ಮಹಾ 'ಸಂಘರ್ಷ': ಸ್ಪೀಕರ್ ಚುನಾವಣೆ: ಖಾಸಗಿ ಹೊಟೆಲ್ ನಿಂದ ವಿಧಾನಸಭೆಯತ್ತ ಶಿವಸೇನೆ ರೆಬೆಲ್ ಶಾಸಕರು!
ಮಹಾರಾಷ್ಟ್ರದಲ್ಲಿ ರೆಬೆಲ್ ಶಾಸಕರ ನಾಯಕ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ರಚನೆಯಾದ ಹೊರತಾಗಿಯೂ ರಾಜಕೀಯ ಗೊಂದಲ ಮುಂದುವರೆದಿದ್ದು, ವಿಶ್ವಾಸ ಮತ ಯಾಚನೆ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರವಹಿಸಿರುವ ಸ್ಪೀಕರ್ ಚುನಾವಣೆಗೆ ವೇದಿಕೆ ಸಜ್ಜಾಗಿದೆ.
Published: 03rd July 2022 09:18 AM | Last Updated: 03rd July 2022 03:03 PM | A+A A-

ಉದ್ಧವ್ ವರ್ಸಸ್ ಶಿಂಧೆ
ಮುಂಬೈ: ಮಹಾರಾಷ್ಟ್ರದಲ್ಲಿ ರೆಬೆಲ್ ಶಾಸಕರ ನಾಯಕ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ರಚನೆಯಾದ ಹೊರತಾಗಿಯೂ ರಾಜಕೀಯ ಗೊಂದಲ ಮುಂದುವರೆದಿದ್ದು, ವಿಶ್ವಾಸ ಮತ ಯಾಚನೆ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರವಹಿಸಿರುವ ಸ್ಪೀಕರ್ ಚುನಾವಣೆಗೆ ವೇದಿಕೆ ಸಜ್ಜಾಗಿದೆ.
ಹೌದು.. ಇಂದಿನ ಚುನಾವಣೆಯಲ್ಲಿ ಸ್ಪೀಕರ್ ಸ್ಥಾನಕ್ಕಾಗಿ ಶಿವಸೇನೆ ಶಾಸಕ ರಾಜನ್ ಸಾಲ್ವಿ ಮತ್ತು ಬಿಜೆಪಿ-ರೆಬೆಲ್ ಶಾಸಕರ ಅಭ್ಯರ್ಥಿ ಶಾಸಕ ರಾಹುಲ್ ನಾರ್ವೇಕರ್ ನಡುವೆ ಮುಖಾಮುಖಿ ಸ್ಪರ್ಧೆ ಏರ್ಪಟ್ಟಿದ್ದು, ತಮ್ಮ ಬೆಂಬಲಿತ ಅಭ್ಯರ್ಥಿ ಗೆಲುವಿಗಾಗಿ ಬಿಜೆಪಿ ಮತ್ತು ರೆಬೆಲ್ ಶಾಸಕರ ಬಣ ಹಾಗೂ ಉದ್ಧವ್ ಠಾಕ್ರೆ ನೇತೃತ್ವದ ಬಣಗಳು ಕಾರ್ಯತಂತ್ರದಲ್ಲಿ ತೊಡಗಿವೆ. ನಾರ್ವೇಕರ್ ಮುಂಬೈನ ಕೊಲಾಬಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೆ, ಸಾಲ್ವಿ ರತ್ನಗಿರಿ ಜಿಲ್ಲೆಯ ರಾಜಾಪುರ ಕ್ಷೇತ್ರದ ಶಾಸಕರಾಗಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆಯನ್ನು ಶಿವಸೇನೆಯಿಂದ ವಜಾಗೊಳಿಸಿದ ಉದ್ಧವ್ ಠಾಕ್ರೆ
ಫೆಬ್ರವರಿ 2021 ರಲ್ಲಿ ಕಾಂಗ್ರೆಸ್‌ನ ನಾನಾ ಪಟೋಲೆ ಅವರು ತಮ್ಮ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಲು ರಾಜೀನಾಮೆ ನೀಡಿದ ನಂತರ ಅಸೆಂಬ್ಲಿ ಸ್ಪೀಕರ್ ಹುದ್ದೆ ಖಾಲಿಯಾಗಿತ್ತು. ಇತ್ತ ಉಪ ಸ್ಪೀಕರ್ ನರಹರಿ ಜಿರ್ವಾಲ್ ಅವರು ಹಂಗಾಮಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜ್ಯದಲ್ಲಿ ಇತ್ತೀಚೆಗಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ವಿಧಾನಸಭಾಧ್ಯಕ್ಷ ಸ್ಥಾನದ ಚುನಾವಣೆ ನಿರ್ಣಾಯಕವಾಗಿದೆ. ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೇರಿದಂತೆ 16 ಬಂಡಾಯ ಶಾಸಕರ ವಿರುದ್ಧದ ಅನರ್ಹತೆಯ ಪ್ರಕ್ರಿಯೆಯನ್ನು ಸ್ಪೀಕರ್ ವಜಾಗೊಳಿಸಬಹುದು ಎಂದು ಕಾನೂನು ತಜ್ಞರು ಹೇಳಿದ್ದಾರೆ. ಕಳೆದ ತಿಂಗಳು ಉಪ ಸ್ಪೀಕರ್ ನರಹರಿ ಜಿರ್ವಾಲ್ ಅವರು ಅನರ್ಹತೆ ನೋಟಿಸ್ ನೀಡಿದ್ದರು.
