ಬಲವಂತವಾಗಿ ಮದುವೆಯಾಗಿ, ಗೃಹಬಂಧನದಲ್ಲಿಟ್ಟು ಇಸ್ಲಾಂಗೆ ಮತಾಂತರಿಸಲು ಯತ್ನ: ಕೇರಳದ ಕ್ರಿಶ್ಚಿಯನ್ ಮಹಿಳೆ ಆರೋಪ
ಕೊಚ್ಚಿ: ತನ್ನ ಪತಿ ಬಲವಂತವಾಗಿ ನನ್ನನ್ನು ಮದುವೆಯಾಗಿದ್ದು ಗೃಹಬಂಧನದಲ್ಲಿಟ್ಟು ಇಸ್ಲಾಂಗೆ ಮತಾಂತರಿಸಲು ಯತ್ನಿಸುತ್ತಿದ್ದಾರೆ ಎಂದು ಎರ್ನಾಕುಲಂ ನಿವಾಸಿ ಮಹಿಳೆಯೊಬ್ಬರ ಆರೋಪದ ಮೇಲೆ ಗುಪ್ತಚರ ಸಂಸ್ಥೆಗಳು ತನಿಖೆ ಆರಂಭಿಸಿವೆ.
ತಂದೆ-ತಾಯಿಯ ಮನೆಗೆ ಹೋದ ನಂತರ ಮತ್ತೆ ಬಾರದ ಪತ್ನಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಕೋರಿ ಪತಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಕೇರಳ ಹೈಕೋರ್ಟ್ ಪರಿಗಣಿಸಿತ್ತು. ನ್ಯಾಯಾಲಯದ ನಿರ್ದೇಶನದಂತೆ ಪೊಲೀಸರು ಕೆಲವು ತಿಂಗಳ ಹಿಂದೆ ಕ್ರಿಶ್ಚಿಯನ್ ಮಹಿಳೆಯ ಹೇಳಿಕೆಯನ್ನು ಪಡೆದಾಗ ಘಟನೆ ಬೆಳಕಿಗೆ ಬಂದಿದೆ.
ಪತಿ ವಿರುದ್ಧ ಮಹಿಳೆ ಗಂಭೀರ ಆರೋಪ ಮಾಡಿದ ನಂತರ ನಾವು ಮಾಹಿತಿಯನ್ನು ಪರಿಶೀಲಿಸುತ್ತಿದ್ದೇವೆ. ಮನೆಯ ಹೊರಗೆ ಬೇರೆ ಯಾರೊಂದಿಗೂ ಮಾತನಾಡಲು ಬಿಡುತ್ತಿರಲಿಲ್ಲ ಮತ್ತು ನಿರಂತರವಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಮಹಿಳೆ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬಳಿಕ ಹೈಕೋರ್ಟ್ ಹೇಬಿಯಸ್ ಕಾರ್ಪಸ್ ಅನ್ನು ವಜಾಗೊಳಿಸಿದೆ. ಬೆದರಿಕೆ ಮತ್ತು ಬಲವಂತದ ಆರೋಪಗಳು ನಿಜವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನ್ಯಾಯಾಲಯದ ಮುಂದೆ ಪತಿ ಸಲ್ಲಿಸಿದ ವಿವರಗಳ ಪ್ರಕಾರ, ಅವರು 2021ರ ಅಕ್ಟೋಬರ್ 13ರಂದು ವಿಶೇಷ ವಿವಾಹ ಕಾಯ್ದೆಯ ಪ್ರಕಾರ ಮಹಿಳೆಯನ್ನು ವಿವಾಹವಾಗಿದ್ದರು ಮತ್ತು ಅವರು ಪತಿ-ಪತ್ನಿಯಾಗಿ ವಾಸಿಸುತ್ತಿದ್ದರು. ಅವರ ಪತ್ನಿ 2021ರ ಡಿಸೆಂಬರ್ 15ರಂದು ತಮ್ಮ ಅನಾರೋಗ್ಯದ ಅಜ್ಜಿಯನ್ನು ನೋಡಲು ಅವರ ಪೋಷಕರ ಮನೆಗೆ ಹೋಗಿದ್ದರು ಮತ್ತು ಕ್ರಿಸ್‌ಮಸ್ ನಂತರವೂ ಹಿಂತಿರುಗಲಿಲ್ಲ ಎಂದು ಹೇಳಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದಾಗ, ಹೆಂಡತಿಯ ಒಪ್ಪಿಗೆಯ ವಿರುದ್ಧ ಆಕೆಯ ತಂದೆಯೇ ತನ್ನ ಹೆಂಡತಿಯನ್ನು ಅಕ್ರಮವಾಗಿ ಬಂಧನದಲ್ಲಿರಿಸಿದ್ದಾನೆ ಎಂದು ತಿಳಿಯಿತು ಎಂದಿದ್ದಾರೆ.
