20 ವರ್ಷಗಳಿಂದ ಕಾಣೆಯಾಗಿದ್ದ ತಾಯಿ, ಪಾಕಿಸ್ತಾನದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪತ್ತೆ!
20 ವರ್ಷಗಳಿಂದ ನಾಪತ್ತೆಯಾಗಿದ್ದ ತನ್ನ ತಾಯಿಯನ್ನು ಹುಡುಕಲು ಮುಂಬೈ ಮೂಲದ ಮಹಿಳೆಗೆ ಸಹಾಯ ಮಾಡಿದ ಸಾಮಾಜಿಕ ಮಾಧ್ಯಮವು ಇದೀಗ ಮತ್ತೊಮ್ಮೆ ಅಭಿನಂದನೆಗೆ ಪಾತ್ರವಾಗಿದೆ.
Published: 03rd August 2022 05:06 PM | Last Updated: 03rd August 2022 05:06 PM | A+A A-

ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾದ ಚಿತ್ರ
ಮುಂಬೈ: 20 ವರ್ಷಗಳಿಂದ ನಾಪತ್ತೆಯಾಗಿದ್ದ ತನ್ನ ತಾಯಿಯನ್ನು ಹುಡುಕಲು ಮುಂಬೈ ಮೂಲದ ಮಹಿಳೆಗೆ ಸಹಾಯ ಮಾಡಿದ ಸಾಮಾಜಿಕ ಮಾಧ್ಯಮವು ಇದೀಗ ಮತ್ತೊಮ್ಮೆ ಅಭಿನಂದನೆಗೆ ಪಾತ್ರವಾಗಿದೆ.
ತಮ್ಮ ತಾಯಿ ಅಡುಗೆ ಕೆಲಸಕ್ಕಾಗಿ ದುಬೈಗೆ ಹೋಗಿದ್ದರು. ಆದರೆ ಅವರು ಹಿಂತಿರುಗಲಿಲ್ಲ ಎಂದು ಬಹಿರಂಗಪಡಿಸುತ್ತಾರೆ ಮುಂಬೈನ ನಿವಾಸಿ ಯಾಸ್ಮಿನ್ ಶೇಖ್.
20 ವರ್ಷಗಳ ನಂತರ ನನ್ನ ತಾಯಿಯ ಬಗ್ಗೆ ವಿಡಿಯೊವನ್ನು ಪೋಸ್ಟ್ ಮಾಡಿದ್ದ ಪಾಕಿಸ್ತಾನ ಮೂಲದ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ನನಗೆ ತಿಳಿಯಿತು ಎಂದು ಯಾಸ್ಮಿನ್ ಶೇಖ್ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.
'ಆಕೆ 2-4 ವರ್ಷಗಳಿಗೆ ಕತಾರ್‌ಗೆ ಹೋಗುತ್ತಿದ್ದಳು. ಆದರೆ, ಈ ಬಾರಿ ಆಕೆ ಏಜೆಂಟರ ಸಹಾಯದಿಂದ ಹೋಗಿದ್ದಳು. ಬಳಿಕ ಹಿಂತಿರುಗಲೇ ಇಲ್ಲ. ನಾವು ಆಕೆಯನ್ನು ಹುಡುಕಲು ಪ್ರಾರಂಭಿಸಿದ್ದೆವು. ಆದರೆ, ನಮ್ಮ ಬಳಿ ಯಾವುದೇ ಪುರಾವೆಗಳಿಲ್ಲದ ಕಾರಣ ನಮಗೆ ದೂರು ನೀಡಲು ಸಾಧ್ಯವಾಗದೆ ಎಲ್ಲಾ ಪ್ರಯತ್ನಗಳು ವ್ಯರ್ಥವಾಯಿತು' ಎಂದು ಅವರು ಹೇಳಿದರು.
ನನ್ನ ತಾಯಿ ಹಮೀದಾ ಬಾನು ದುಬೈಗೆ ಅಡುಗೆ ಕೆಲಸ ಮಾಡಲು ಹೋಗಿದ್ದಳು ಮತ್ತು ಮತ್ತೆ ತನ್ನ ಕುಟುಂಬವನ್ನು ಸಂಪರ್ಕಿಸಿರಲಿಲ್ಲ ಎಂದು ಶೇಖ್ ಹೇಳಿದರು.
'ನನ್ನ ತಾಯಿ ಬಗ್ಗೆ ತಿಳಿದುಕೊಳ್ಳಲು ನಾವು ಏಜೆಂಟ್ ಅನ್ನು ಭೇಟಿ ಮಾಡಲು ಹೋದಾಗ, ನಮ್ಮ ತಾಯಿಗೆ ನಮ್ಮ ಬಳಿಯಲ್ಲಿ ಮಾತನಾಡಲು ಅಥವಾ ಭೇಟಿಯಾಗಲು ಇಷ್ಟಪಡುವುದಿಲ್ಲ ಎಂದು ಹೇಳಿದರು. ಅಲ್ಲದೆ, ನಮ್ಮ ತಾಯಿ ಚೆನ್ನಾಗಿದ್ದಾರೆ ಎಂದು ನಮಗೆ ಭರವಸೆ ನೀಡಿದ್ದರು. ಆದರೆ, ವಿಡಿಯೋದಲ್ಲಿ, 'ಸತ್ಯವನ್ನು ಯಾರಿಗೂ ಬಹಿರಂಗಪಡಿಸಬೇಡಿ ಎಂದು ಏಜೆಂಟ್ ಹೇಳಿದ್ದಾಗಿ ಸ್ಪಷ್ಟವಾಗಿ ಹೇಳಿದ್ದಾರೆ' ಎಂದು ಶೇಖ್ ತಿಳಿಸಿದ್ದಾರೆ.
'ವಿಡಿಯೊ ನೋಡಿದ ನಂತರವೇ ಆಕೆ ಪಾಕಿಸ್ತಾನದಲ್ಲಿ ವಾಸಿಸುತ್ತಿರುವ ಬಗ್ಗೆ ನಮಗೆ ತಿಳಿಯಿತು. ಇಲ್ಲದಿದ್ದರೆ ಅವಳು ದುಬೈ, ಸೌದಿ ಅಥವಾ ಬೇರೆಡೆ ಇದ್ದಾಳೆಯೇ ಎಂಬುದು ನಮಗೆ ತಿಳಿಯುತ್ತಿರಲಿಲ್ಲ. ವಿಡಿಯೊದಲ್ಲಿ ಆಕೆ ತಮ್ಮ ಪತಿ ಮತ್ತು ಒಡಹುಟ್ಟಿದವರ ಹೆಸರನ್ನು ಸ್ಪಷ್ಟವಾಗಿ ಹೇಳಿದ ಬಳಿಕವೇ ಆಕೆಯನ್ನು ಗುರುತಿಸಲಾಯಿತು' ಎಂದು ಅವರು ಹೇಳಿದರು.