ಜಾರ್ಖಂಡ್ ರಾಜಕೀಯ ಬಿಕ್ಕಟ್ಟು: ಯುಪಿಎ ಶಾಸಕರು ಮತ್ತೆ ರೆಸಾರ್ಟ್‌ಗೆ ರವಾನೆ

ಜಾರ್ಖಂಡ್‌ನಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ಯುಪಿಎ ಮೈತ್ರಿಕೂಟ ಶಾಸಕರನ್ನು ಛತ್ತೀಸ್‌ಗಡ ರೆಸಾರ್ಟ್ ಗೆ ರವಾನಿಸಲಾಗಿದೆ.
ರೆಸಾರ್ಟ್ ನತ್ತ ಶಾಸಕರು
ರೆಸಾರ್ಟ್ ನತ್ತ ಶಾಸಕರು

ರಾಂಚಿ: ಜಾರ್ಖಂಡ್‌ನಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ಯುಪಿಎ ಮೈತ್ರಿಕೂಟ ಶಾಸಕರನ್ನು ಛತ್ತೀಸ್‌ಗಡ ರೆಸಾರ್ಟ್ ಗೆ ರವಾನಿಸಲಾಗಿದೆ.

ಶಾಸಕರ ಕುದುರೆ ವ್ಯಾಪಾರದ ಭೀತಿ ಹಿನ್ನಲೆಯಲ್ಲಿ ಜೆಎಂಎಂ ಮತ್ತು ಕಾಂಗ್ರೆಸ್ ಮೈತ್ರಿಕೂಟ ಯುಪಿಎ ಶಾಸಕರನ್ನು ರೆಸಾರ್ಟ್ ಗೆ ರವಾನಿಸಿದೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ನಿವಾಸದಿಂದ ಎರಡು ಖಾಸಗಿ ಬಸ್ಸುಗಳಲ್ಲಿ ಶಾಸಕರು ರಾಂಚಿ ವಿಮಾನ ನಿಲ್ದಾಣದತ್ತ ಪ್ರಯಾಣಿಸಿದ್ದಾರೆ. ಅಲ್ಲಿಂದ ಅವರಿಗೆ ರಾಯ್‌ಪುರಕ್ಕೆ ವಿಮಾನ ಕಾಯ್ದಿರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸೊರೇನ್ ಸಹ ಬಸ್ಸೊಂದರಲ್ಲಿ ಕಾಣಿಸಿಕೊಂಡಿದ್ದು, ಅವರೂ ಸಹ ಶಾಸಕರೊಂದಿಗೆ ಇರಲಿದ್ದಾರೆ ಎನ್ನಲಾಗಿದೆ.

32 ಶಾಸಕರು ಸೇರಿದಂತೆ ಒಟ್ಟು 41 ಜನರು ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣಕ್ಕೆ ಬಂದಿಳಿದರು ಮತ್ತು ಮೂರು ಬಸ್‌ಗಳಲ್ಲಿ ಅವರನ್ನು ವಿಮಾನ ನಿಲ್ದಾಣದಿಂದ ನವ ರಾಯಪುರದ ಮೇಫೇರ್ ರೆಸಾರ್ಟ್‌ಗೆ ಕರೆದೊಯ್ಯಲಾಯಿತು ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ. 

ಛತ್ತೀಸ್‌ಗಡದ ರಾಯ್‌ಪುರದಲ್ಲಿರುವ ರೆಸಾರ್ಟೊಂದಕ್ಕೆ ಶಾಸಕರನ್ನು ಕರೆದೊಯ್ಯುವ ನಿರೀಕ್ಷೆ ಇದ್ದು, ಮಹಾರಾಷ್ಟ್ರ ಮಾದರಿಯಲ್ಲಿ ಸೊರೇನ್ ಅವರ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಹಾಗೂ ಕಾಂಗ್ರೆಸ್ ಶಾಸಕರ ಖರೀದಿಗೆ ಬಿಜೆಪಿ ಯತ್ನಿಸಿದೆ ಎಂಬ ಆರೋಪಗಳು ಕೇಳಿಬಂದಿವೆ.

ಜಾರ್ಖಂಡ್ ರಾಜಕೀಯ ಬೆಳವಣಿಗೆಗೆ ಸಂಬಂಧಿಸಿ ಜೆಎಂಎಂ, ಕಾಂಗ್ರೆಸ್ ಮತ್ತು ಆರ್‌ಜೆಡಿ ಭಾನುವಾರ ಸರಣಿ ಸಭೆ ನಡೆಸಿದ್ದವು. ಸಿಎಂ ಸದಸ್ಯತ್ವಕ್ಕೆ ಸಂಬಂಧಿಸಿದ ನಿರ್ಧಾರವನ್ನು ಘೋಷಿಸಲು ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ. ಈ ಮೂಲಕ ರಾಜ್ಯಪಾಲರು ಕುದುರೆ ವ್ಯಾಪಾರವನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಯುಪಿಎ ಆರೋಪಿಸಿತ್ತು.

