ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣ: ಜಾಮೀನು ಅರ್ಜಿಯನ್ನು ಹಿಂಪಡೆದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ
ನವದೆಹಲಿ: ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪೂನವಾಲಾ ಗುರುವಾರ ತನ್ನ ಜಾಮೀನು ಅರ್ಜಿಯನ್ನು ಹಿಂತೆಗೆದುಕೊಂಡಿದ್ದು, ಈ ಅರ್ಜಿಯನ್ನು ತಪ್ಪಾಗಿ ಸಲ್ಲಿಸಲಾಗಿತ್ತು ಎಂದು ದೆಹಲಿಯ ಸಾಕೇತ್ ನ್ಯಾಯಾಲಯದಲ್ಲಿ ತಿಳಿಸಿದ್ದಾನೆ.
ತಾನು ವಕಾಲತ್ತಿಗೆ ಸಹಿ ಹಾಕಿದ್ದೆ. ಆದರೆ, ಅದು ಜಾಮೀನು ಅರ್ಜಿ ಸಲ್ಲಿಸುವ ಬಗ್ಗೆ ಎಂದು ನನಗೆ ತಿಳಿದಿರಲಿಲ್ಲ ಎಂದು ಡಿ. 17 ರಂದು ಹೇಳಿದ್ದ.
ತಪ್ಪಾಗಿ ಜಾಮೀನು ಅರ್ಜಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ ಎಂದು ಅಫ್ತಾಬ್ ಪೂನಾವಾಲಾನಿಂದ ನ್ಯಾಯಾಲಯಕ್ಕೆ ಇಮೇಲ್ ಮೂಲಕ ಸೂಚನೆ ಬಂದಿದೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ವೃಂದಾ ಕುಮಾರಿ ಹೇಳಿದ್ದರು.
ಮೊದಲು ವಕೀಲರು ನನ್ನೊಂದಿಗೆ ಮಾತನಾಡಲು ಮತ್ತು ನಂತರ ಜಾಮೀನು ಅರ್ಜಿಯನ್ನು ಹಿಂಪಡೆಯಲು ನಾನು ಬಯಸುತ್ತೇನೆ ಎಂದು ಪೂನಾವಾಲಾ ಅವರು ಅರ್ಜಿಯನ್ನು ಹಿಂತೆಗೆದುಕೊಳ್ಳುವ ಉದ್ದೇಶವನ್ನು ಹೊಂದಿದ್ದಾರೆಯೇ ಎಂಬ ಬಗ್ಗೆ ನ್ಯಾಯಾಧೀಶರ ಪ್ರಶ್ನೆಗೆ ಉತ್ತರಿಸಿದರು. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಡಿಸೆಂಬರ್ 22 ಕ್ಕೆ ಮುಂದೂಡಿತ್ತು.
ಡಿಸೆಂಬರ್ 16ರಂದು ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಡಿಸೆಂಬರ್ 9 ರಂದು ನ್ಯಾಯಾಲಯ ಪೂನಾವಾಲಾ ಅವರ ನ್ಯಾಯಾಂಗ ಬಂಧನವನ್ನು 14 ದಿನಗಳವರೆಗೆ ವಿಸ್ತರಿಸಿತ್ತು. ನವೆಂಬರ್ 12 ರಂದು ಆತನನ್ನು ಬಂಧಿಸಲಾಯಿತು ಮತ್ತು ಸದ್ಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.
ಅಫ್ತಾಬ್, ಶ್ರದ್ಧಾ ಅವರನ್ನು ದಕ್ಷಿಣ ದೆಹಲಿಯ ಮಹ್ರೌಲಿಯಲ್ಲಿರುವ ತನ್ನ ಫ್ಲ್ಯಾಟ್‌ನಲ್ಲಿ ಮೇ ತಿಂಗಳಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದ. ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, 300 ಲೀಟರ್ ಸಾಮರ್ಥ್ಯದ ಫ್ರಿಜ್‌ನಲ್ಲಿ ಸುಮಾರು ಮೂರು ವಾರಗಳವರೆಗೆ ಇರಿಸಿದ್ದ. ನಂತರ ಅವುಗಳನ್ನು ನಗರದ ವಿವಿಧೆಡೆ ಮತ್ತು ಛತರ್‌ಪುರ ಸಮೀಪದ ಅರಣ್ಯ ಪ್ರದೇಶದಲ್ಲಿ ಎಸೆದಿದ್ದ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