ಮನೋಜ್ ಕುಮಾರ್
ಮನೋಜ್ ಕುಮಾರ್

'ಈ ರೊಟ್ಟಿನ ನಾಯಿ ಸಹ ತಿನ್ನಲ್ಲ' ಎಂದಿದ್ದ ಪೊಲೀಸ್ ಪೇದೆಯನ್ನು 600 ಕಿಮೀ ದೂರದ ಜಿಲ್ಲೆಗೆ ವರ್ಗಾವಣೆ

ಉತ್ತರ ಪ್ರದೇಶದ ಫಿರೋಜಾಬಾದ್ ಪೊಲೀಸ್ ಲೈನ್‌ನಲ್ಲಿರುವ ಮೆಸ್‌ನಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ವಿಡಿಯೋ ಪೋಸ್ಟ್ ಮಾಡಿದ್ದ ಪೊಲೀಸ್ ಪೇದೆಯನ್ನು ಫಿರೋಜಾಬಾದ್‌ನಿಂದ 600 ಕಿಮೀ ದೂರದಲ್ಲಿರುವ ಗಾಜಿಪುರ ಜಿಲ್ಲೆಗೆ ವರ್ಗಾವಣೆ ಮಾಡಿ ಶಿಕ್ಷೆ ನೀಡಲಾಗಿದೆ.
Published on

ಫಿರೋಜಾಬಾದ್: ಉತ್ತರ ಪ್ರದೇಶದ ಫಿರೋಜಾಬಾದ್ ಪೊಲೀಸ್ ಲೈನ್‌ನಲ್ಲಿರುವ ಮೆಸ್‌ನಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ವಿಡಿಯೋ ಪೋಸ್ಟ್ ಮಾಡಿದ್ದ ಪೊಲೀಸ್ ಪೇದೆಯನ್ನು ಫಿರೋಜಾಬಾದ್‌ನಿಂದ 600 ಕಿಮೀ ದೂರದಲ್ಲಿರುವ ಗಾಜಿಪುರ ಜಿಲ್ಲೆಗೆ ವರ್ಗಾವಣೆ ಮಾಡಿ ಶಿಕ್ಷೆ ನೀಡಲಾಗಿದೆ.

ಪೊಲೀಸ್ ಲೈನ್‌ನ ಹೊರಗೆ ಕಣ್ಣೀರು ಸುರಿಸುತ್ತಾ ಮತ್ತು ಕೈಯಲ್ಲಿ ಆಹಾರದ ತಟ್ಟೆಯೊಂದಿಗೆ ತನ್ನ ಅವಸ್ಥೆಯನ್ನು ಎತ್ತಿ ತೋರಿಸುತ್ತಿರುವ ವಿಡಿಯೋಗಳು ವೈರಲ್ ಆದ ಬಳಿಕ 26 ವರ್ಷದ ಕಾನ್‌ಸ್ಟೆಬಲ್ ಮನೋಜ್ ಕುಮಾರ್ ಅವರನ್ನು 'ದೀರ್ಘ ರಜೆ' ಮೇಲೆ ಕಳುಹಿಸಲಾಗಿತ್ತು.

12 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಿದ ಬಳಿಕವೂ ಪೊಲೀಸರಿಗೆ ಕಳಪೆ ಆಹಾರ ನೀಡಲಾಗುತ್ತಿದೆ. ಈ ರೊಟ್ಟಿಯನ್ನು ನಾಯಿ ಕೂಡ ತಿನ್ನುವುದಿಲ್ಲ. ನಮ್ಮ ಹೊಟ್ಟೆಯಲ್ಲಿ ಏನೂ ಇಲ್ಲದಿದ್ದರೆ, ನಾವು ಕೆಲಸ ಮಾಡುವುದು ಹೇಗೆ? ಎಂದು ಅವರು ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು.

ಅಲಿಗಢ ಜಿಲ್ಲೆಯ ನಿವಾಸಿಯಾಗಿರುವ ಮನೋಜ್ ಕುಮಾರ್, 'ನನ್ನ ಕುಟುಂಬದಲ್ಲಿ ಇಬ್ಬರು ಕಿರಿಯ ಸಹೋದರರು ಮತ್ತು ಅವಿವಾಹಿತ ಸೋದರಿ ಸೇರಿದಂತೆ ಒಟ್ಟು ಆರು ಜನರಿದ್ದಾರೆ. ನನ್ನ ಪೋಷಕರಿಗೆ ವಯಸ್ಸಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಂದ 600 ಕಿಮೀ ಗಳಿಗಿಂತಲೂ ಹೆಚ್ಚು ದೂರದಲ್ಲಿ ಕರ್ತವ್ಯ ನಿರ್ವಹಿಸುವಾಗ ನನ್ನ ಕುಟುಂಬದವರನ್ನು ನೋಡಿಕೊಳ್ಳುವುದು ನನಗೆ ತುಂಬಾ ಕಷ್ಟವಾಗುತ್ತದೆ. ನನ್ನ ಕುಟುಂಬದಲ್ಲಿ ನಾನು ಮಾತ್ರ ಸಂಪಾದಿಸುವ ಸದಸ್ಯ' ಎಂದು ಅಳಲು ತೋಡಿಕೊಂಡಿದ್ದಾರೆ.

ಪೊಲೀಸ್ ಪಡೆಯಲ್ಲಿರುವ ಕುಮಾರ್‌ನ ಸ್ನೇಹಿತರೊಬ್ಬರು, 'ನಿಜವಾದ ಸಮಸ್ಯೆಯನ್ನು ಎತ್ತಿದ್ದಕ್ಕಾಗಿ ಅವರಂತಹ ಪ್ರಾಮಾಣಿಕ ವ್ಯಕ್ತಿ ಇದೀಗ ಕಷ್ಟಪಡುವುದನ್ನು ನೋಡುವುದು ಬೇಸರ ತಂದಿದೆ. ಅವರು ತುಂಬಾ ಕಷ್ಟಪಟ್ಟು ಬಂದವರು ಮತ್ತು ಅವರ ಇಬ್ಬರು ಸಹೋದರರು ಇನ್ನೂ ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ವಾಸ್ತವವಾಗಿ, ಮನೋಜ್ ತನ್ನ ಶಿಕ್ಷಣವನ್ನು ಮುಂದುವರಿಸಲು ಬಾಲಕಾರ್ಮಿಕನಾಗಿಯೂ ಕೆಲಸ ಮಾಡುತ್ತಿದ್ದರು' ಎಂದು ಹೇಳಿದ್ದಾರೆ.

ಕಳಪೆ ಆಹಾರ ನೀಡಲಾಗುತ್ತಿದೆ ಎಂದು ದೂರಿದ್ದ ವಿಡಿಯೊ ವೈರಲ್ ಆದ ನಂತರ, ಫಿರೋಜಾಬಾದ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳು ಮೆಸ್‌ನಲ್ಲಿ ನೀಡಲಾದ ಆಹಾರದ ಗುಣಮಟ್ಟವನ್ನು ಪರಿಶೀಲಿಸಲು ಸರ್ಕಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇತರ ಜಿಲ್ಲೆಗಳಲ್ಲಿಯೂ ಪರಿಶೀಲನೆಗೆ ಇದೇ ರೀತಿಯ ಆದೇಶ ಹೊರಡಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com