ಆಕೆ ನನ್ನ ಸೋದರಿಯಿದ್ದಂತೆ, ನನ್ನ ತಪ್ಪಿನ ಅರಿವಾಗಿದೆ ಎಂದ ನೋಯ್ಡಾದ ರಾಜಕಾರಣಿ ಶ್ರೀಕಾಂತ್ ತ್ಯಾಗಿ

ಮಹಿಳೆಯೊಬ್ಬರನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ನೋಯ್ಡಾದ ರಾಜಕಾರಣಿ ಶ್ರೀಕಾಂತ್ ತ್ಯಾಗಿ, ಆ ಮಹಿಳೆ 'ತನ್ನ ಸಹೋದರಿಯಂತೆ' ಮತ್ತು 'ತನ್ನ ತಪ್ಪಿನ ಅರಿವಾಗಿದೆ' ಎಂದು ಹೇಳಿದ್ದಾರೆ.
ಶ್ರೀಕಾಂತ್ ತ್ಯಾಗಿ
ಶ್ರೀಕಾಂತ್ ತ್ಯಾಗಿ

ನವದೆಹಲಿ: ಮಹಿಳೆಯೊಬ್ಬರನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ನೋಯ್ಡಾದ ರಾಜಕಾರಣಿ ಶ್ರೀಕಾಂತ್ ತ್ಯಾಗಿ, ಆ ಮಹಿಳೆ 'ತನ್ನ ಸಹೋದರಿಯಂತೆ' ಮತ್ತು 'ತನ್ನ ತಪ್ಪಿನ ಅರಿವಾಗಿದೆ' ಎಂದು ಹೇಳಿದ್ದಾರೆ.

'ಅವಾಚ್ಯ ಪದಗಳನ್ನು ಬಳಸಿದ ರೀತಿಗೆ ನಾನು ವಿಷಾದಿಸುತ್ತೇನೆ. ನಾನು ಹಾಗೆ ಮಾಡಬಾರದಿತ್ತು. ಆಕೆ ನನ್ನ ಸಹೋದರಿಯಂತೆ. ಯಾರಿಗೂ ಈ ರೀತಿಯ ಭಾಷೆಯನ್ನು ಬಳಸಬಾರದು ಎಂಬುದನ್ನು ಅರಿತುಕೊಂಡೆ. ಮಹಿಳೆಯರಿಗೆ ಸಮಾಜದಲ್ಲಿ ಗೌರವದ ಸ್ಥಾನವಿದೆ. ಆದ್ದರಿಂದ ಖಂಡಿತವಾಗಿಯೂ ಅದು ತಪ್ಪು. ನಾನು ಅದನ್ನು ಅರಿತುಕೊಂಡು, ಕ್ಷಮೆ ಕೇಳಲು ಸಿದ್ಧವಾಗಿದ್ದೇನೆ' ಎಂದು ಉತ್ತರ ಪ್ರದೇಶದ ಮೀರತ್‌ನಲ್ಲಿ ಬಂಧನದ ನಂತರ ಮಾಧ್ಯಮವೊಂದರ ಸಂದರ್ಶನದಲ್ಲಿ ತಿಳಿಸಿದ್ದಾರೆ.

ವಾಗ್ವಾದಕ್ಕೆ ಕಾರಣವಾದ ಘಟನೆಗಳ ಬಗ್ಗೆ ಕೇಳಿದಾಗ, 'ಬಿಲ್ಡರ್ ನೆಲ ಅಂತಸ್ತಿನ ಫ್ಲಾಟ್ ಖರೀದಿದಾರರಿಗೆ ಪ್ರಧಾನ ಸ್ಥಳದ ಶುಲ್ಕವಾಗಿ ಶೇ 5 ರಷ್ಟು ಹೆಚ್ಚುವರಿ ಶುಲ್ಕವನ್ನು ಪಡೆಯುತ್ತಾರೆ. ಪ್ರತಿಯಾಗಿ, ನಮ್ಮ ಫ್ಲಾಟ್‌ನ ಹೊರಗೆ ಹಸಿರು ಪ್ರದೇಶವನ್ನು ನಾವು ಪಡೆಯಬಹುದು. ಇದನ್ನು ಆಸ್ತಿ ನೋಂದಣಿ ಪತ್ರಗಳಲ್ಲಿ ಸಹ ಉಲ್ಲೇಖಿಸಲಾಗಿದೆ. ಇದಕ್ಕಾಗಿಯೇ ನಾವು 2019 ರಲ್ಲಿ ಅಲ್ಲಿ ತಾಳೆ ಮರಗಳನ್ನು ನೆಟ್ಟಿದ್ದೇವೆ. ಆದರೆ, ಅತಿಕ್ರಮಣವಾಗಿದೆ ಎಂದು ಜನರು ನಮ್ಮ ಮೇಲೆ ಆರೋಪ ಮಾಡಲು ಪ್ರಾರಂಭಿಸಿದರು' ಎಂದು ಅವರು ಹೇಳಿದರು.

2022ರ ಉತ್ತರ ಪ್ರದೇಶ ಚುನಾವಣೆಗೆ ಮುನ್ನ ಬಿಜೆಪಿ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡ ಸ್ವಾಮಿ ಪ್ರಸಾದ್ ಮೌರ್ಯ ಅವರೊಂದಿಗಿನ ಅವರ ಒಡನಾಟದ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ತ್ಯಾಗಿ, 'ನಾನು ಮೌರ್ಯ ಅವರನ್ನು ಯಾವುದೇ ಸಹಾಯವನ್ನು ಕೇಳಿಲ್ಲ. ಅವರು ಕೂಡ ನನಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಿಲ್ಲ' ಎಂದು ತಿಳಿಸಿದರು.

ಮಹಿಳೆಯೊಬ್ಬರನ್ನು ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿದ್ದ ವಿಡಿಯೋ ವೈರಲ್ ಆದ ನಂತರ ತ್ಯಾಗಿ ಪರಾರಿಯಾಗಿದ್ದರು. ಮೀರತ್‌ನ ಹೊರವಲಯದಲ್ಲಿರುವ ಸಹಾಯಕರೊಬ್ಬರ ಮನೆಯಿಂದ ನಿನ್ನೆ ಅವರನ್ನು ಬಂಧಿಸಲಾಗಿತ್ತು.

ನೋಯ್ಡಾದ ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಯಲ್ಲಿ ಮಹಿಳೆಯನ್ನು ಅವಾಚ್ಯವಾಗಿ ನಿಂದಿಸಿದ ವಿಡಿಯೋ ವೈರಲ್ ಆದ ಬಳಿಕ, ಉತ್ತರ ಪ್ರದೇಶ ಆಡಳಿತ ತ್ಯಾಗಿ ವಿರುದ್ಧ ಕಠಿಣ ಕ್ರಮ ಕೈಗೊಂಡಿತ್ತು. ತ್ಯಾಗಿ ಅವರ ನಿವಾಸದಲ್ಲಿನ ಅಕ್ರಮ ಕಟ್ಟಡಗಳನ್ನು ಬುಲ್ಡೋಜರ್ ಬಳಸಿ ನೆಲಸಮಗೊಳಿಸಿತ್ತು. ಅಲ್ಲದೆ, ಅವರ ವಿರುದ್ಧ ಕಠಿಣ ಗೂಂಡಾ ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com