ಭಾರತದ ನೂತನ ಉಪರಾಷ್ಟ್ರಪತಿಯಾಗಿ ಎನ್ ಡಿಎ ಅಭ್ಯರ್ಥಿ 'ಜಗದೀಪ್ ಧನಕರ್' ಆಯ್ಕೆ

ಭಾರತದ ನೂತನ ಉಪರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್ ಅವರು ಆಯ್ಕೆಯಾಗಿದ್ದಾರೆ. 
ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್
ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್

ನವದೆಹಲಿ: ಭಾರತದ ನೂತನ ಉಪರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್ ಅವರು ಆಯ್ಕೆಯಾಗಿದ್ದಾರೆ. 

ಇಂದು ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್‌ ಅವರು ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಮಾರ್ಗರೇಟ್ ಆಳ್ವ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. 

ದೆಹಲಿಯ ಸಂಸತ್ ಭವನದಲ್ಲಿ ಇಂದು ಬೆಳಿಗ್ಗೆ 10 ಗಂಟೆಯಿಂದ 5 ಗಂಟೆವರೆಗೆ ಚುನಾವಣೆ ನಡೆದಿದ್ದು, ನಂತರ ಮತ ಎಣಿಕೆ ನಡೆಸಲಾಗಿತ್ತು. ಲೋಕಸಭೆ ಮತ್ತು ರಾಜ್ಯಸಭೆ ಸೇರಿ ಒಟ್ಟು 780 ಸಂಸದರಿದ್ದು, 725 ಮಂದಿ ಮತದಾನ ಮಾಡಿದ್ದರು. ಒಟ್ಟು ಚಲಾವಣೆಯಾದ 725 ಮತಗಳ ಪೈಕಿ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್ 528 ಮತಗಳನ್ನು ಪಡೆದಿದ್ದರೆ, ವಿರೋಧ ಪಕ್ಷದ ಅಭ್ಯರ್ಥಿ ಮಾರ್ಗರೇಟ್ ಆಳ್ವಾ ಅವರು 182 ಮತಗಳನ್ನು ಪಡೆದಿದ್ದಾರೆ. 15 ಮತಗಳನ್ನು ಅಸಿಂಧು ಎಂದು ಘೋಷಿಸಲಾಗಿದೆ ಎಂದು ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಉತ್ಪಲ್ ಕುಮಾರ್ ಸಿಂಗ್ ತಿಳಿಸಿದ್ದಾರೆ. 

ಆ ಮೂಲಕ ಧನ್ಕರ್ ಅವರು 346 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಈ ಮೂಲಕ ಜಗದೀಪ್ ಧನಕರ್ ಅವರು ಭಾರತದ 14ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. 

ಇನ್ನು ರಾಜ್ಯಸಭೆ ಚುನಾಯಿತ ಮತ್ತು ನಾಮನಿರ್ದೇಶಿತ ಸದಸ್ಯರು ಹಾಗೂ ಲೋಕಸಭೆ ಚುನಾಯಿತ ಸದಸ್ಯರನ್ನು ಒಳಗೊಂಡಂತೆ 780 ಮತದಾರರಲ್ಲಿ 725 ಮತದಾರರು ತಮ್ಮ ಮತ ಚಲಾಯಿಸಿದ್ದಾರೆ. ಶೇ 92.94ರಷ್ಟು ಮತದಾನವಾಗಿದೆ ಎಂದು ಉತ್ಪಲ್ ಕುಮಾರ್ ಸಿಂಗ್ ಹೇಳಿದ್ದಾರೆ. 

ಪ್ರಸ್ತುತ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿರುವ ಧನಕರ್, ಪ್ರತಿಪಕ್ಷಗಳ ಅಭ್ಯರ್ಥಿ ಮಾರ್ಗರೆಟ್ ಆಳ್ವಾ ಅವ್ರನ್ನ ಮಣಿಸಿ, ಉಪರಾಷ್ಟ್ರಪತಿ ಗದ್ದುಗೆ ಏರಿದ್ದಾರೆ. ಈ ಹಿಂದೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತೃಣಮೂಲ ಕಾಂಗ್ರೆಸ್ ಶ್ರೀಮತಿ ಆಳ್ವಾ ಅವರ ಹೆಸರನ್ನ ನಿರ್ಧರಿಸುವಾಗ ಸಮಾಲೋಚನೆಗಳ ಕೊರತೆಯಿದೆ ಎಂದು ಆರೋಪಿಸಿ, ಮತದಾನದಿಂದ ದೂರ ಉಳಿದಿತ್ತು. ಈ ಮೂಲಕ ಪ್ರತಿಪಕ್ಷಗಳ ಒಗ್ಗಟ್ಟಿನಲ್ಲಿ ಬಿರುಕುಗಳು ಕಂಡುಬಂದವು.

ಧನ್ಕರ್ ಮೂಲ ಬಿಜೆಪಿಗರಲ್ಲ
71 ವರ್ಷದ ಜಗದೀಪ್ ಧನಕರ್ ಮೂಲ ಬಿಜೆಪಿಗರಲ್ಲ. ರಾಜಸ್ಥಾನದ ಜುಂಝುನು ಜಿಲ್ಲೆಯಲ್ಲಿ 1951ರ ಮೇ 18ರಂದು ಕಿತಾನಾ ಗ್ರಾಮದ ರೈತಾಪಿ ಕುಟುಂಬದಲ್ಲಿ ಜನಿಸಿದರು. 1989ರಲ್ಲಿ ಜನತಾದಳದ ಅಭ್ಯರ್ಥಿಯಾಗಿ ರಾಜಸ್ಥಾನದ ಜುಂಝುನು ಕ್ಷೇತ್ರದಿಂದ ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿ, ಗೆಲುವು ಕಂಡರು. ನಂತರ ಪಿವಿ ನರಸಿಂಹ ರಾವ್ ಅವರು ಪ್ರಧಾನಿಯಾದ ಬಳಿಕ ಕಾಂಗ್ರೆಸ್ ಸೇರ್ಪಡೆಯಾದರು. 1993ರಲ್ಲಿ ಕಿಶನ್‌ಗಡ ಕ್ಷೇತ್ರದಿಂದ ರಾಜಸ್ಥಾನದ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾದರು. ನಂತರ ಅಶೋಕ್ ಗೆಹ್ಲೋಟ್ ಅಧಿಕಾರಕ್ಕೆ ಬಂದ ಬಳಿಕ ಅಂದರೆ 2008ರಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಇನ್ನು 2019ರ ಜುಲೈ 30ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಧನ್ಕರ್ ಅವರನ್ನು ಪಶ್ಚಿಮ ಬಂಗಾಳ ರಾಜ್ಯಪಾಲರನ್ನಾಗಿ ನೇಮಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com