ದೆಹಲಿ ಕಾಂಗ್ರೆಸ್ ಉಪಾಧ್ಯಕ್ಷ, ಹೊಸದಾಗಿ ಆಯ್ಕೆಯಾದ ಇಬ್ಬರು ಕೌನ್ಸಿಲರ್‌ಗಳು ಎಎಪಿಗೆ ಸೇರ್ಪಡೆ
ದೆಹಲಿ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಅಲಿ ಮೆಹದಿ ಮತ್ತು ದೆಹಲಿ ಮಹಾನಗರ ಪಾಲಿಕೆಗೆ ಹೊಸದಾಗಿ ಆಯ್ಕೆಯಾದ ಇಬ್ಬರು ಕೌನ್ಸಿಲರ್‌ಗಳು ಶುಕ್ರವಾರ ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದಾರೆ.
Published: 09th December 2022 07:13 PM | Last Updated: 09th December 2022 07:58 PM | A+A A-

ಎಎಪಿ ನಾಯಕರು
ನವದೆಹಲಿ: ದೆಹಲಿ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಅಲಿ ಮೆಹದಿ ಮತ್ತು ದೆಹಲಿ ಮಹಾನಗರ ಪಾಲಿಕೆಗೆ ಹೊಸದಾಗಿ ಆಯ್ಕೆಯಾದ ಇಬ್ಬರು ಕೌನ್ಸಿಲರ್‌ಗಳು ಶುಕ್ರವಾರ ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದಾರೆ.
ಇತ್ತೀಚಿಗೆ ನಡೆದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಗೆಲುವು ಸಾಧಿಸಿದ ಸಬಿಲಾ ಬೇಗಂ ಮತ್ತು ನಾಜಿಯಾ ಖಾತೂನ್ ಅವರು ಇಂದು ಆಮ್ ಆದ್ಮಿ ಪಕ್ಷ ಸೇರಿದ್ದಾರೆ.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಎಪಿ ನಾಯಕ ದುರ್ಗೇಶ್ ಪಾಠಕ್ ಅವರು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಡಿದ ಕೆಲಸವನ್ನು ನೋಡಿದ ನಂತರ ಕಾಂಗ್ರೆಸ್ ನಾಯಕರು ನಮ್ಮ ಪಕ್ಷಕ್ಕೆ ಸೇರಲು ನಿರ್ಧರಿಸಿದ್ದಾರೆ ಎಂದು ಹೇಳಿದರು.
ಇದನ್ನು ಓದಿ: ಗುಜರಾತ್ಗಿಂತ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಆಪ್ ಉತ್ತಮ ಸಾಧನೆ ಮಾಡಲಿದೆ: ಎಎಪಿ
"ನಾವು ದೆಹಲಿಯ ಸುಧಾರಣೆಗಾಗಿ ಕೆಲಸ ಮಾಡಲು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಆಹ್ವಾನ ನೀಡಿದ್ದೇವೆ. ದೆಹಲಿ ಕಾಂಗ್ರೆಸ್ ಉಪಾಧ್ಯಕ್ಷ ಅಲಿ ಮೆಹದಿ ಮತ್ತು ಹೊಸದಾಗಿ ಆಯ್ಕೆಯಾದ ಇಬ್ಬರು ಕೌನ್ಸಿಲರ್‌ಗಳಾದ ಸಬಿಲಾ ಬೇಗಂ ಮತ್ತು ನಾಜಿಯಾ ಖಾತೂನ್ ಅವರು ಎಎಪಿಗೆ ಸೇರುತ್ತಿದ್ದಾರೆ ಎಂದು ಘೋಷಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ" ಎಂದು ಪಾಠಕ್ ತಿಳಿಸಿದರು.
ಇತ್ತೀಚೆಗೆ ನಡೆದ ಎಂಸಿಡಿ ಚುನಾವಣೆಯಲ್ಲಿ ಕಾಂಗ್ರೆಸ್ ಒಂಬತ್ತು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆ ಪೈಕಿ ಈಗ ಇಬ್ಬರು ಪಕ್ಷ ತೊರೆದಿದ್ದು, ಕಾಂಗ್ರೆಸ್ ಬಲ ಏಳಕ್ಕೆ ಕುಸಿದಿದೆ.