26/11 ಮಾದರಿಯಲ್ಲಿ ಮತ್ತೆ ದಾಳಿ: ಅನಾಮಧೇಯ ವ್ಯಕ್ತಿಯಿಂದ ಮುಂಬೈ ಪೊಲೀಸರಿಗೆ ಬೆದರಿಕೆ

26/11 ಮಾದರಿಯಲ್ಲಿ ಮುಂಬೈನಲ್ಲಿ ಮತ್ತೆ ದಾಳಿ ಮಾಡಲಾಗುತ್ತದೆ ಎಂದು ಮುಂಬೈ ಪೊಲೀಸರಿಗೆ ಬೆದರಿಕೆ ಸಂದೇಶ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: 26/11 ಮಾದರಿಯಲ್ಲಿ ಮುಂಬೈನಲ್ಲಿ ಮತ್ತೆ ದಾಳಿ ಮಾಡಲಾಗುತ್ತದೆ ಎಂದು ಮುಂಬೈ ಪೊಲೀಸರಿಗೆ ಬೆದರಿಕೆ ಸಂದೇಶ ಬಂದಿದೆ.

ಮುಂಬೈ ಮಾದರಿಯಲ್ಲಿ ದಾಳಿ ಮಾಡುವುದಾಗಿ ಮುಂಬೈ ಪೊಲೀಸ್ ಕಂಟ್ರೋಲ್ ರೂಂನ ವಾಟ್ಸಪ್ ಗೆ ಪಾಕಿಸ್ತಾನ ಮೂಲದ ನಂಬರ್ ನಿಂದ ಬೆದರಿಕೆ ಸಂದೇಶ ಬಂದಿದ್ದು ಇದು ಆತಂಕ ಸೃಷ್ಟಿಯಾಗಿದೆ. ಮುಂಬೈ ಪೊಲೀಸ್‍ನ ಸಂಚಾರ ವಿಭಾಗದ ಹೆಲ್ಪ್ ಲೈನ್ ಗೆ ಬಂದಿರುವ ಸರಣಿ ಸಂದೇಶಗಳಲ್ಲಿ ಬೆದರಿಕೆ ಹಾಕಲಾಗಿದೆ. ಮೇಲ್ನೋಟಕ್ಕೆ ಈ ಸಂದೇಶ ಪಾಕಿಸ್ತಾನದಿಂದ ಬಂದಿರುವ ಮಾಹಿತಿ ಇದ್ದು, ಮೊಬೈಲ್ ಸಂಖ್ಯೆಯನ್ನು ಬದಲು ಮಾಡಿ, ಇಂಟರ್ನೆಟ್ ಮೂಲಕ ಸಂದೇಶ ಕಳುಹಿಸಲಾಗಿದೆ.

ಅದರಲ್ಲಿ 26/11 ಮಾದರಿಯಲ್ಲಿ ದಾಳಿ ನಡೆಸುವುದಾಗಿ ಬೆದರಿಕೆ ಹಾಕಲಾಗಿದ್ದು, ವರ್ಲಿಯಲ್ಲಿನ ನಿಯಂತ್ರಣ ಕೊಠಡಿಯಲ್ಲಿ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಸಂದೇಶ ಸ್ವೀಕಾರ್ಹವಾಗಿದೆ. ಸಂದೇಶವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಕ್ರೈಮ್ ಬ್ರಾಂಚ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

2008ರ ನವೆಂಬರ್ 26ರಂದು ಪಾಕಿಸ್ತಾನ ಮೂಲದ ಉಗ್ರರು ಮುಂಬೈನಲ್ಲಿ ದಾಳಿ ನಡೆಸಿ, 166 ಮಂದಿಯನ್ನು ಹತ್ಯೆ ಮಾಡಿ, 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಪಾಕಿಸ್ತಾನದ 10 ಶಸ್ತ್ರಸಜ್ಜಿತ ಭಯೋತ್ಪಾದಕರು ಮುಂಬೈನಲ್ಲಿ ದಾಳಿ ನಡೆಸಿದ್ದರು. ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ಎನಿಸಿತ್ತು.

ಈ ಕರಾಳ ಘಟನೆ ಮತ್ತೆ ಮರುಕಳಿಸಲಿದೆ ಎಂಬ ಮಾದರಿಯಲ್ಲಿ ಬೆದರಿಕೆ ಹಾಕಲಾಗಿದೆ. ಭಾರತದಲ್ಲಿ 6 ಜನರು ಈ ದಾಳಿಯನ್ನು ಕಾರ್ಯಗತಗೊಳಿಸುತ್ತಾರೆ ಎಂದು ಹೇಳಲಾಗಿದೆ. ಸ್ಥಳವನ್ನು ಟ್ರ್ಯಾಕ್‌ ಮಾಡಿದಾಗ ಪಾಕಿಸ್ತಾನ ಲೊಕೇಶನ್ ಕಂಡುಬಂದಿದೆ. ಈಗಾಗಲೇ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದು, ಕೇಂದ್ರೀಯ ತನಿಖಾ ಏಜೆನ್ಸಿಗಳಿಗೂ ಮಾಹಿತಿ ನೀಡಲಾಗಿದೆ.

ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಹರಿಹರೇಶ್ವರ ಬೀಚ್‌ನಲ್ಲಿ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದ್ದ ಅನುಮಾನಾಸ್ಪದ ದೋಣಿಯಲ್ಲಿ 3 ಎಕೆ–47 ರೈಫಲ್, ಗುಂಡುಗಳು ಸಿಕ್ಕಿದ್ದವು. ಇದರ ಬೆನ್ನಿಗೇ ಬಂದಿರುವ ಈ ಸಂದೇಶ ಆತಂಕಕ್ಕೆ ಕಾರಣವಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com