ಮುಂಬೈ: 54 ವರ್ಷದ ದೇಶದ ಪ್ರಮುಖ ಉದ್ಯಮಿ ಟಾಟಾ ಸನ್ಸ್ ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಮತ್ತು ಇತರ ಮೂವರು ಅಹಮದಾಬಾದ್‌ನಿಂದ ಮುಂಬೈಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನಿನ್ನೆ ಅಪರಾಹ್ನ 3.15 ವೇಳೆಗೆ ತೀವ್ರ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ. ಮುಂಬೈನಿಂದ ಸುಮಾರು 120 ಕಿ.ಮೀ ದೂರದಲ್ಲಿರುವ ಪಾಲ್ಘರ್‌ನ ಸೇತುವೆಯ ಮೇಲೆ ಈ ಅಪಘಾತ ಸಂಭವಿಸಿದೆ.
ಅಪಘಾತ ಸಂಭವಿಸುವ ವೇಳೆ ಕಾರಿನಲ್ಲಿ ಮುಂಬೈನ ಪ್ರಸಿದ್ಧ ಸ್ತ್ರೀರೋಗತಜ್ಞ ಡಾ ಅನಾಹಿತಾ ಪಾಂಡೋಲೆ, ಅವರ ಜೊತೆಯಲ್ಲಿ ಅವರ ಪತಿ ಡೇರಿಯಸ್ ಪಾಂಡೋಲ್ ಇದ್ದರು. ಇಬ್ಬರೂ ಅಪಘಾತದಿಂದ ಪಾರಾಗಿದ್ದಾರೆ.
ನಾಲ್ವರು ಮರ್ಸಿಡಿಸ್ ಬೆಂಝ್ ಜಿಎಲ್‌ಸಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅತಿವೇಗದಲ್ಲಿ ಮತ್ತೊಂದು ಕಾರನ್ನು ಓವರ್ ಟೇಕ್ ಮಾಡಲು ಹೋಗಿ ಗುಂಡಿತುಂಬಿದ ರಸ್ತೆಯನ್ನು ಲೆಕ್ಕಿಸದೆ ಎಡದಿಂದ ಮತ್ತೊಂದು ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿದ್ದಾಗ ಕಾರು ಚಲಾಯಿಸುತ್ತಿದ್ದ ಡಾ.ಪಂಡೋಲ್ ನಿಯಂತ್ರಣ ಕಳೆದುಕೊಂಡು ಸೇತುವೆಯ ಮೇಲಿನ ರಸ್ತೆ ವಿಭಜಕಕ್ಕೆ ಹೋಗಿ ಕಾರು ಡಿಕ್ಕಿ ಹೊಡೆಯಿತು ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬದಿ ಕೂತಿದ್ದವರು ಸೀಟ್ ಬೆಲ್ಟ್ ಹಾಕಿದ್ದರಿಂದ ಮತ್ತು ಅಪಘಾತವಾದಾಗ ಏರ್ ಬ್ಯಾಗ್ ತೆರೆದಿದ್ದರಿಂದ ಕಾರಿನ ಮುಂಬದಿ ಕುಳಿತಿದ್ದವರು ಪಾರಾಗಿದ್ದಾರೆ. ಸೈರಸ್ ಮಿಸ್ತ್ರಿ ಮತ್ತು ಡೇರಿಯಸ್ ಸಹೋದರ ಜಹಾಂಗೀರ್ ಹಿಂಭಾಗದಲ್ಲಿದ್ದರು. ಇಬ್ಬರೂ ಮೃತಪಟ್ಟಿದ್ದಾರೆ. ಅವರು ಸೀಟ್ ಬೆಲ್ಟ್ ಧರಿಸಿದ್ದಾರೋ ಇಲ್ಲವೋ ಎಂದು ತನಿಖೆಯಿಂದ ಗೊತ್ತಾಗಲಿದೆ.
