ಗುಜರಾತ್ ಚುನಾವಣೆ: ಮತದಾರರನ್ನು ಓಲೈಸಲು ಸರ್ದಾರ್ ಪಟೇಲ್ ಕಾರ್ಡ್ ಬಳಸಿದ ರಾಹುಲ್; 500 ರೂ. ಗೆ ಎಲ್‌ಪಿಜಿ ಭರವಸೆ!

ಗುಜರಾತ್‌ನಲ್ಲಿ ತಮ್ಮ ಪಕ್ಷದ ಪ್ರಚಾರಕ್ಕೆ ಸೋಮವಾರ ಚಾಲನೆ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ರೈತರಿಗೆ ಉಚಿತ ವಿದ್ಯುತ್, 10 ಲಕ್ಷ ಹೊಸ ಉದ್ಯೋಗಗಳು ಮತ್ತು 500 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on

ಅಹಮದಾಬಾದ್: ಗುಜರಾತ್‌ನಲ್ಲಿ ತಮ್ಮ ಪಕ್ಷದ ಪ್ರಚಾರಕ್ಕೆ ಸೋಮವಾರ ಚಾಲನೆ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ರೈತರಿಗೆ ಉಚಿತ ವಿದ್ಯುತ್, 10 ಲಕ್ಷ ಹೊಸ ಉದ್ಯೋಗಗಳು ಮತ್ತು 500 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.

ಅಹಮದಾಬಾದ್‌ನ ಸಬರಮತಿ ನದಿಯ ಮುಂಭಾಗ ನಡೆದ ‘ಪರಿವರ್ತನ್ ಸಂಕಲ್ಪ ರ‍್ಯಾಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಹಾಲು ಉತ್ಪಾದಕರಿಗೆ ಲೀಟರ್‌ಗೆ 5 ರೂಪಾಯಿ ಸಬ್ಸಿಡಿ ನೀಡುವುದಾಗಿ ಭರವಸೆ ನೀಡಿದರು. ತಮ್ಮ 29.11 ನಿಮಿಷಗಳ ಭಾಷಣದಲ್ಲಿ, ಪಾಟಿದಾರ್ ಸಮುದಾಯವನ್ನು ಓಲೈಸುವ ಪ್ರಯತ್ನದಲ್ಲಿ ರಾಹುಲ್ ಸರ್ದಾರ್ ಪಟೇಲ್ ಅವರ ಹೆಸರನ್ನು ಕನಿಷ್ಠ 34 ಬಾರಿ ಉಚ್ಛರಿಸಿದರು.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, 'ಸರ್ದಾರ್ ಪಟೇಲ್ ಯಾರಿಗಾಗಿ ಹೋರಾಡಿದರು ಮತ್ತು ಏಕೆ? ಸರ್ದಾರ್ ಪಟೇಲ್ ಕೇವಲ ಮನುಷ್ಯನಾಗಿರಲಿಲ್ಲ. ನೀವು ಅವರ ದೇಹದ  ಪ್ರತಿಮೆಯನ್ನು ನಿರ್ಮಿಸಿದ್ದೀರಿ, ಆದರೆ ಅವರು ಕೇವಲ ಮನುಷ್ಯನಾಗಿರಲಿಲ್ಲ, ಅವರು ಗುಜರಾತ್ ಮತ್ತು ಭಾರತದ ರೈತರ ಧ್ವನಿಯಾಗಿದ್ದರು. ಅವರು ಏನೇ ಹೇಳಿದರೂ ಗುಜರಾತ್ ಮತ್ತು ಭಾರತದ ರೈತರ ಅನುಕೂಲಕ್ಕಾಗಿ ಆಗಿರುತ್ತಿತ್ತು. ಒಂದೆಡೆ ಸರ್ದಾರ್ ಪಟೇಲ್ ಅವರ ಅತಿ ಎತ್ತರದ ಪ್ರತಿಮೆಯನ್ನು ನಿರ್ಮಿಸಿ, ಮತ್ತೊಂದೆಡೆ ಸರ್ದಾರ್ ಪಟೇಲ್ ಯಾರಿಗಾಗಿ ಹೋರಾಡಿದರೋ ಅವರೆಲ್ಲರ ಮೇಲೆ ದಾಳಿ ಮಾಡಿದರೆ ಪ್ರತಿಮೆ ನಿರ್ಮಿಸಿದ್ದರ ಅರ್ಥವೇನು?' ಎಂದು ಪ್ರಶ್ನಿಸಿದರು.

