ಅದಾನಿ ಬಂದರು ವಿವಾದ: 3,000 ಜನರ ವಿರುದ್ಧ ಪ್ರಕರಣ ದಾಖಲಿಸಿದ ಕೇರಳ ಪೊಲೀಸರು

ಕೇರಳದ ವಿಳಿಂಜಮ್‌ ಪೊಲೀಸ್ ಠಾಣೆ ಮೇಲೆ ಭಾನುವಾರ ಮುತ್ತಿಗೆ ಹಾಕಿದ ಪ್ರಕರಣದಲ್ಲಿ ಸುಮಾರು 30 ಪೊಲೀಸರು ಗಾಯಗೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇನ್ನೂ 3,000 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪ್ರತಿಭಟನಾಕಾರಿಂದ ಪಲ್ಟಿಯಾಗಿರುವ ಪೊಲೀಸ್ ವಾಹನ
ಪ್ರತಿಭಟನಾಕಾರಿಂದ ಪಲ್ಟಿಯಾಗಿರುವ ಪೊಲೀಸ್ ವಾಹನ
Updated on

ತಿರುವನಂತಪುರಂ: ಕೇರಳದ ವಿಳಿಂಜಮ್‌ ಪೊಲೀಸ್ ಠಾಣೆ ಮೇಲೆ ಭಾನುವಾರ ಮುತ್ತಿಗೆ ಹಾಕಿದ ಪ್ರಕರಣದಲ್ಲಿ ಸುಮಾರು 30 ಪೊಲೀಸರು ಗಾಯಗೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇನ್ನೂ 3,000 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಗಲಭೆ, ಕೊಲೆ ಯತ್ನ ಮತ್ತು ಸಾರ್ವಜನಿಕ ಆಸ್ತಿ ನಾಶಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಲ್ಯಾಟಿನ್ ಕ್ಯಾಥೋಲಿಕ್ ಚರ್ಚ್‌ಗೆ ಸೇರಿದ ಪ್ರತಿಭಟನಾಕಾರರು ನಡೆಸಿದ ಹಿಂಸಾಚಾರದಲ್ಲಿ 85 ಲಕ್ಷ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿ ಹಾನಿಯಾಗಿದೆ ಎಂದು ಎಫ್‌ಐಆರ್ ಹೇಳಿದೆ.

ವಿಳಿಂಜಮ್‌ ಬಂದರು ಪ್ರವೇಶದ್ವಾರದ ಮುಂದೆ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ ಬೆನ್ನಲ್ಲೇ, ಪ್ರತಿಭಟನಾಕಾರರು ವಿಳಿಂಜಮ್‌ ಪೊಲೀಸ್ ಠಾಣೆಯನ್ನು ಮುತ್ತಿಗೆ ಹಾಕಿದ್ದಾರೆ. ಈ ವೇಳೆ ಹಿಂಸಾಚಾರ ಸಂಭವಿಸಿದೆ. ಘಟನೆಯಲ್ಲಿ ಪೊಲೀಸರು ಗೊಯಗೊಂಡಿದ್ದಾರೆ. ಹತ್ತಿರದ ಮೀನುಗಾರಿಕಾ ಗ್ರಾಮಗಳಿಂದ ಪುರುಷರು ಮತ್ತು ಮಹಿಳೆಯರು ಈ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಐದಕ್ಕೂ ಹೆಚ್ಚು ಪೊಲೀಸ್ ವಾಹನಗಳಿಗೆ ಹಾನಿಯಾಗಿದ್ದು, ಪೊಲೀಸರು ಕೂಡ ಗಾಯಗೊಂಡಿದ್ದಾರೆ. ಗಾಯಗೊಂಡ ಪೊಲೀಸರನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಕರೆದಿದ್ದ ಆಂಬ್ಯುಲೆನ್ಸ್‌ಗಳನ್ನು ಪ್ರತಿಭಟನಾಕಾರರು ಆರಂಭದಲ್ಲಿ ತಡೆದರು. ಸಬ್‌ಇನ್ಸ್‌ಪೆಕ್ಟರ್ ಒಬ್ಬರ ಕಾಲುಗಳಿಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತುರ್ತು ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.

