ಭಾರತದಲ್ಲಿ ಒಂದು ಭಾಷೆ, ಒಂದು ಸಂಸ್ಕೃತಿ ಸಾಧ್ಯವಿಲ್ಲ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್
ಚೆನ್ನೈ: ಭಾರತದಂತ ದೇಶದ ಮೇಲೆ ಒಂದು ಭಾಷೆ, ಒಂದು ಧರ್ಮ ಮತ್ತು ಒಂದು ಸಂಸ್ಕೃತಿಯನ್ನು ಹೇರುವುದು ಅಸಾಧ್ಯ ಎಂದು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ತಿಳಿಸಿದ್ದಾರೆ.
ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, 'ಭಾರತದಲ್ಲಿ ಒಂದು ಭಾಷೆ, ಒಂದು ಧರ್ಮ ಮತ್ತು ಒಂದು ಸಂಸ್ಕೃತಿಯನ್ನು ಜಾರಿಗೆ ತರಲು ಸಾಧ್ಯವಿಲ್ಲ. ಆದರೆ, ಒಂದು ಭಾಷೆ ಮತ್ತು ಒಂದು ಧರ್ಮವನ್ನು ಪ್ರಚಾರ ಮಾಡುವವರು ನಮ್ಮ ಏಕತೆಯನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಅಂತಹವರು ಭಾರತ ಮತ್ತು ಭಾರತೀಯರ ಶತ್ರುಗಳು' ಎಂದು ಆರೋಪಿಸಿದ್ದಾರೆ.
ಸಂಯುಕ್ತ ವ್ಯವಸ್ಥೆಯು ನಮ್ಮ ದೇಶದ ಅಡಿಪಾಯ ಎಂದ ಅವರು, ಬಲಿಷ್ಠ ಸ್ವಾಯತ್ತ ರಾಜ್ಯಗಳನ್ನು ಹೊಂದುವುದೊಂದೇ ಭಾರತ ಅಭಿವೃದ್ಧಿ ಹೊಂದಲು ಇರುವ ಏಕೈಕ ಮಾರ್ಗವಾಗಿದೆ ಎಂದು ಹೇಳಿದರು.
ಇದೇ ವೇಳೆ, ಸ್ಟಾಲಿನ್ ಅವರು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಶ್ಲಾಘಿಸಿದರು. ತಮಿಳುನಾಡಿನಲ್ಲಿ ತಮ್ಮ ಡಿಎಂಕೆ ಮತ್ತು ಸಿಪಿಐ(ಎಂ) ನಡುವಿನ ಮೈತ್ರಿಯು 'ಸೈದ್ಧಾಂತಿಕ'ವಾಗಿದೆ. ಇದು ಕೇವಲ ಚುನಾವಣೆಗಾಗಿನ ಸಂಬಂಧವಲ್ಲ ಎಂದು ಹೇಳಿದರು.
ಪತ್ರಕರ್ತರ ಬಂಧನವನ್ನು ನಿರಂಕುಶ ವರ್ತನೆ ಎಂದು ಹೇಳಿದ ಸ್ಟಾಲಿನ್, ಕೇಂದ್ರದ ತನಿಖಾ ಸಂಸ್ಥೆಗಳು ವಿರೋಧ ಪಕ್ಷದ ನಾಯಕರನ್ನು 'ಗುರಿ'ಯಾಗಿಸಿಕೊಂಡಿವೆ ಎಂದು ಹೇಳಿದರು.

