'ನನ್ನೊಂದಿಗೆ ಮಾತನಾಡಬೇಡಿ': ಸ್ಮೃತಿ ಇರಾನಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಿರುಗೇಟು!

ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು 'ರಾಷ್ಟ್ರಪತ್ನಿ' ಎಂದು ಕರೆದಿದ್ದಕ್ಕಾಗಿ ಇಂದು ಸಂಸತ್ತಿನಲ್ಲಿ ನಾಟಕೀಯ ಬೆಳವಣಿಗೆಗಳು ನಡೆದವು.
ಸ್ಮೃತಿ ಇರಾನಿ- ಸೋನಿಯಾ ಗಾಂಧಿ
ಸ್ಮೃತಿ ಇರಾನಿ- ಸೋನಿಯಾ ಗಾಂಧಿ

ನವದೆಹಲಿ: ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು 'ರಾಷ್ಟ್ರಪತ್ನಿ' ಎಂದು ಕರೆದಿದ್ದಕ್ಕಾಗಿ ಇಂದು ಸಂಸತ್ತಿನಲ್ಲಿ ನಾಟಕೀಯ ಬೆಳವಣಿಗೆಗಳು ನಡೆದವು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬಿಜೆಪಿಯ ಸ್ಮೃತಿ ಇರಾನಿ ಅವರಿಗೆ ನನ್ನೊಂದಿಗೆ ಮಾತನಾಡಬೇಡಿ ಎಂದಿರುವುದಾಗಿ ಮೂಲಗಳು ತಿಳಿಸಿವೆ.

ಸೋನಿಯಾ ಗಾಂಧಿ ಮತ್ತು ಅಧೀರ್ ರಂಜನ್ ಚೌಧರಿ ವಿರುದ್ಧ ಬಿಜೆಪಿ ಸಂಸದರ ಪ್ರತಿಭಟನೆಯಿಂದಾಗಿ ಲೋಕಸಭೆಯನ್ನು ಮುಂದೂಡಲಾಗಿತ್ತು. ಈ ವಿರಾಮದ ವೇಳೆ ತೀವ್ರ ಮಾತಿನ ಚಕಮಕಿ ನಡೆಯಿತು.

'ಸೋನಿಯಾ ಗಾಂಧಿ, ಕ್ಷಮೆಯಾಚಿಸಿ' ಎಂದು ಸ್ಮೃತಿ ಇರಾನಿ ಸದನದಲ್ಲಿ ಹೇಳಿದರು. ಈ ವೇಳೆ ಆಡಳಿತಾರೂಢ ಬಿಜೆಪಿ ಸದಸ್ಯರು ಫಲಕಗಳನ್ನು ಹಿಡಿದಿದ್ದರು.

ಲೋಕಸಭೆ ಸ್ಪೀಕರ್ ಸದನವನ್ನು ಮುಂದೂಡಿದ ನಂತರ, ಸೋನಿಯಾ ಗಾಂಧಿ ಅವರು ಘೋಷಣೆ ಕೂಗುತ್ತಿದ್ದ ಬಿಜೆಪಿ ಸಂಸದರ ಬಳಿಗೆ ಹೋಗಲು ನಿರ್ಧರಿಸಿ ಹೊರಡುತ್ತಾರೆ. ಆಗ ಇಬ್ಬರು ಕಾಂಗ್ರೆಸ್ ಸಂಸದರು ಕೂಡ ಅವರ ಜೊತೆಗಿದ್ದರು.

ಸದನದ ಮಹಡಿಯನ್ನು ದಾಟಿ ಬಿಜೆಪಿ ಸಂಸದೆ ರಮಾ ದೇವಿ ಅವರ ಬಳಿ ಬಂದ ಸೋನಿಯಾ ಗಾಂಧಿ ಅವರು, 'ಅಧೀರ್ ರಂಜನ್ ಚೌಧರಿ ಈಗಾಗಲೇ ಕ್ಷಮೆಯಾಚಿಸಿದ್ದಾರೆ. ಹೀಗಿದ್ದರೂ, ನನ್ನನ್ನು ಏಕೆ ಈ ವಿಚಾರದಲ್ಲಿ ಎಳೆಯಲಾಗುತ್ತಿದೆ?' ಎಂದು ಪ್ರಶ್ನಿಸುತ್ತಿದ್ದರು.

ಇದೇ ಸಮಯಕ್ಕೆ ಮಧ್ಯೆ ಪ್ರವೇಶಿಸಿದ ಸ್ಮೃತಿ ಇರಾನಿ ಅವರು, 'ಮೇಡಂ, ನಾನು ನಿಮಗೆ ಈ ಬಗ್ಗೆ ಹೇಳಬಹುದೇ? ಏಕೆಂದರೆ, ನಾನು ನಿಮ್ಮ ಹೆಸರನ್ನು ಪ್ರಸ್ತಾಪಿಸಿದ್ದೇನೆ' ಎಂದು ಹೇಳಿದರು.

ಇದಕ್ಕೆ ಸೋನಿಯಾ ಗಾಂಧಿ ಅವರು,''ನನ್ನೊಂದಿಗೆ ಮಾತನಾಡಬೇಡಿ'' ಎಂದು ತಿರುಗೇಟು ನೀಡಿದ್ದಾರೆ.

ಬಳಿಕ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದಾಗ, ಪ್ರತಿಪಕ್ಷ ಸದಸ್ಯರು ಕೂಡ ಪ್ರತಿದಾಳಿ ನಡೆಸಿದರು.

ತೃಣಮೂಲ ಕಾಂಗ್ರೆಸ್ ಸಂಸದರು ಮತ್ತು ಎನ್‌ಸಿಪಿಯ ಸುಪ್ರಿಯಾ ಸುಳೆ ಅವರು ಬಿಜೆಪಿ ಸದಸ್ಯರ ಪ್ರತಿಭಟನೆ ಮತ್ತು ಕೂಗಿನಿಂದ ಸೋನಿಯಾ ಗಾಂಧಿ ಅವರನ್ನು ದೂರಕ್ಕೆ ಸೆಳೆದಿದ್ದಾರೆ. ಬಳಿಕ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಮುಂದಾದರು ಎಂದು ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com