'ಕಾಂಗ್ರೆಸ್ ಸೈದ್ಧಾಂತಿಕ ಹೋರಾಟ ನಡೆಸುತ್ತಿದೆ. ಗುಜರಾತ್ ಮಾದಕ ವಸ್ತುಗಳ ಕೇಂದ್ರವಾಗುತ್ತಿದೆ. ಮುಂದ್ರಾ ಬಂದರಿನಲ್ಲಿ ಲಕ್ಷಾಂತರ ಮೌಲ್ಯದ ಡ್ರಗ್ಸ್ ಪತ್ತೆಯಾಗಿದ್ದರೂ ಆಡಳಿತಾರೂಢ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಅದೇ ಬಡವರ ಮನೆಯಲ್ಲಿ ಡ್ರಗ್ಸ್ ಸಿಕ್ಕರೆ ಪೋಲೀಸರು ಹೊಡೆದು ಜೈಲಿಗೆ ಕಳುಹಿಸುತ್ತಾರೆ. ಆದರೆ, ಮುಂದ್ರಾ ಬಂದರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಪತ್ತೆಯಾದರೆ, ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಏಕೆಂದರೆ, ಮೂವರು ಕೈಗಾರಿಕೋದ್ಯಮಿಗಳಿಗೆ ಸರ್ಕಾರ ಸೇರಿದ್ದಾಗಿದೆ ಎಂಬ ಕಾರಣಕ್ಕೆ. ಇದು ಗುಜರಾತ್ ಮಾದರಿ. ಪ್ರತಿಭಟನೆ ನಡೆಸಲು ಅನುಮತಿ ಪಡೆಯುವ ನೀತಿಯ ಬಗ್ಗೆ ಗುಜರಾತ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ' ಎಂದು ಆರೋಪಿಸಿದರು.

'ಯಾರ ವಿರುದ್ಧ ಪ್ರತಿಭಟಿಸಬೇಕೋ ಅವರ ಬಳಿ ಅನುಮತಿ ಪಡೆಯಬೇಕು... ಸರ್ದಾರ್ ಪಟೇಲರು ಪ್ರತಿಭಟನೆಗೆ ಬ್ರಿಟಿಷರ ಅನುಮತಿ ಕೇಳಿದ್ದಾರಾ? ಪ್ರತಿಭಟಿಸಲು ಕೂಡ ಗುಜರಾತಿನ ಜನರು ಅನುಮತಿ ಪಡೆಯಬೇಕು ಎನ್ನುವ ಸರ್ಕಾರವನ್ನು ಹೊರಹಾಕಿ ಎಂದು ಸರ್ದಾರ್ ಪಟೇಲ್ ಹೇಳುತ್ತಿದ್ದರು' ಎಂದು ಅವರು ಹೇಳಿದರು.

ಕಾಂಗ್ರೆಸ್ ರೈತರ ಸಾಲ ಮನ್ನಾ ಮಾಡಲಿದೆ ಎಂದ ರಾಹುಲ್ ಗಾಂಧಿ, 'ನಾವು ಎಲ್ಲಿಯೇ  ಅಧಿಕಾರಕ್ಕೆ ಬಂದರೂ, ಸರ್ದಾರ್ ಪಟೇಲ್ ಅವರು ಮಾಡಿದ್ದನ್ನು ಮಾಡುವುದೇ ನಮ್ಮ ಮೊದಲ ಕೆಲಸ. ಇಲ್ಲೂ ಕೂಡ 3 ಲಕ್ಷದವರೆಗಿನ ರೈತರ ಸಾಲ ಮನ್ನಾ ಮಾಡುತ್ತೇವೆ' ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com