ಡಿಆರ್‌ಡಿಓ ಮತ್ತು ಫ್ರಾನ್ಸ್ ನ ಸಾಫ್ರನ್ ಸಹಯೋಗದಲ್ಲಿ ಎಎಂಸಿಎ ವಿಮಾನದ ಇಂಜಿನ್ ನಿರ್ಮಾಣ?

ಬ್ರಿಟನ್ನಿನ ರೋಲ್ಸ್ ರಾಯ್ಸ್, ಫ್ರಾನ್ಸಿನ ಸಾಫ್ರನ್, ಹಾಗೂ ಅಮೆರಿಕಾದ ಜಿಇ ಏವಿಯೇಷನ್‌ ಸೇರಿದಂತೆ ಸಾಕಷ್ಟು ಅಂತಾರಾಷ್ಟ್ರೀಯ ಕಂಪನಿಗಳು ಭಾರತದ ಎಎಂಸಿಎಗಾಗಿ ಇಂಜಿನ್ ಒದಗಿಸಲು ತುದಿಗಾಲಲ್ಲಿ ನಿಂತಿವೆ.
ಭಾರತದ ಸುಧಾರಿತ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್ ನ ಗ್ರಾಫಿಕ್ ವಿನ್ಯಾಸ
ಭಾರತದ ಸುಧಾರಿತ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್ ನ ಗ್ರಾಫಿಕ್ ವಿನ್ಯಾಸ
Updated on

- ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಇತ್ತೀಚಿನ ದಿನಗಳಲ್ಲಿ ಜಾಗತಿಕವಾಗಿ ಸಾಕಷ್ಟು ಪ್ರಕ್ಷುಬ್ಧತೆ ಹಾಗೂ ತಲ್ಲಣಗಳು ಕಂಡುಬರುತ್ತಿವೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಭಾರತ ತನ್ನ ಮಿಲಿಟರಿಯ ಸ್ವದೇಶೀಕರಣ ಪ್ರಕ್ರಿಯೆಯೆಡೆಗೆ ಇನ್ನೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಭಾರತ ತನ್ನ ಸೇನಾ ಶಕ್ತಿಯನ್ನು ಬಲಪಡಿಸುವತ್ತ ಗಮನ ಹರಿಸಿದ್ದು, ಇದಕ್ಕಾಗಿ ತನ್ನ ಅತ್ಯಾಧುನಿಕ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಂಸಿಎ) ಅನ್ನು ದೇಶೀಯವಾಗಿ ನಿರ್ಮಿಸುತ್ತಿದೆ. ಭಾರತದ ಈ ಹೆಜ್ಜೆಯನ್ನು ಚೀನಾ, ಅಮೇರಿಕಾ, ಮತ್ತು ಫ್ರಾನ್ಸ್ ಸೇರಿದಂತೆ ಜಗತ್ತೇ ಕುತೂಹಲದ ಕಂಗಳಿಂದ ನೋಡುತ್ತಿದೆ. ಭಾರತದ ಈ ಹೆಜ್ಜೆ ತನ್ನ ವಾಯುಪಡೆಯನ್ನು ಬಲಪಡಿಸುವತ್ತ ಮಹತ್ವದ ಹೆಜ್ಜೆಯಾಗಿದೆ. ಭಾರತ ತನ್ನ ಯುದ್ಧ ವಿಮಾನ, ಎಎಂಸಿಎ ಸಂಪೂರ್ಣವಾಗಿ ಮೇಕ್ ಇನ್ ಇಂಡಿಯಾ ಯೋಜನೆಯಡಿ ದೇಶೀಯವಾಗಿ ನಿರ್ಮಾಣವಾಗಬೇಕೆಂದು ಬಯಸುತ್ತಿದೆ.