ಪ್ರತಿಭಟನಾಕಾರರು ಪೊಲೀಸ್ ಬಂದೋಬಸ್ತ್ ಸ್ಥಳಕ್ಕೆ ತಲುಪದಂತೆ ಗಂಟೆಗಳ ಕಾಲ ತಡೆದರು. ಪೊಲೀಸ್ ಸಿಬ್ಬಂದಿಯನ್ನು ಸಂಪೂರ್ಣವಾಗಿ ಸುತ್ತುವರೆದಿದ್ದರು. ಇದರಿಂದ ಸಿವಿಲ್ ಡ್ರೆಸ್‌ನಲ್ಲಿ ಪೊಲೀಸರು ಕೂಡ ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ ಎಂದು ಸ್ಪೆಷಲ್ ಬ್ರಾಂಚ್ ಮೂಲಗಳು ತಿಳಿಸಿವೆ. ಸ್ಥಳೀಯ ಟಿವಿ ಚಾನೆಲ್‌ಗೆ ಸೇರಿದ ಕ್ಯಾಮರಾಮನ್‌ಗಳೂ ಕೂಡ ಗಾಯಗೊಂಡಿದ್ದಾರೆ.

ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಮೂರು ಸುತ್ತು ಅಶ್ರುವಾಯು ಪ್ರಯೋಗಿಸಿದ್ದಾರೆ. ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯಿಂದಲೂ ಪಡೆಗಳನ್ನು ಸ್ಥಳಕ್ಕೆ ಕರೆಸಲಾಯಿತು. ಸದ್ಯ ಪಟ್ಟಣದಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ಕೂಡ ನಿಯೋಜಿಸಲಾಗಿದ್ದು, ಅಕ್ಕಪಕ್ಕದ ಜಿಲ್ಲೆಗಳು ಮತ್ತು ಪೊಲೀಸ್ ಶಿಬಿರಗಳಿಂದ ಹೆಚ್ಚಿನ ಪಡೆಗಳನ್ನು ಕರೆಸಲಾಗಿದೆ.

ವಿಳಿಂಜಮ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಳು ದಿನಗಳ ಕಾಲ ಮದ್ಯದಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ನಂತರ, ಚರ್ಚ್ ಮುಖಂಡರು ಮತ್ತು ಪೊಲೀಸರ ನಡುವೆ ಮಾತುಕತೆ ನಡೆಯಿತು ಮತ್ತು ಬಂಧಿತರಲ್ಲಿ ನಾಲ್ವರನ್ನು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಆದರೆ, ಶೆಲ್ಟನ್ ಎಂಬ ವ್ಯಕ್ತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಭಾನುವಾರ, ಮೆಟ್ರೋಪಾಲಿಟನ್ ಆರ್ಚ್ಬಿಷಪ್ ಥಾಮಸ್ ಜೆ ನೆಟ್ಟೊ ಸೇರಿದಂತೆ ಲ್ಯಾಟಿನ್ ಚರ್ಚ್ ಪಾದ್ರಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಪಿತೂರಿ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ನೆಟ್ಟೋ ಅವರನ್ನು ಮೊದಲ ಆರೋಪಿ ಎಂದು ಹೆಸರಿಸಲಾಗಿದೆ.

ನೆಟ್ಟೊ ಅಲ್ಲದೆ, ಹಿಂಸಾಚಾರಕ್ಕೆ ಸಂಬಂಧಿಸಿದ ವಿವಿಧ ಪ್ರಕರಣಗಳಲ್ಲಿ ಆರೋಪಿಗಳೆಂದು ಹೆಸರಿಸಲಾದ ಲ್ಯಾಟಿನ್ ಚರ್ಚ್‌ನ 50 ಪಾದ್ರಿಗಳ ಪೈಕಿ ಸಹಾಯಕ ಬಿಷಪ್ ಕ್ರಿಸ್ತದಾಸ್ ಮತ್ತು ವಿಕಾರ್ ಜನರಲ್ ಯುಜೀನ್ ಪೆರೇರಾ ಸೇರಿದ್ದಾರೆ. ಈ ಸಂಬಂಧ ಪೊಲೀಸರು ಒಟ್ಟು 10 ಪ್ರಕರಣಗಳನ್ನು ದಾಖಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com