ಆದರೆ, ಹೈಕೋರ್ಟ್ ನಿರ್ದೇಶನದಂತೆ ಮಹಿಳೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಪೊಲೀಸ್ ತಂಡವು ಮಹಿಳೆಯನ್ನು ಭೇಟಿಯಾದಾಗ, ಮಹಿಳೆಯು ತಾನೇ ಹಿಂದೆ ಉಳಿಯಲು ನಿರ್ಧರಿಸಿದ್ದೇನೆ ಮತ್ತು ಅಲಪ್ಪುಳದಲ್ಲಿರುವ ತನ್ನ ಗಂಡನ ಮನೆಗೆ ಮರಳಲು ಬಯಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಮಹಿಳೆಯ ಹೇಳಿಕೆಯನ್ನು ನ್ಯಾಯಾಲಯದ ಮುಂದೆ ಸಲ್ಲಿಸಲಾಗಿದ್ದು, ಅದರ ಆಧಾರದ ಮೇಲೆ ಹೇಬಿಯಸ್ ಕಾರ್ಪಸ್ ಅರ್ಜಿಯು ಅರ್ಹವಲ್ಲ ಎಂದು ವಜಾಗೊಳಿಸಲಾಗಿದೆ' ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ನಂತರ ತಾನು ಆತನೊಂದಿಗೆ ಹೋಗಿದ್ದೆ.2021ರ ಸೆಪ್ಟೆಂಬರ್ 4ರಂದು ಬೆದರಿಕೆಯೊಡ್ಡಿ ಆತನ ಮನೆಗೆ ಕರೆದೊಯ್ಯಲಾಯಿತು. ಅಲ್ಲಿ ಆಕೆಯನ್ನು ಬಲವಂತವಾಗಿ ಕೋಣೆಯಲ್ಲಿ ಲಾಕ್ ಮಾಡಲಾಯಿತು. ಮದುವೆಗೆ ಒಪ್ಪಿಗೆ ಸೂಚಿಸುವಂತೆ ಬೆದರಿಕೆ ಹಾಕಿದ್ದರು ಎಂದು ಮಹಿಳೆ ದೂರಿದ್ದಾರೆ.
ಧಾರ್ಮಿಕ ದಾಖಲೆಗಳಲ್ಲಿ ಮಹಿಳೆಯ ಹೆಸರನ್ನು 'ಸಾರಾ ಬೀವಿ' ಎಂದು ನಮೂದಿಸಲಾಗಿದೆ ಮತ್ತು ವಿಶೇಷ ವಿವಾಹ ಕಾಯಿದೆಯ ಅಡಿಯಲ್ಲಿ ವಿವಾಹ ನಡೆದಿದೆ. ಮಾನಸಿಕ ಕಿರುಕುಳ ಮತ್ತು ಪದೇ ಪದೆ ತನ್ನನ್ನು ಇಸ್ಲಾಂಗೆ ಮತಾಂತರಿಸುವ ಪ್ರಯತ್ನಗಳಿಂದ ಬೇಸತ್ತು ತನ್ನ ಗಂಡನ ಮನೆಯಿಂದ ಹೊರಬಂದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