ಸೋನಾಲಿ ಫೋಗಟ್ ಸಾವು: ಶಂಕಿತ ಡ್ರಗ್ ಪೆಡ್ಲರ್, ರೆಸ್ಟೋರೆಂಟ್ ಮಾಲೀಕನ ಬಂಧನ, ಸಿಬಿಐ ತನಿಖೆಗೆ ಕಾಂಗ್ರೆಸ್ ಆಗ್ರಹ

ಹರಿಯಾಣದ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರು ಆರೋಪಿಗಳಿಗೆ ಡ್ರಗ್ಸ್ ಸರಬರಾಜು ಮಾಡಿದ ಉತ್ತರ ಗೋವಾದ ರೆಸ್ಟೋರೆಂಟ್ ಮಾಲೀಕ ಮತ್ತು ಶಂಕಿತ ಡ್ರಗ್‌ ಪೆಡ್ಲರ್‌ನನ್ನು ಗೋವಾ ಪೊಲೀಸರು ಶನಿವಾರ ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋನಾಲಿ ಪೋಗಟ್
ಸೋನಾಲಿ ಪೋಗಟ್

ಪಣಜಿ: ಹರಿಯಾಣದ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರು ಆರೋಪಿಗಳಿಗೆ ಡ್ರಗ್ಸ್ ಸರಬರಾಜು ಮಾಡಿದ ಆರೋಪದ ಮೇಲೆ ಉತ್ತರ ಗೋವಾದ ರೆಸ್ಟೋರೆಂಟ್ ಮಾಲೀಕ ಮತ್ತು ಶಂಕಿತ ಡ್ರಗ್‌ ಪೆಡ್ಲರ್‌ನನ್ನು ಗೋವಾ ಪೊಲೀಸರು ಶನಿವಾರ ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾದಕವಸ್ತುಗಳನ್ನು ಖರೀದಿಸಿದ್ದೇವೆ ಎಂದು ಆರೋಪಿಗಳಿಬ್ಬರು ತಮ್ಮ ಹೇಳಿಕೆಯಲ್ಲಿ 'ತಪ್ಪೊಪ್ಪಿಗೆ' ನೀಡಿದ ನಂತರವೇ ಶಂಕಿತ ಡ್ರಗ್ ಪೆಡ್ಲರ್ ದತ್ತಪ್ರಸಾದ್ ಗಾಂವ್ಕರ್ ಹಾಗು ಕರ್ಲೀಸ್ ರೆಸ್ಟೋರೆಂಟ್‌ನ ಮಾಲೀಕ ಎಡ್ವಿನ್ ನ್ಯೂನ್ಸ್ ಎಂಬುವವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ಹೇಳಿದರು.

ಸೋನಾಲಿ ಫೋಗಟ್ ನಿಗೂಢ ಸಾವಿಗೂ ಮುನ್ನ ಆಗಸ್ಟ್ 22 ರಂದು ತಡರಾತ್ರಿ ಇದೇ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡಿದ್ದರು. ಹರಿಯಾಣದಿಂದ ಗೋವಾಕ್ಕೆ ಬಂದಿದ್ದ ಜನಪ್ರಿಯ ಟಿಕ್‌ಟಾಕ್ ತಾರೆ ಫೋಗಟ್ ಜೊತೆಯಲ್ಲಿದ್ದ ಸುಧೀರ್ ಸಗ್ವಾನ್ ಮತ್ತು ಸುಖವಿಂದರ್ ಸಿಂಗ್ ಅವರನ್ನು ಗೋವಾ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

42 ವರ್ಷದ ಫೋಗಟ್ ಅವರನ್ನು ಆಗಸ್ಟ್ 23ರಂದು ಉತ್ತರ ಗೋವಾ ಜಿಲ್ಲೆಯ ಅಂಜುನಾದ ಸೇಂಟ್ ಆಂಥೋನಿ ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಅವರು ಮೃತಪಟ್ಟಿರುವುದಾಗಿ ಘೋಷಿಸಲಾಗಿತ್ತು. ಅವರಿಗೆ ಹೃದಯಾಘಾತವಾಗಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಯೊಬ್ಬರು ಮೊದಲು ತಿಳಿಸಿದ್ದರು. ಬಳಿಕ ಗೋವಾ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು.

ಆಗಸ್ಟ್ 22 ಮತ್ತು 23ರ ಮಧ್ಯರಾತ್ರಿ ಕರ್ಲೀಸ್ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡುತ್ತಿದ್ದಾಗ ಸಗ್ವಾನ್ ಮತ್ತು ಸಿಂಗ್ ನೀರಿನಲ್ಲಿ ಕೆಲವು ಡ್ರಗ್ಸ್ ಅನ್ನು ಬೆರೆಸಿ ಅದನ್ನು ಕುಡಿಯಲು ಫೋಗಾಟ್‌ಗೆ ಒತ್ತಾಯಿಸಿದ್ದಾರೆ ಎಂದು ಪೊಲೀಸರು ಶುಕ್ರವಾರ ಹೇಳಿದ್ದಾರೆ.

ಫೋಗಟ್ ಹತ್ಯೆಯ ಹಿಂದಿನ ಉದ್ದೇಶವು 'ಆರ್ಥಿಕ ಹಿತಾಸಕ್ತಿ'ಯಾಗಿರಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಹಲವು ರಾಜಕಾರಣಿಗಳು ಆಕೆಯ ಸಾವು ಹೃದಯಾಘಾತದಿಂದ ಸಂಭವಿಸಿದೆ ಎಂದು ಹೇಳಿದ್ದರು. ಆದರೆ ಅಂತಿಮವಾಗಿ ಅದು ಕೊಲೆ ಎಂದು ತಿಳಿದುಬಂದಿದೆ. ಈ ಕೊಲೆಯಲ್ಲಿ ಕಣ್ಣಿಗೆ ಬೀಳುವುದಕ್ಕಿಂತ ಹೆಚ್ಚಿನದ್ದು ಅಡಗಿದೆ ಮತ್ತು ಪ್ರತಿಯೊಂದು ಕೋನದಿಂದಲೂ ತನಿಖೆ ಮಾಡಬೇಕಾಗಿದೆ. ಸತ್ಯವನ್ನು ತೆರೆದಿಡಲು ಈ ರೀತಿಯ ಪ್ರಕರಣಗಳ ತನಿಖೆಯನ್ನು ಸಿಬಿಐ ನಡೆಸುವ ಅಗತ್ಯವಿದೆ' ಎಂದು ಗೋವಾ ವಿರೋಧ ಪಕ್ಷದ ನಾಯಕ ಮೈಕೆಲ್ ಲೋಬೊ ಪಿಟಿಐಗೆ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com