

ಪಾಲನ್‌ಪುರ: ಗುಜರಾತ್‌ನ ಬನಸ್ಕಾಂತದಲ್ಲಿರುವ ರೈಲ್ವೆ ಪೊಲೀಸರು ಕಚ್‌ನ ಯುವತಿಯೊಂದಿಗೆ ಓಡಿಹೋಗಲು ಯತ್ನಿಸುತ್ತಿದ್ದ ಪಾಕಿಸ್ತಾನದ ಯುವಕನನ್ನು ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಹೆಡ್ ಕಾನ್‌ಸ್ಟೆಬಲ್ ಅಶೋಕ್‌ಭಾಯ್ ಆಲ್ ಮತ್ತು ಅವರ ತಂಡವು ಭಿಲ್ಡಿ ರೈಲು ನಿಲ್ದಾಣದಲ್ಲಿ ಗಸ್ತು ತಿರುಗುತ್ತಿದ್ದಾಗ ಇಬ್ಬರನ್ನು ಗಮನಿಸಿದ್ದಾರೆ.
ವಿಚಾರಣೆ ನಡೆಸಿದಾಗ, 24 ವರ್ಷದ ಪ್ರಭುರಾಮ್ ದೇಸಾಯಿ ಎಂಬ ಯುವಕ ಪಾಕಿಸ್ತಾನಿ ಪಾಸ್‌ಪೋರ್ಟ್ ಹೊಂದಿರುವುದನ್ನು ಪೊಲೀಸರು ಕಂಡುಕೊಂಡಿದ್ದಾರೆ. ಆತನ ವೀಸಾ 2023ರ ಅಕ್ಟೋಬರ್ ವರೆಗೆ ಮಾನ್ಯವಾಗಿದ್ದು, ರಾಜಸ್ಥಾನದ ಜಲೋರ್ ಜಿಲ್ಲೆಗೆ ಸೀಮಿತವಾಗಿತ್ತು.
ವಿದೇಶಿ ಕಾಯ್ದೆ 1946 ರ ಸೆಕ್ಷನ್ 3 (2), (ಡಿ), (ಇ) ಪ್ರಕಾರ ತಾವು ಪ್ರಯಾಣಿಸಲು ವೀಸಾ ನೀಡಿರುವ ಪ್ರದೇಶದಿಂದ ಹೊರಗೆ ಹೋಗಬಾರದು ಮತ್ತು ಪ್ರಯಾಣಿಸಲು ಆಯಾ ಪೊಲೀಸರಿಂದ ಅಥವಾ ನಿಲ್ದಾಣ ಪ್ರದೇಶ ಅಥವಾ ವಲಸೆ ಇಲಾಖೆಯಿಂದ ಅನುಮತಿ ಪಡೆಯಬೇಕು.
ಅನುಮತಿಯಿಲ್ಲದೆ ಗುಜರಾತ್‌ಗೆ ಪ್ರವೇಶಿಸಿದ್ದು ಮತ್ತು ತನಗಿಂತ ಒಂದು ವರ್ಷ ದೊಡ್ಡವಳಾದ ಕಚ್‌ನ ಯುವತಿಯನ್ನು ಸಂಪರ್ಕಿಸಿದ್ದಾನೆ. ಸದ್ಯ ಯುವತಿಯನ್ನು ಆಕೆಯ ಪೋಷಕರಿಗೆ ಒಪ್ಪಿಸಲಾಗಿದ್ದು, ಯುವಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಚಾರಣೆ ಸಮಯದಲ್ಲಿ, ಆತ ಮಾರ್ಷಲ್ ಆರ್ಟ್ಸ್ ತರಬೇತುದಾರನಾಗಿದ್ದು, ಕೆಲವು ವರ್ಷಗಳ ಹಿಂದೆ ಆತ ಕಚ್‌ಗೆ ಭೇಟಿ ನೀಡಿದಾಗ ತರಬೇತಿ ಪಡೆದಿದ್ದಳು. ಬಳಿಕ ಅವರಿಬ್ಬರು ಪ್ರೀತಿಸುತ್ತಿದ್ದರು ಎಂದು ಯುವತಿ ತಿಳಿಸಿದ್ದಾಳೆ.