ಜೂಜಿನ ಗೀಳು: ತನ್ನನ್ನು ತಾನೇ ಸೋತ ಎರಡು ಮಕ್ಕಳ ತಾಯಿ, ಈಗ ಬೇರೊಬ್ಬನ ಪಾಲು; ಗಂಡನ ಗೋಳು!
ಜೂಜಿನ ಗೀಳಿಗೆ ಬಲಿಯಾದ ಮಹಿಳೆಯೊಬ್ಬಳು ತನ್ನನ್ನು ತಾನೇ ಪಣಕ್ಕಿಟ್ಟು ಸೋತು ಇದೀಗ ಬೇರೊಬ್ಬನ ಪಾಲಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
Published: 06th December 2022 03:45 PM | Last Updated: 06th December 2022 05:06 PM | A+A A-

ಲೂಡೋ (ಸಂಗ್ರಹ ಚಿತ್ರ)
ಪ್ರತಾಪಗಢ: ಜೂಜಿನ ಗೀಳಿಗೆ ಬಲಿಯಾದ ಮಹಿಳೆಯೊಬ್ಬಳು ತನ್ನನ್ನು ತಾನೇ ಪಣಕ್ಕಿಟ್ಟು ಸೋತು ಇದೀಗ ಬೇರೊಬ್ಬನ ಪಾಲಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಜೂಜಾಟದ ದಾಸ್ಯಕ್ಕೆ ಬಿದ್ದ ಪಾಂಡವರು, ದ್ರೌಪದಿಯನ್ನು ಕೌರವರಿಗೆ ಪಣವಿಟ್ಟ ಕಥೆಯನ್ನು ನಾವೆಲ್ಲ ಕೇಳಿದ್ದೇವೆ. ಅಂತೆಯೇ ಗಂಡಂದಿರುವ ತಮ್ಮ ಪತ್ನಿಯನ್ನು ಪಣಕ್ಕಿಟ್ಟು ಜೂಜಾಟ ಆಡಿರುವ ಸುದ್ದಿಗಳನ್ನೂ ಕೇಳಿದ್ದೇವೆ... ಆದರೆ ಜೂಜಿನ ಗೀಳಿಗೆ ಬಿದ್ದ ಓರ್ವ ಮಹಿಳೆ ತನ್ನೆಲ್ಲಾ ಹಣ ಕಳೆದುಕೊಂಡು ಕೊನೆಗೆ ತನ್ನನ್ನೇ ತಾನು ಪಣಕ್ಕಿಟ್ಟು ಸೋತು ಇದೀಗ ಬೇರೊಬ್ಬನ ಪಾಲಾಗಿದ್ದಾಳೆ.
ಇದನ್ನೂ ಓದಿ: ಆನ್ ಲೈನ್ ಗೇಮ್, ಬೆಟ್ಟಿಂಗ್ ನಿಷೇಧ: ರಾಜ್ಯ ಸರ್ಕಾರದ ತಿದ್ದುಪಡಿ ಕಾಯಿದೆ ಆದೇಶ ರದ್ದುಗೊಳಿಸಿದ ಹೈಕೋರ್ಟ್
ಹೌದು.. ಮಹಾಭಾರತದ ದ್ರೌಪದಿಯನ್ನೂ ಮೀರಿಸುವಂತೆ ಉತ್ತರ ಪ್ರದೇಶದ ಮಹಿಳೆಯೊಬ್ಬಳು ಜೂಜಾಟಕ್ಕೆ ತನ್ನನ್ನು ತಾನೇ ಪಣಕ್ಕಿಟ್ಟು ಸೋತು ಇದೀಗ ಬೇರೊಬ್ಬನ ಪಾಲಾಗಿದ್ದಾಳೆ. ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ನಗರ್ ಕೊತ್ವಾಲಿಯಲ್ಲಿ ಈ ನಡೆದಿದ್ದು, ಲೂಡೊ ಚಟಕ್ಕೆ ಬಿದ್ದ ವಿವಾಹಿತ ಮಹಿಳೆಯೊಬ್ಬಳು ಹಣವನ್ನೆಲ್ಲ ಕಳೆದುಕೊಂಡು, ಕೊನೆಯಲ್ಲಿ ತನ್ನನ್ನೇ ತಾನು ಪಣವಿಟ್ಟು ಸೋತು ಇದೀಗ ಬೇರೊಬ್ಬನ ಪಾಲಾಗಿದ್ದಾಳೆ. ಇದೀಗ ಆಕೆಯ ಪತಿ ತನ್ನ ಪತ್ನಿಯನ್ನು ತನಗೆ ಕೊಡಿಸುವಂತೆ ಗ್ರಾಮಗ ಹಿರಿಯರಿಗೆ ಅಂಗಲಾಚುತ್ತಿದ್ದಾನೆ.