ಸೀಟ್ ಬೆಲ್ಟ್ ಧರಿಸಿರಲಿಲ್ಲ: ಭಾನುವಾರ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟ ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಮತ್ತು ಸಹ ಪ್ರಯಾಣಿಕ ಪ್ರಾಥಮಿಕ ತನಿಖೆಯ ಪ್ರಕಾರ ಸೀಟ್ ಬೆಲ್ಟ್ ಧರಿಸಿರಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ, ಅತಿಯಾದ ವೇಗವಾಗಿ ಮತ್ತು ನಿರ್ಲಕ್ಷ್ಯದಿಂದ ಕಾರು ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮುಂಬೈನಿಂದ 120 ಕಿ.ಮೀ ದೂರದಲ್ಲಿರುವ ಪಾಲ್ಘರ್ ಜಿಲ್ಲೆಯ ಚರೋಟಿ ಚೆಕ್ ಪೋಸ್ಟ್ ದಾಟಿದ ನಂತರ ಕೇವಲ 9 ನಿಮಿಷಗಳಲ್ಲಿ 20 ಕಿ.ಮೀ ದೂರವನ್ನು ಕಾರು ಕ್ರಮಿಸಿದೆ. ಸೂರ್ಯ ನದಿಯ ಸೇತುವೆಯ ಮೇಲೆ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದು, 54 ವರ್ಷದ ಮಿಸ್ತ್ರಿ ಮತ್ತು ಜಹಾಂಗೀರ್ ಪಾಂಡೋಲೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಚರೋಟಿ ಚೆಕ್ ಪೋಸ್ಟ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಹಿಡಿಯಲಾದ ದೃಶ್ಯಗಳನ್ನು ಪರಿಶೀಸಿದಾಗ, ಕಾರು ಪಾಲ್ಘರ್ ಚೆಕ್ ಪೋಸ್ಟ್ ನ್ನು ಮಧ್ಯಾಹ್ನ 2.21 ರ ಸುಮಾರಿಗೆ ದಾಟಿದೆ. ಅಪಘಾತವು 20 ಕಿಮೀ ಮುಂದೆ ಸಂಭವಿಸಿದೆ ಎಂದರು.
ಹಿಂದಿನ ಸೀಟಿನಲ್ಲಿ ಮಿಸ್ತ್ರಿ ಮತ್ತು ಜಹಾಂಗೀರ್ ಪಾಂಡೋಲೆ ಇದ್ದರು. ಡೇರಿಯಸ್ ಅನಾಹಿತಾ ಅವರೊಂದಿಗೆ ಮುಂಭಾಗದ ಸೀಟಿನಲ್ಲಿದ್ದರು. ಸ್ತ್ರೀರೋಗ ತಜ್ಞೆ ಕಾರು ಚಾಲನೆ ಮಾಡುತ್ತಿದ್ದು, ಎಡಭಾಗದಿಂದ ಮತ್ತೊಂದು ವಾಹನವನ್ನು ಹಿಂದಿಕ್ಕಲು ಯತ್ನಿಸಿದಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಮಿಸ್ತ್ರಿ ಮತ್ತು ಜಹಾಂಗೀರ್ ಪಾಂಡೋಲೆ ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮುಂಬೈನ ಸರ್ಕಾರಿ ಜೆಜೆ ಆಸ್ಪತ್ರೆಗೆ ಕಳುಹಿಸಲಾಗಿಯಿತು. ಅಪಘಾತದಲ್ಲಿ 55 ವರ್ಷದ ಅನಾಹಿತಾ ಪಾಂಡೋಲೆ ಮತ್ತು ಆಕೆಯ ಪತಿ ಡೇರಿಯಸ್ ಪಾಂಡೋಲೆ (60) ಗಂಭೀರವಾಗಿ ಗಾಯಗೊಂಡಿದ್ದಾರೆ.
ಸೈರಸ್ ಮಿಸ್ತ್ರಿಯವರ ತಂದೆ ಪಲ್ಲೋಂಜಿ ಶಾಪೂರ್ಜಿ ಮಿಸ್ತ್ರಿ ಅವರು ಎರಡು ತಿಂಗಳ ಹಿಂದೆ ನಿಧನರಾಗಿದ್ದರು. ಆದರೆ ಮಿಸ್ತ್ರಿಯವರ ನಿಧನ ಬಗ್ಗೆ ಹಲವು ಸಂದೇಹಗಳು ವ್ಯಕ್ತವಾಗಿದ್ದು ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಗೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆದೇಶಿಸಿದ್ದಾರೆ. ಮಹಾರಾಷ್ಟ್ರ ಡಿಜಿ ಈ ಅಪಘಾತದ ಎಲ್ಲಾ ಕೋನಗಳನ್ನು ತನಿಖೆ ಮಾಡಿ ತಮ್ಮ ವರದಿಯನ್ನು ಸಲ್ಲಿಸಲಿದ್ದಾರೆ.
ಮುಂಬೈಗೆ ಹೊಂದಿಕೊಂಡಿರುವ ಪಾಲ್ಘರ್ ಬಳಿ ನಡೆದ ಅಪಘಾತದಲ್ಲಿ ಮಿಸ್ತ್ರಿಯವರ ನಿಧನದ ಬಗ್ಗೆ ತಿಳಿದು ಆಘಾತ ಮತ್ತು ತೀವ್ರ ನೋವಾಗಿದೆ ಎಂದು ಫಡ್ನವಿಸ್ ಹೇಳಿದ್ದಾರೆ. ರಾಜ್ಯ ಗೃಹ ಸಚಿವರೂ ಆಗಿರುವ ಫಡ್ನವೀಸ್, ಡಿಜಿಪಿ ಜೊತೆ ಮಾತನಾಡಿ ವಿವರವಾದ ತನಿಖೆಗೆ ಸೂಚನೆ ನೀಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
Advertisement