ರಾಹುಲ್ ಗಾಂಧಿಯೇ ಕಾಂಗ್ರೆಸ್ ನಾಯಕತ್ವ ವಹಿಸಬೇಕು, ಅವರಿಂದಲೇ ಪಕ್ಷವನ್ನು ಮೇಲೆತ್ತಲು ಸಾಧ್ಯ: ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ಪಕ್ಷವನ್ನು ಹಾಲಿ ಬಿಕ್ಕಟ್ಟಿನಿಂದ ಮೇಲೆತ್ತುವ ಸಾಮರ್ಥ್ಯ ರಾಹುಲ್ ಗಾಂಧಿಗೆ ಮಾತ್ರ ಇದ್ದು, ಪಕ್ಷದ ನಾಯಕತ್ವವನ್ನು ಅವರೇ ವಹಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ರಾಜ್ಯಸಭಾ ಸಂಸದ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಹೇಳಿದ್ದಾರೆ.
Published: 28th August 2022 07:51 PM | Last Updated: 28th August 2022 07:51 PM | A+A A-

ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ಕಾಂಗ್ರೆಸ್ ಪಕ್ಷವನ್ನು ಹಾಲಿ ಬಿಕ್ಕಟ್ಟಿನಿಂದ ಮೇಲೆತ್ತುವ ಸಾಮರ್ಥ್ಯ ರಾಹುಲ್ ಗಾಂಧಿಗೆ ಮಾತ್ರ ಇದ್ದು, ಪಕ್ಷದ ನಾಯಕತ್ವವನ್ನು ಅವರೇ ವಹಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ರಾಜ್ಯಸಭಾ ಸಂಸದ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, 'ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಇಂದು ಇಡೀ ಪರಿಸ್ಥಿತಿ ಸ್ಪಷ್ಟವಾಗಿದೆ. ನನ್ನ ವೈಯಕ್ತಿಕ ಅಭಿಪ್ರಾಯ ಎಂದರೆ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ನೇತೃತ್ವವನ್ನು ವಹಿಸಬೇಕು. ಇದು ಎಲ್ಲಾ ಕಾರ್ಯಕರ್ತರ ಭಾವನೆಯಾಗಿದೆ. ಹಾಲಿ ಇರುವ ಪರಿಸ್ಥಿತಿಯಿಂದ ಪಕ್ಷವನ್ನು ರಾಹುಲ್ ಗಾಂಧಿ ಮಾತ್ರ ಮೇಲಕ್ಕೆತ್ತಬಲ್ಲರು. ಅವರು ಪಕ್ಷವನ್ನು ಒಗ್ಗೂಡಿಸುತ್ತಾರೆ ಮತ್ತು ಬಲಪಡಿಸುತ್ತಾರೆ. ಭಾರತ್ ಜೋಡೋ ಕಾರ್ಯಕ್ರಮದಲ್ಲೂ ಜನರನ್ನು ಒಟ್ಟುಗೂಡಿಸುವ ಸಾಮರ್ಥ್ಯ ಅವರಿಗೆ ಮಾತ್ರ ಇದೆ ಎಂದು ಹೇಳಿದರು.
ಇದನ್ನೂ ಓದಿ: CWC ಸಭೆ: ಅ. 17ರಂದು ಹೊಸ ಕಾಂಗ್ರೆಸ್ ಅಧ್ಯಕ್ಷರ ನೇಮಕ ಚುನಾವಣೆ; ಅ.19ಕ್ಕೆ ಮತ ಎಣಿಕೆ!
ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ವೇಳಾಪಟ್ಟಿಯನ್ನು ನಿರ್ಧರಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆ ಭಾನುವಾರ ನಡೆಯಿತು. ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಈ ಸಭೆ ನಡೆಯಿತು. ಸಭೆಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಭಾಗವಹಿಸಿದ್ದರು. ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಕೂಡ ವರ್ಚುವಲ್ ಮೋಡ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಇನ್ನು ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಅಕ್ಟೋಬರ್ 17 ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 19 ರಂದು ಮತ ಎಣಿಕೆ ನಡೆಯಲಿದೆ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಇದನ್ನೂ ಓದಿ: ದೇಶಕ್ಕಾಗಿ ಖಾದಿ ಆದರೆ ರಾಷ್ಟ್ರಧ್ವಜಕ್ಕೆ ಚೈನೀಸ್ ಪಾಲಿಸ್ಟರ್: ಪ್ರಧಾನಿಯನ್ನು ಟೀಕಿಸಿದ ರಾಹುಲ್ ಗಾಂಧಿ
ಪಕ್ಷದ ಹೇಳಿಕೆಯ ಪ್ರಕಾರ, ಸೆಪ್ಟೆಂಬರ್ 22 ರಂದು ಚುನಾವಣಾ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗುವುದು. ಸೆಪ್ಟೆಂಬರ್ 24 ರಿಂದ ಸೆಪ್ಟೆಂಬರ್ 30 ರ ನಡುವೆ ನಾಮಪತ್ರ ಸಲ್ಲಿಸಬಹುದು. ಅಕ್ಟೋಬರ್‌ನಲ್ಲಿ ಪರಿಶೀಲನೆ ನಡೆಯಲಿದೆ ಮತ್ತು ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಅಕ್ಟೋಬರ್ 8 ಆಗಿದೆ. ಅಂತಿಮವಾಗಿ, ಅಕ್ಟೋಬರ್ 19 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಪಕ್ಷದ ಪತನಕ್ಕೆ ರಾಹುಲ್ ಗಾಂಧಿ ಕಾರಣ ಎಂದು ರಾಜೀನಾಮೆ ನೀಡಿದ ತೆಲಂಗಾಣ ಕಾಂಗ್ರೆಸ್ ನಾಯಕ
ಅಂತೆಯೇ ಸೆಪ್ಟೆಂಬರ್ 4 ರಂದು ನವದೆಹಲಿಯಲ್ಲಿ ಮೆಹಂಗೈ ಪರ್ ಹಲ್ಲಾ ಬೋಲ್ ರ್ಯಾಲಿಯನ್ನು ಮತ್ತು ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಲು ಮತ್ತು ಅದರ ನಂತರ ಅದರ ಮುಂದುವರಿಕೆ ಅದ್ಭುತ ಯಶಸ್ಸನ್ನು ಮಾಡುವ ತನ್ನ ಸಂಕಲ್ಪವನ್ನು CWC ಪುನರುಚ್ಚರಿಸಿದೆ.