ಬೇಟಿ ಬಚಾವೋ ಎಂಬ ಪೊಳ್ಳು ಘೋಷಣೆ ನೀಡುವವರು ಅತ್ಯಾಚಾರಿಗಳನ್ನು ರಕ್ಷಿಸುತ್ತಿದ್ದಾರೆ: ರಾಹುಲ್ ಗಾಂಧಿ

ಗುಜರಾತ್ ಗಲಭೆಯಲ್ಲಿ ಬದುಕುಳಿದ ಬಿಲ್ಕಿಸ್ ಬಾನುಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಬೇಟಿ ಬಚಾವೋ' ಎಂಬ ಪೊಳ್ಳು ಘೋಷಣೆಗಳನ್ನು ನೀಡುವವರೇ ಅತ್ಯಾಚಾರಿಗಳನ್ನು ರಕ್ಷಿಸುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಗುಜರಾತ್ ಗಲಭೆಯಲ್ಲಿ ಬದುಕುಳಿದ ಬಿಲ್ಕಿಸ್ ಬಾನುಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಬೇಟಿ ಬಚಾವೋ' ಎಂಬ ಪೊಳ್ಳು ಘೋಷಣೆಗಳನ್ನು ನೀಡುವವರೇ ಅತ್ಯಾಚಾರಿಗಳನ್ನು ರಕ್ಷಿಸುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.

ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 11 ಮಂದಿಯನ್ನು ಗುಜರಾತ್ ಸರ್ಕಾರವು 11 ಅಪರಾಧಿಗಳನ್ನು ಆಗಸ್ಟ್ 15 ರಂದು ಬಿಡುಗಡೆ ಮಾಡಿತ್ತು. ಅಷ್ಟೆ ಅಲ್ಲದೆ, ಅಪರಾಧಿಗಳಿಗೆ ಹಾರ ಹಾಕಿ ಸ್ವಾಗತ ಕೋರಲಾಗಿತ್ತು. ಇದು ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.

'ಬೇಟಿ ಬಚಾವೋ' ಎಂಬ ಪೊಳ್ಳು ಘೋಷಣೆಗಳನ್ನು ನೀಡುವವರು ಅತ್ಯಾಚಾರಿಗಳನ್ನು ಕಾಪಾಡುತ್ತಿದ್ದಾರೆ. ಇಂದಿನ ಈ ಕ್ರಮವು ದೇಶದ ಮಹಿಳೆಯರ ಗೌರವ ಮತ್ತು ಹಕ್ಕುಗಳ ಬಗ್ಗೆ ಇರುವ ಪ್ರಶ್ನೆಯಾಗಿದೆ. ಬಿಲ್ಕಿಸ್ ಬಾನುಗೆ ನ್ಯಾಯ ಕೊಡಿ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಬಿಲ್ಕಿಸ್‌ ಬಾನುಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

'ಅತ್ಯಾಚಾರ ಮತ್ತು ಕೊಲೆ ಪ್ರಕರಣದ 11 ಜನ ಅಪರಾಧಿಗಳ ಬಿಡುಗಡೆಯ ಬಗ್ಗೆ ಮೌನ ವಹಿಸುವ ಮೂಲಕ ಸರ್ಕಾರವು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ ('ಸರ್ಕಾರ್ ನೆ ಲಕೀರ್ ಖೀಂಚ್ ಲಿ ಹೈ'), ಅಪರಾಧಿಗಳಿಗೆ ಸ್ವಾಗತ-ಬೆಂಬಲವನ್ನು ವ್ಯಕ್ತಪಡಿಸುವ ಕ್ರಮವು ಕ್ಯಾಮೆರಾದಲ್ಲಿ ಸೆರೆಯಾಗಿದೆ' ಎಂದು ಪ್ರಿಯಾಂಕಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಮುಂದುವರಿದು, 'ಆದರೆ ದೇಶದ ಮಹಿಳೆಯರಿಗೆ ಸಂವಿಧಾನದ ಮೇಲೆ ಭರವಸೆಯಿದೆ. ದೇಶದ ಕಟ್ಟಕಡೆಯ ಮಹಿಳೆಯೂ ನ್ಯಾಯಕ್ಕಾಗಿ ಹೋರಾಡಲು ನಮ್ಮ ಸಂವಿಧಾನ ಧೈರ್ಯ ನೀಡುತ್ತದೆ. ಬಿಲ್ಕಿಸ್ ಬಾನುಗೆ ನ್ಯಾಯ ಕೊಡಿ' ಎಂದು ಹೇಳಿದ್ದಾರೆ.

ಗೋಧ್ರಾ ರೈಲು ದಹನದ ನಂತರ ಭುಗಿಲೆದ್ದ ಗುಜರಾತ್ ಗಲಭೆಯಲ್ಲಿ ಮಾರ್ಚ್ 3, 2002 ರಂದು ಗುಜರಾತ್‌ನ ರಂಧಿಕ್‌ಪುರ್ ಗ್ರಾಮದಲ್ಲಿ ಬಿಲ್ಕಿಸ್ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು. ಅವರ ಮೂರು ವರ್ಷದ ಮಗಳು ಸೇರಿದಂತೆ, ಅವರ ಕುಟುಂಬದ ಏಳು ಮಂದಿಯನ್ನು ಕೊಲ್ಲಲಾಯಿತು. ಬಿಲ್ಕಿಸ್ ಬಾನು ಅವರಿಗೆ ಆಗ 21 ವರ್ಷ ವಯಸ್ಸಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com