ಮಧುರೈನ 2 ಗ್ರಾಮಗಳು ಜೀವವೈವಿಧ್ಯ ಪರಂಪರೆಯ ಸಂಕೇತದ ಪಟ್ಟಿಗೆ: ತಮಿಳುನಾಡು ಸರ್ಕಾರ

ಮಹತ್ವದ ಬೆಳವಣಿಗೆಯಲ್ಲಿ ತಮಿಳುನಾಡು ಸರ್ಕಾರ ಐತಿಹಾಸಿಕ ಮಧುರೈ ಜಿಲ್ಲೆಯ 2 ಗ್ರಾಮಗಳನ್ನು ಜೀವವೈವಿಧ್ಯ ಪರಂಪರೆಯ ಸಂಕೇತದ ಪಟ್ಟಿಗೆ ಇಂದು ಅಧಿಕೃತವಾಗಿ ಸೇರಿಸಿ ಘೋಷಣೆ ಮಾಡಿದೆ.
ಅರಿಟ್ಟಪಟ್ಟಿ ಮತ್ತು ಮೀನಾಕ್ಷಿಪುರಂ
ಅರಿಟ್ಟಪಟ್ಟಿ ಮತ್ತು ಮೀನಾಕ್ಷಿಪುರಂ

ಚೆನ್ನೈ: ಮಹತ್ವದ ಬೆಳವಣಿಗೆಯಲ್ಲಿ ತಮಿಳುನಾಡು ಸರ್ಕಾರ ಐತಿಹಾಸಿಕ ಮಧುರೈ ಜಿಲ್ಲೆಯ 2 ಗ್ರಾಮಗಳನ್ನು ಜೀವವೈವಿಧ್ಯ ಪರಂಪರೆಯ ಸಂಕೇತದ ಪಟ್ಟಿಗೆ ಇಂದು ಅಧಿಕೃತವಾಗಿ ಸೇರಿಸಿ ಘೋಷಣೆ ಮಾಡಿದೆ.

ಮಧುರೈ ಜಿಲ್ಲೆಯ ಅರಿಟ್ಟಪಟ್ಟಿ ಮತ್ತು ಮೀನಾಕ್ಷಿಪುರಂ ಗ್ರಾಮಗಳನ್ನು ಜೀವವೈವಿಧ್ಯ ಪರಂಪರೆಯ ಸಂಕೇತ ಎಂದು ತಮಿಳುನಾಡು ಸರ್ಕಾರ ಮಂಗಳವಾರ ಘೋಷಿಸಿದೆ. ಆ ಮೂಲಕ ರಾಜ್ಯದ ಇತಿಹಾದಲ್ಲಿಯೇ ಮೊದಲ ಬಾರಿಗೆ 2 ಇಡೀ ಗ್ರಾಮಗಳನ್ನೇ ಜೀವವೈವಿಧ್ಯ ಪರಂಪರೆಯ ಸಂಕೇತದ ಪಟ್ಟಿಗೆ ಸೇರಿಸಿರುವುದು ಇದೇ ಮೊದಲು. 

ಈ 2 ಗ್ರಾಮಗಳಲ್ಲಿ ಸುಮಾರು 2,000 ವರ್ಷಗಳಷ್ಟು ಹಿಂದಿನ ಹಲವಾರು ಸ್ಥಳೀಯ ಜಾತಿಯ ಅಳಿವಿನಂಚಿನಲ್ಲಿರುವ ತಳಿಗಳಿದ್ದು, ಐತಿಹಾಸಿಕ ರಚನೆಗಳನ್ನು ಹೊಂದಿವೆ. ಇದೇ ಕಾರಣಕ್ಕೆ ಇವುಗಳ ಸಂರಕ್ಷಣೆಗೆ ತಮಿಳುನಾಡು ಸರ್ಕಾರ ಈ ದಿಟ್ಟ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ.