ಬ್ರಿಟನ್ನಿನ ರೋಲ್ಸ್ ರಾಯ್ಸ್, ಫ್ರಾನ್ಸಿನ ಸಾಫ್ರನ್, ಹಾಗೂ ಅಮೆರಿಕಾದ ಜಿಇ ಏವಿಯೇಷನ್‌ ಸೇರಿದಂತೆ ಸಾಕಷ್ಟು ಅಂತಾರಾಷ್ಟ್ರೀಯ ಕಂಪನಿಗಳು ಭಾರತದ ಎಎಂಸಿಎಗಾಗಿ ಇಂಜಿನ್ ಒದಗಿಸಲು ತುದಿಗಾಲಲ್ಲಿ ನಿಂತಿವೆ. ಭಾರತ ಈ ಕುರಿತು ಬ್ರಿಟನ್ನಿನ ರೋಲ್ಸ್ ರಾಯ್ಸ್ ಮತ್ತು ಫ್ರಾನ್ಸಿನ ಸಾಫ್ರನ್ ಜೊತೆ ಮಾತುಕತೆ ನಡೆಸಿದೆ. ಸಾಫ್ರನ್ ಈಗಾಗಲೇ ಭಾರತದ ಮಿರೇಜ್ ಮತ್ತು ರಫೇಲ್ ಯುದ್ಧ ವಿಮಾನಗಳಿಗೆ ಇಂಜಿನ್ ತಯಾರಿಸಿಕೊಟ್ಟಿದೆ. ಆದರೆ ಈಗ ಭಾರತ ಎಎಂಸಿಎ ವಿಮಾನವನ್ನು ಮೇಕ್ ಇನ್ ಇಂಡಿಯಾ ಯೋಜನೆಯಡಿ ನಿರ್ಮಿಸಲು ಉದ್ದೇಶಿಸಿದ್ದು, ಇದಕ್ಕಾಗಿ ಸಾಫ್ರನ್ ಹಾಗೂ ರೋಲ್ಸ್ ರಾಯ್ಸ್ ಹಲವು ದೊಡ್ಡದಾದ ದೊಡ್ಡ ಕೊಡುಗೆಗಳನ್ನು ನೀಡಲು ಮುಂದೆ ಬಂದಿವೆ.

ಫ್ರೆಂಚ್ ಸಂಸ್ಥೆ ಸಾಫ್ರನ್ ಡಿಆರ್‌ಡಿಓ ಜೊತೆಗೂಡಿ ಇಂಜಿನ್ ನಿರ್ಮಾಣ:
ಫ್ರಾನ್ಸಿನ ಸಾಫ್ರನ್ ಸಂಸ್ಥೆ ಕೊಟ್ಟಿರುವ ಆಕರ್ಷಕ ಕೊಡುಗೆಯಾಗಿ ಫ್ರಾನ್ಸಿನ ಸಾಫ್ರನ್ ಸಂಸ್ಥೆ ಭಾರತದ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಜೊತೆಗೂಡಿ ಇಂಜಿನ್ ತಯಾರಿಸಲಿದೆ. ಇದರೊಡನೆ, ಸಾಫ್ರನ್ ಭಾರತಕ್ಕೆ ಎಂ88 ಇಂಜಿನ್ ಒದಗಿಸಲಿದ್ದು, ಇದು 65ರಿಂದ 110ನ್ಯೂಟನ್ ಥ್ರಸ್ಟ್ ಸೃಷ್ಟಿಸುತ್ತದೆ. ಸಾಫ್ರನ್ ಭಾರತಕ್ಕೆ ಎಂ88 ಇಂಜಿನ್ ತಂತ್ರಜ್ಞಾನ ಒದಗಿಸಲೂ ಒಪ್ಪಿಕೊಂಡಿದೆ. ಅದಕ್ಕಾಗಿ ಸಾಫ್ರನ್ ತಾನೂ ಒಬ್ಬ ಪಾಲುದಾರನಾಗಿ, ಹಣ ಹೂಡಿಕೆ ಮಾಡಲು ಮುಂದೆ ಬಂದಿದೆ. ಇದೇ ಕಂಪನಿ ರಫೇಲ್ ವಿಮಾನದ ಇಂಜಿನನ್ನೂ ತಯಾರಿಸುತ್ತಿದ್ದು, ಎಎಂಸಿಎಗೂ ಗುಣಮಟ್ಟದ ಇಂಜಿನ್ ಒದಗಿಸುವುದಾಗಿ ಹೇಳಿಕೊಂಡಿದೆ. ಈ ಇಂಜಿನ್ನನ್ನು ಭಾರತದ ರಫೇಲ್‌ನಲ್ಲೂ ಪರೀಕ್ಷೆಗೊಳಪಡಿಸಬಹುದಾಗಿದೆ. ಒಂದು ವೇಳೆ ಈ ಪರೀಕ್ಷೆ ಯಶಸ್ವಿಯಾದರೆ ಅದು ರಫೇಲ್ನ ಸಾಮರ್ಥ್ಯವನ್ನೂ ಹಲವು ಪಟ್ಟು ಏರಿಸಬಹುದಾಗಿದೆ. ವರದಿಗಳ ಪ್ರಕಾರ ಸಾಫ್ರನ್ ಭಾರತಕ್ಕೆ ಒಂದು ನಿಬಂಧನೆಯನ್ನೂ ಹೇಳಿದ್ದು, ಅದು ಎಎಂಸಿಎ ವಿಮಾನಗಳನ್ನು ದೊಡ್ಡ ಸಂಖ್ಯೆಯಲ್ಲಿ ಉತ್ಪಾದಿಸಬೇಕೆಂದು ಹೇಳಿದ್ದು, ವಿದೇಶಗಳ ಬಳಕೆಗೆ ಭಾರತದ ಎಎಂಸಿಎ ವಿಮಾನದ ಮಾರಾಟಕ್ಕೂ ಅನುಮತಿ ಕೋರಿದೆ.

