೋಹಿತ್ ಗಾಜಿಯಾಬಾದ್‌ನ ಇಂದಿರಾಪುರಂ ಪ್ರದೇಶದ ನಿಯೋ ಸ್ಕಾರ್ಟಿಸ್ ಸೊಸೈಟಿಯಲ್ಲಿ ವಾಸಿಸುತ್ತಿದ್ದಾರೆ. ರೋಹಿತ್ ಅವರು ಸಂಜೆ 6:16 ಕ್ಕೆ ಈ ಕುರಿತಾಗಿ ಟ್ವೀಟ್ ಮಾಡಿದ್ದು, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಎಎಸ್ಪಿ ಗಾಜಿಯಾಬಾದ್ ಮತ್ತು ಎಡಿಜಿ ವಲಯ ಲಕ್ನೋ ಅವರನ್ನು ಟ್ಯಾಗ್‌ ಮಾಡಿ ಸಹಾಯ ಕೋರಿದ್ದರು. ಈ ಟ್ವೀಟ್‌ಗೆ ಉತ್ತರ ನೀಡಿದ ರಾಯ್‌ಪುರ ಪೊಲೀಸರು, ಪೊಲೀಸರ ತನಿಖೆಗೆ ಸಹಕರಿಸುವಂತೆ ಹೇಳಿದ್ದು, ನಿಮ್ಮ ವಾದವನ್ನು ನ್ಯಾಯಾಲಯದಲ್ಲಿ ಮಂಡಿಸುವಂತೆ ಹೇಳಿತ್ತು. ಇದರ ನಡುವೆ, ಗಾಜಿಯಾಬಾದ್ ಪೊಲೀಸರು ಸಹ ಟ್ವೀಟ್ ಮಾಡುವ ಮೂಲಕ, ಈ ವಿಷಯವು ಗಮನಕ್ಕೆ ಬಂದಿದ್ದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ರೋಹಿತ್‌ ರಂಜನ್‌ ಟ್ವೀಟ್‌ಗೆ ಪ್ರತಿಕ್ರಿಯಿಸಿತ್ತು. ಇಂದಿರಾಪುರಂ ಪೊಲೀಸರು  6.30ರ ಸುಮಾರಿಗೆ ರೋಹಿತ್‌ನ ಮನೆಯ ಬಳಿ ಬಂದಿದ್ದರು.

ಉತ್ತರ ಪ್ರದೇಶ ಪೊಲೀಸರ ಅನುಮತಿಯಿಲ್ಲದೆ ಬಂಧಿಸಿದ ಬಗ್ಗೆ ರಾಯ್‌ಪುರ ಮತ್ತು ಗಾಜಿಯಾಬಾದ್ ಪೊಲೀಸರ ನಡುವೆ ಚರ್ಚೆ ಪ್ರಾರಂಭವಾಯಿತು. ನಂತರ ಇದ್ದಕ್ಕಿದ್ದಂತೆ 7:15 ಕ್ಕೆ ನೋಯ್ಡಾ ಪೊಲೀಸರು ಪ್ರವೇಶಿಸಿ ರೋಹಿತ್‌ನನ್ನು ಬಂಧಿಸಿದರು. ಆ್ಯಂಕರ್ ರೋಹಿತ್ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ ಎಂದು ನೋಯ್ಡಾ ಪೊಲೀಸರು ವಾದಿಸಿದ್ದಾರೆ. ಆದರೆ, ಯಾವಾಗ ಪ್ರಕರಣ ದಾಖಲಿಸಲಾಗಿದೆ ಎಂದಾಗ ಅಧಿಕಾರಿಗಳು ಉತ್ತರ ನೀಡಿಲ್ಲ. ಇಂದಿರಾಪುರಂ ಸಿಒ ಅಭಯ್ ಮಿಶ್ರಾ ಅವರು ರೋಹಿತ್ ಬಂಧನವನ್ನು ಖಚಿತಪಡಿಸಿದ್ದಾರೆ.

ಮಂಗಳವಾರ ಬೆಳಗ್ಗೆ 6.16ಕ್ಕೆ ಟ್ವೀಟ್ ಮಾಡಿದ್ದ ರೋಹಿತ್ ರಂಜನ್, ‘‘ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ನನ್ನನ್ನು ಬಂಧಿಸಲು ಛತ್ತೀಸ್ ಗಢ ಪೊಲೀಸರು ನನ್ನ ಮನೆಯ ಹೊರಗೆ ನಿಂತಿದ್ದಾರೆ. ಇದು ಕಾನೂನಾತ್ಮಕವಾಗಿ ಸರಿಯೇ' ಎಂದು ಪ್ರಶ್ನೆ ಮಾಡಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಎಎಸ್ಪಿ ಗಾಜಿಯಾಬಾದ್ ಮತ್ತು ಎಡಿಜಿ ವಲಯ ಲಕ್ನೋ ಅವರಿಗೆ ಟ್ಯಾಗ್ ಮಾಡಿದ್ದರು.

ಏನಿದು ಪ್ರಕರಣ: 
ಇತ್ತೀಚೆಗೆ ರಾಹುಲ್‌ ಗಾಂಧಿ ತಮ್ಮ ಸಂಸದೀಯ ಕ್ಷೇತ್ರ ಕೇರಳದ ವಯ್ನಾಡ್‌ಗೆ ತೆರಳಿದ್ದರು. ಕೆಲ ದಿನಗಳ ಹಿಂದೆ ಎಸ್‌ಎಫ್‌ಐ ಕಾರ್ಯಕರ್ತರು ರಾಹುಲ್‌ ಗಾಂಧಿ ಅವರ ಕಚೇರಿಯನ್ನು ಧ್ವಂಸ ಮಾಡಿದ್ದರು. ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ರಾಹುಲ್‌ ಗಾಂಧಿ, ಈ ಘಟನೆಯನ್ನು ಮಾಡಿದವರು ಮಕ್ಕಳು ಎಂದು ಹೇಳಿದ್ದರು. ಆದರೆ, ಝೀ ನ್ಯೂಸ್‌ ಚಾನೆಲ್‌, ಇದು ರಾಹುಲ್‌ ಗಾಂಧಿ ಉದಯಪುರ ಘಟನೆಯ ಕುರಿತಾಗಿ ಹೇಳಿದ್ದ ಮಾತು ಎಂದು ಪರಿಗಣಿಸಿ ಸುದ್ದಿಯನ್ನು ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲಿಯೇ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಾದ ಛತ್ತೀಸ್‌ಗಢ ಹಾಗೂ ರಾಜಸ್ಥಾನದಲ್ಲಿ ನಿರೂಪಕ ರೋಹಿತ್ ರಂಜನ್‌ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಬಳಿಕ ಈ ಬಂಧನಕ್ಕೂ ಮುನ್ನ ಅಂದರೆ ಜುಲೈ 2 ರಂದು, ಪತ್ರಕರ್ತ ರಂಜನ್ ಅವರು ತಮ್ಮ ಟಿವಿ ಕಾರ್ಯಕ್ರಮದ ಸಂದರ್ಭದಲ್ಲಿ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಉದಯ್‌ಪುರ ಕೊಲೆ ಪ್ರಕರಣದೊಂದಿಗೆ ಜೋಡಿಸಿದಕ್ಕೆ ಕ್ಷಮೆಯಾಚಿಸಿದ್ದರು. ಆದಾಗ್ಯೂ ಇಂದು ಅವರ ಬಂಧನವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com