ಏನು ಈ ಹಳ್ಳಿಗಳ ವಿಶೇಷ?
ಮಧುರೈ ತಾಲೂಕಿನ ಮೀನಾಕ್ಷಿಪುರಂ ಮತ್ತು ಮೇಲೂರು ತಾಲೂಕಿನ ಅರಿಟ್ಟಪಟ್ಟಿಯಲ್ಲಿ ಒಟ್ಟು 193.2 ಹೆಕ್ಟೇರ್‌ಗಳನ್ನು ಜೀವವೈವಿಧ್ಯ ಪರಂಪರೆಯ ತಾಣಗಳೆಂದು ಗುರುತಿಸಲಾಗಿದೆ. ಈ ಎರಡೂ ಸ್ಥಳಗಳು ರಾಜ್ಯದಲ್ಲಿಯೇ ವಿಶೇಷವಾಗಿದ್ದು, ಹಲವು ಐತಿಹಾಸಿಕ ತಾಣಗಳಿವೆ ಮತ್ತು ಅಳಿವಿನಂಚಿನಲ್ಲಿರುವ ಹಲವು ಜೀವಿಗಳು ಇಲ್ಲಿವೆ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ಕುರಿತು ಮಾತನಾಡಿರುವ ತಮಿಳುನಾಡು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು ಅವರು, ಈ ಪ್ರದೇಶದ ಕೆಲವು ಗುಡ್ಡಗಳು ಶ್ರೀಮಂತ ಜೈವಿಕ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿವೆ, ಮೂರು ರಾಪ್ಟರ್ ಪ್ರಭೇದಗಳು (ಗಿಡುಗಗಳು), ಲಗ್ಗರ್ ಫಾಲ್ಕನ್ಗಳು (ರಣ ಹದ್ದುಗಳು)ಮತ್ತು ಇತರ ವನ್ಯಜೀವಿಗಳು ಸೇರಿದಂತೆ ಸುಮಾರು 250 ಪಕ್ಷಿ ಪ್ರಭೇದಗಳಿವೆ. ಅಳಿವಿನಂಚಿನಲ್ಲಿರುವ ತೆಳ್ಳಗಿನ ಲೋರಿಸ್ (ಕಾಡುಪಾಪ ಜಾತಿಗೆ ಸೇರಿದ ಪ್ರಾಣಿ) ಸೇರಿದಂತೆ ಹಲವು ಅಳಿವಿನಂಚಿನಲ್ಲಿರುವ ಪ್ರಾಣಿಗಳು ಇಲ್ಲಿ ಆವಾಸ ಪಡೆದಿವೆ.

ಈ ಪ್ರದೇಶವು ಜಲಾನಯನ ಪ್ರದೇಶವಾಗಿ ಏಳು ಬಂಜರು ಗ್ರಾನೈಟ್ ಗುಡ್ಡಗಳ ಸರಣಿಯನ್ನು ಒಳಗೊಂಡಿದೆ ಮತ್ತು 72 ಸರೋವರಗಳು, 200 ನೈಸರ್ಗಿಕ ಸ್ಪ್ರಿಂಗ್ ಪೂಲ್‌ಗಳು (ಕೊಳಗಳು) ಮತ್ತು ಮೂರು ಚೆಕ್ ಅಣೆಕಟ್ಟುಗಳನ್ನು ಬೆಂಬಲಿಸುತ್ತದೆ. ಈ ಪ್ರದೇಶದಲ್ಲಿ ಕಂಡುಬರುವ ಮೆಗಾಲಿಥಿಕ್ ರಚನೆಗಳು ತಮಿಳು ಬ್ರಾಹ್ಮಿ ಶಾಸನಗಳು, ಜೈನ ಕಲಾಕೃತಿಗಳು ಮತ್ತು 2,200 ವರ್ಷಗಳಷ್ಟು ಹಳೆಯದಾದ ಕಲ್ಲಿನ ದೇವಾಲಯಗಳನ್ನು ಹೊಂದಿವೆ. ಈ ಜೀವವೈವಿಧ್ಯವನ್ನು ಬಲಪಡಿಸಲು ಮತ್ತು ಅದರ ಸಂರಕ್ಷಿಸಲು ಸರ್ಕಾರವು ಈ ಅಧಿಸೂಚನೆಯನ್ನು ಹೊರಡಿಸಿದೆ ಎಂದು ಸಾಹು ಹೇಳಿದರು.

ಈ ಸಂರಕ್ಷಣಾ ಕ್ರಮದ ಮೂಲಕ ಸ್ಥಳೀಯ ಸಮುದಾಯಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸುವುದು ಸಹ ಉದ್ದೇಶವಾಗಿದೆ. ಇದು ಸಮಾಜದ ಎಲ್ಲಾ ವರ್ಗಗಳಲ್ಲಿ ಸಂರಕ್ಷಣಾ ನೀತಿಗಳನ್ನು ಹುಟ್ಟುಹಾಕುವ ಮತ್ತು ಪೋಷಿಸುವ ಗುರಿಯನ್ನು ಹೊಂದಿದೆ. ಇದು ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಶೋಷಣೆಯನ್ನು ಕೊನೆಗೊಳಿಸುತ್ತದೆ ಮತ್ತು ಪರಿಸರ ಅವನತಿಯನ್ನು ತಪ್ಪಿಸುತ್ತದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com