ಭಾರತಕ್ಕೆ ರೋಲ್ಸ್ ರಾಯ್ಸ್ ಸಂಸ್ಥೆಯ ಆಫರ್:
ಇದೇ ಸಮಯದಲ್ಲಿ, ಎಎಂಸಿಎ ವಿಮಾನಕ್ಕಾಗಿ ಬ್ರಿಟನ್ನಿನಲ್ಲೇ ಇಂಜಿನ್ ತಯಾರಿಸುತ್ತೇನೆ ಎಂದಿದ್ದ ರೋಲ್ಸ್ ರಾಯ್ಸ್ ಕಂಪನಿ ಭಾರತದ ಯುದ್ಧ ವಿಮಾನಗಳಿಗಾಗಿ ಈ‌ ಮೊದಲು ಬೇರೆ ಯಾವುದೇ ಯುದ್ಧ ವಿಮಾನದಲ್ಲಿ ಉಪಯೋಗಿಸಿರದಂತಹ ಅತ್ಯಾಧುನಿಕ ಇಂಜಿನ್ನನ್ನು ತಯಾರಿಸಿ ಕೊಡುವುದಾಗಿ ಹೇಳಿದೆ. ಅದರೊಡನೆ, ಭಾರತದ ಅನುಮತಿ ಇಲ್ಲದೆ ಈ ಇಂಜಿನನ್ನು ಬೇರೆ ಯಾವ ದೇಶಕ್ಕೂ ಮಾರಾಟ ಮಾಡುವುದಿಲ್ಲ ಎಂಬುದಾಗಿ ಮಾತು ಕೊಟ್ಟಿದೆ. ಇತ್ತೀಚಿನ ವರದಿಗಳ ಪ್ರಕಾರ ಈ ಬ್ರಿಟಿಷ್ ಕಂಪನಿ ಭಾರತದೊಡನೆ ಕೈ ಜೋಡಿಸಿ ಕಾರ್ಯ ನಿರ್ವಹಿಸಿ, ಎಎಂಸಿಎಗಾಗಿ ಇಂಜಿನ್ ನಿರ್ಮಿಸಲು ಅಪಾರ ಆಸಕ್ತಿ ವಹಿಸಿದೆ.