ಮೂರನೇ ಬಾರಿಗೆ ಶಾಸಕರ ರೆಸಾರ್ಟ್ ಪ್ರವಾಸ
ಕಳೆದ ಒಂದೂವರೆ ವರ್ಷಗಳಲ್ಲಿ ಇದು ಮೂರನೇ ಬಾರಿಗೆ ಯುಪಿಎ ಮೈತ್ರಿಕೂಟ ಶಾಸಕರ ರೆಸಾರ್ಟ್ ವಾಸ್ತವ್ಯ ಮಾಡಿದೆ. ಈ ಹಿಂದೆ ಛತ್ತೀಸ್‌ಗಢದ ರಾಜಧಾನಿಯಿಂದ ಸುಮಾರು 10 ಕಿಮೀ ದೂರದಲ್ಲಿರುವ ಮೇಫೇರ್ ನಲ್ಲಿರುವ `ಸೇಫ್ ಹೆವೆನ್' ರೆಸಾರ್ಟ್ ಗೆ 17 ಕಾಂಗ್ರೆಸ್ ಶಾಸಕರು ಮತ್ತು 15 ಜೆಎಂಎಂ ಶಾಸಕರನ್ನು ಇರಿಸಲಾಗಿತ್ತು.  ಜೂನ್‌ನಲ್ಲಿ, ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನದ ಭಯದಿಂದ, ಹರಿಯಾಣದ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ತನ್ನ ಶಾಸಕರನ್ನು ರಾಯ್‌ಪುರಕ್ಕೆ ಸ್ಥಳಾಂತರಿಸಿತ್ತು.

ಕಳೆದ ವರ್ಷದ ಅಸ್ಸಾಂ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಕೂಟದ ಸದಸ್ಯರಾಗಿದ್ದ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ತನ್ನ ಬೆಂಬಲಿತ ಶಾಸಕರನ್ನು ಇದೇ ರೀತಿ ಏಪ್ರಿಲ್ 2021 ರಲ್ಲಿ ಮತಗಳ ಎಣಿಕೆಗೆ ಮುಂಚಿತವಾಗಿ ರಾಯ್‌ಪುರಕ್ಕೆ ಕರೆತರಲಾಗಿತ್ತು. 

ಹೇಮಂತ್‌ ಸೊರೇನ್‌ ಅವರು ಕಳೆದ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಗಣಿಗಾರಿಕೆ ಗುತ್ತಿಗೆ ನವೀಕರಣದಲ್ಲಿ ಮಾಡಿದ ಅಕ್ರಮದ ಕಾರಣಕ್ಕೆ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಬಿಜೆಪಿ ಜಾರ್ಖಂಡರ್ ರಾಜ್ಯಪಾಲರಿಗೆ ಪತ್ರ ಬರೆದಿದೆ ಎಂದು ಹೇಳಲಾಗುತ್ತಿದೆ. ಈ ಬೆಳವಣಿಗೆ ನಂತರ ಅಲ್ಲಿನ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಯಾಗಿದೆ.

ಜಾರ್ಖಂಡ್‌ನಲ್ಲಿ JMM, ಕಾಂಗ್ರೆಸ್ ಮತ್ತು RJD ಒಳಗೊಂಡಿರುವ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ 81 ಸದಸ್ಯರ ಅಸೆಂಬ್ಲಿಯಲ್ಲಿ 49 ಶಾಸಕರನ್ನು ಹೊಂದಿದೆ. ಮೈತ್ರಿ ಸರ್ಕಾರಕ್ಕೆ ಏಕೈಕ CPIML (L) ಶಾಸಕರು ಬಾಹ್ಯ ಬೆಂಬಲ ನೀಡಿದ್ದಾರೆ. ಅತಿದೊಡ್ಡ ಪಕ್ಷವಾದ ಜೆಎಂಎಂ 30 ಶಾಸಕರನ್ನು ಹೊಂದಿದೆ, ಕಾಂಗ್ರೆಸ್ 18 ಶಾಸಕರನ್ನು ಮತ್ತು ಆರ್‌ಜೆಡಿ ಒಂದು ಶಾಸಕರನ್ನು ಹೊಂದಿದೆ. ಸದನದಲ್ಲಿ ಪ್ರಮುಖ ಪ್ರತಿಪಕ್ಷ ಬಿಜೆಪಿ 26 ಶಾಸಕರನ್ನು ಹೊಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com