2 ಮಕ್ಕಳ ತಾಯಿ ರೇಣು ಸ್ಥಳೀಯ ನಿವಾಸಿಯಾಗಿದ್ದು, ಆಕೆಯ ಪತಿ ರಾಜಸ್ಥಾನದ ಜೈಪುರದಲ್ಲಿ ಕೆಲಸ ಮಾಡುತ್ತಿದ್ದ. ಪ್ರತೀ ತಿಂಗಳು ಆಕೆಗೆ ಹಣ ಕಳುಹಿಸುತ್ತಿದ್ದ. ಆದರೆ ಲೂಡೋ ಗೀಳಿಗೆ ಬಿದ್ದ ಪತ್ನಿ ತನ್ನ ಪತಿ ಕಳುಹಿಸಿದ ಹಣವನ್ನೆಲ್ಲ ತನ್ನ ಭೂ ಮಾಲೀಕನೊಂದಿಗೆ ಲೂಡೋ ಆಡಲು ಬಳಸುತ್ತಿದ್ದಳು. ಪ್ರತಿನಿತ್ಯ ಇಬ್ಬರೂ ಬೆಟ್ಟಿಂಗ್ ಕಟ್ಟಿಕೊಂಡು ಲೂಡೋ ಆಡುತ್ತಿದ್ದರು. ಹಿಂದಿನ ವಾರ ಆಟ ಆಡುತ್ತ ಈಕೆ ಪೂರ್ತಿ ಹಣ ಸೋತಿದ್ದಾಳೆ. ಬಳಿಕ ಆಟದಲ್ಲಿ ತನ್ನನ್ನೇ ತಾನು ಪಣಕ್ಕಿಟ್ಟುಕೊಂಡಿದ್ದಾಳೆ. ಜೂಜಿನಲ್ಲಿ ಸೋತು ಇದೀಗ ಆತನ ಪಾಲಾಗಿ ಆತನೊಂದಿಗೇ ನೆಲೆಸಿದ್ದಾಳೆ.
ಇದನ್ನೂ ಓದಿ: ಆನ್ ಲೈನ್ ಜೂಜಿನ ಹಿಂದೆ ಪ್ರಭಾವಿಗಳ ಲಾಬಿ: ಬಸವರಾಜ ಬೊಮ್ಮಾಯಿ ಅಸಹಾಯಕತೆ
ಅಲ್ಲದೆ ಬಳಿಕ ಪತಿಗೆ ಕರೆ ಮಾಡಿ ಘಟನೆಯನ್ನು ವಿವರಿಸಿದ್ದಾಳೆ. ಊರಿಗೆ ಮರಳಿದ ಪತಿ ಈ ಕುರಿತು ಸ್ಥಳೀಯ ಠಾಣೆಯಲ್ಲಿ ದೂರು ನೀಡಿದ್ದಾರೆ. ಆತನ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಎಲ್ಲೆಡೆ ಹರಿದಾಡುತ್ತಿದೆ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, 6 ತಿಂಗಳ ಹಿಂದೆ ರೇಣು ಪತಿ ಕೆಲಸಕ್ಕಾಗಿ ಜೈಪುರಕ್ಕೆ ಹೋಗಿದ್ದರು. ಈಗ ಆಕೆ ಭೂ ಮಾಲೀಕನೊಂದಿಗೆ ವಾಸಿಸಲು ಪ್ರಾರಂಭಿಸಿದ್ದಾಳೆ. ಅಲ್ಲಿಂದ ವಾಪಸ್ ಬರಲು ಕೇಳಿಕೊಂಡೆ. ಆದರೆ ಆಕೆ ಸಿದ್ಧವಿಲ್ಲ ಎಂದು ರೇಣು ಪತಿ ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವ್ಯಕ್ತಿಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ. ಆತನ ಸಂಪರ್ಕ ಸಿಕ್ಕ ತಕ್ಷಣ ತನಿಖೆ ಆರಂಭಿಸುತ್ತೇವೆ ಎಂದು ಪೊಲೀಸ್ ಅಧಿಕಾರಿ ಸುಬೋಧ್ ಗೌತಮ್ ಹೇಳಿದ್ದಾರೆ.