2021ರಲ್ಲಿ ನಡೆದ ಎಫ್ಐಸಿಸಿಐ ಸಮಾರಂಭದಲ್ಲಿ ಮಾತನಾಡುವ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತ ಈಗಾಗಲೇ ರಷ್ಯಾ, ಅಮೆರಿಕಾ, ಅಥವಾ ಫ್ರಾನ್ಸ್ ಸೇರಿದಂತೆ ಎಲ್ಲಾ ರಾಷ್ಟ್ರಗಳಿಗೂ ತಾನು ಇನ್ನು ಮುಂದೆ ಆಯುಧಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವುದಿಲ್ಲ. ಇನ್ನು ಮುಂದೆ ನಮಗೆ ಬೇಕಾದ ಆಯುಧಗಳನ್ನು ಭಾರತದಲ್ಲೇ ತಯಾರಿಸಬೇಕು ಎಂದು ಹೇಳಿರುವುದಾಗಿ ತಿಳಿಸಿದ್ದರು. ಒಂದು ವೇಳೆ ಯಾವುದಾದರೂ ವಿದೇಶೀ ಕಂಪನಿ ಭಾರತಕ್ಕೆ ಆಯುಧ ಪೂರೈಸುವ ಇಚ್ಛೆ ಹೊಂದಿದ್ದರೆ, ಅದು ಯಾವುದಾದರೂ ಭಾರತೀಯ ಕಂಪನಿಯೊಡನೆ ಸಹಭಾಗಿತ್ವ ಹೊಂದಿ ಆಯುಧ ತಯಾರಿಸಬಹುದಾಗಿದೆ. ಅಥವಾ ನೇರವಾಗಿ ಭಾರತಕ್ಕೆ ಬಂದು ಇಲ್ಲಿ ಕಾರ್ಖಾನೆ ತೆರೆಯಲು ಅನುಮತಿ ಪಡೆಯಬಹುದು.

ಭಾರತ ಈಗಾಗಲೇ ದೇಶೀಯ ನಿರ್ಮಾಣದ ಯುದ್ಧ ವಿಮಾನವಾದ ಎಲ್‌ಸಿಎ ತೇಜಸ್ ನಿರ್ಮಾಣದಲ್ಲಿ ತೊಡಗಿದ್ದರೂ, ಭಾರತ ಇನ್ನೂ ದೇಶೀಯ ಇಂಜಿನ್ ನಿರ್ಮಿಸಲು ಸಾಧ್ಯವಾಗಿಲ್ಲ. 2019ರಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಫೇಲ್ ಯುದ್ಧ ವಿಮಾನದ ಮೊದಲ ತಂಡವನ್ನು ಪಡೆದುಕೊಳ್ಳಲು ಫ್ರಾನ್ಸ್ಗೆತೆರಳಿದ್ದಾಗ ಸಾಫ್ರನ್ ಕಂಪನಿಯ ಉತ್ಪಾದನಾ ಘಟಕಕ್ಕೂ ಭೇಟಿ ನೀಡಿದ್ದರು. ಮುಂದಿನ ದಿನಗಳಲ್ಲಿ ಭಾರತದಲ್ಲಿ ಇಂಜಿನ್‌ಗಳು ತಯಾರಾದರೆ, ವಿದೇಶಗಳಿಗೆ ರಫ್ತಾಗುವ ದೊಡ್ಡ ಸಂಖ್ಯೆಯ ಇಂಜಿನ್‌ಗಳೂ ಮೇಡ್ ಇನ್ ಇಂಡಿಯಾ ಆಗಿರಲಿವೆ.

<strong>ಗಿರೀಶ್ ಲಿಂಗಣ್ಣ </strong>
ಗಿರೀಶ್ ಲಿಂಗಣ್ಣ 

ಈ ಬರಹದ ಲೇಖಕರು ರಕ್ಷಣಾ ವಿಶ್ಲೇಷಕ ಮತ್ತು ಜರ್ಮನಿಯ ADD Engineering GmbH ನ ಅಂಗಸಂಸ್ಥೆಯಾದ ಆಡ್ ಎಂಜಿನಿಯರಿಂಗ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com