ಹೀಗಾಗಿ ಇಂದಿನ ಚುನಾವಣೆ ರೆಬೆಲ್ ಶಾಸಕರಿಗೆ ನಿರ್ಣಾಯಕವಾಗಿದೆ. ಮತ್ತೊಂದೆಡೆ ಸ್ಪೀಕರ್ ಶಿಂಧೆ ಬಣವನ್ನು "ನೈಜ" ಶಿವಸೇನೆ ಎಂದು ಗುರುತಿಸಿದರೆ, ಬಂಡಾಯ ಗುಂಪು ಬೇರೆ ಯಾವುದೇ ರಾಜಕೀಯ ಪಕ್ಷದೊಂದಿಗೆ ವಿಲೀನಗೊಳ್ಳುವ ಅಗತ್ಯವಿಲ್ಲ ಎಂದು ತಜ್ಞರು ಹೇಳುತ್ತಾರೆ. ಏಕನಾಥ್ ಶಿಂಧೆ ಅವರು 2/3 ಬಹುಮತವನ್ನು ಹೊಂದಿರುವುದರಿಂದ ಅವರು ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕ ಎಂದು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ಗುವಾಹಟಿ ಹೊಟೇಲ್ ನಲ್ಲಿ ಶಿಂಧೆ ಕ್ಯಾಂಪ್ ಮಾಡಿದ ಖರ್ಚು ಎಷ್ಟು ಗೊತ್ತೇ?
ಏಕನಾಥ್ ಶಿಂಧೆ ಸರ್ಕಾರ ಸೋಮವಾರ ವಿಧಾನಸಭೆಯಲ್ಲಿ ಬಲಾಬಲ ಪರೀಕ್ಷೆ (ವಿಶ್ವಾಸ ಮತ) ಎದುರಿಸಲಿದೆ. 39 ಸೇನಾ ಬಡಾಯಶಾಸಕರು ಸೇರಿದಂತೆ 50 ಶಾಸಕರೊಂದಿಗೆ ಶಿಂಧೆ ನಿನ್ನೆ ಸಂಜೆ ಮುಂಬೈಗೆ ಮರಳಿದ್ದು, ಇಂದು ನಡೆಯಲಿರುವ ಸ್ಪೀಕರ್ ಚುನಾವಣೆಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.
ನಿನ್ನೆಯಷ್ಚೇ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು "ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ" ಶಿಂಧೆ ಅವರನ್ನು ಪಕ್ಷದ ನಾಯಕ ಸ್ಥಾನದಿಂದ ತೆಗೆದುಹಾಕಿದ್ದರು. ಆದರೆ ಪಕ್ಷದ ಈ ನಿರ್ಧಾರವನ್ನು ಶಿಂಧೆ ಬಣ ಕೋರ್ಟ್ ನಲ್ಲಿ ಸವಾಲು ಮಾಡಲು ಸಜ್ಜಾಗಿದೆ. ಶಿಂಧೆ ಪಾಳಯವು ಬಿಜೆಪಿಯ ಸಹಾಯದಿಂದ ಸರ್ಕಾರವನ್ನು ರಚಿಸುವಲ್ಲಿ ಯಶಸ್ವಿಯಾದ ನಂತರ, ಠಾಕ್ರೆ ಅವರ ತಂದೆ ಬಾಳ ಠಾಕ್ರೆ ಸ್ಥಾಪಿಸಿದ ಪಕ್ಷವಾದ ಶಿವಸೇನೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವತ್ತ ಮಗ್ನರಾಗಿದ್ದಾರೆ. ಇತ್ತ ಶಿಂಧೆ ಬಣ ಕೂಡ ತಮ್ಮ ಅಸ್ಥಿತ್ವಕ್ಕಾಗಿ ಹೋರಾಟ ಮುಂದುವರೆಸಿದೆ.