
ಬಂಧಿತ ಆರೋಪಿಗಳು
ಮುಂಬೈ: ಸಾಲ ಮರುಪಾವತಿಗಾಗಿ ವ್ಯಕ್ತಿಗೆ ಕಿರುಕುಳ ನೀಡಿದ ಆರೋಪದ ಮೇರೆಗೆ ಲೋನ್ ಆ್ಯಪ್ ಏಜೆಂಟ್ ಗಳನ್ನು ಬಂಧಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಸಾಲವನ್ನು ಮರುಪಾವತಿಸಲು ವಿಫಲವಾದರೆ ಅವರ ಮಾರ್ಫ್ ಮಾಡಿದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುವುದಾಗಿ ಬೆದರಿಸಿ ಸಂತ್ರಸ್ತರಿಂದ ಹಣ ಸುಲಿಗೆ ಮಾಡುತ್ತಿದ್ದ ಐದು ಲೋನ್ ಆ್ಯಪ್ ಆಪರೇಟರ್ ಗಳನ್ನು ಮತ್ತು ಏಜೆಂಟ್ ಗಳನ್ನು ಮಹಾರಾಷ್ಟ್ರ ಸೈಬರ್ ಸೆಲ್ ಸೋಮವಾರ ಬಂಧಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆರೋಪಿಗಳೆಲ್ಲರೂ ಸುಶಿಕ್ಷಿತರಾಗಿದ್ದು, ಅವರಲ್ಲಿ ಒಬ್ಬರು ಎಂಬಿಎ ಪದವಿ ಪದವೀಧರಾಗಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತರನ್ನು ಸುಹೇಲ್ ನಾಸಿರುದ್ದೀನ್ ಸಯ್ಯದ್ (24), ಅಹಮದ್ ರಜಾ ಜಾಹಿದ್ ಹುಸೇನ್ (26), ಸಯ್ಯದ್ ಅಥರ್ (24), ಕೈಫ್ ಕದರಿ (22) ಮತ್ತು ಮುಫ್ತಿಯಾಜ್ ಬಾಷಾ ಪೀರಜಾದೆ (21) ಎಂದು ಗುರುತಿಸಲಾಗಿದೆ. ಬಂಧಿತರನ್ನು ಕರ್ನಾಟಕದ ಧಾರವಾಡದಿಂದ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಸಾಲ ನೀಡಿ ಅಧಿಕ ಬಡ್ಡಿ ವಸೂಲಿ: ಚೀನಾ ಮೂಲದ ಲೋನ್ ಆ್ಯಪ್‌ಗಳ 6.17 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿ ಜಪ್ತಿ
ಮುಂಬೈನ ಉಪನಗರ ಮುಲುಂಡ್‌ನ ವ್ಯಕ್ತಿಯೊಬ್ಬರು 11,000 ರೂಪಾಯಿ ಸಾಲ ಪಡೆದ ನಂತರ ಲೋನ್ ಆ್ಯಪ್‌ನ ಏಜೆಂಟ್‌ಗಳಿಂದ ಕಿರುಕುಳ ಅನುಭವಿಸಿದ್ದರು. ಈ ಕುರಿತಂತೆ ಮಹಾರಾಷ್ಚ್ರ ಸೈಬರ್ ಸೆಲ್ ಗೆ ದೂರು ಕೂಡ ಸಲ್ಲಿಕೆ ಮಾಡಿದ್ದರು. ಅವರ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ ನಂತರ ಈ ಐವರನ್ನು ಬಂಧಿಸಲಾಯಿತು. ದೂರಿನ ಪ್ರಕಾರ ಅವರು ಮೇ ತಿಂಗಳವರೆಗೆ 96,000 ರೂ. (ಬಡ್ಡಿ ಸಹಿತ) ನೀಡಬೇಕು ಎಂದು ಕಿರುಕುಳ ನೀಡಲಾಗಿತ್ತು ಎಂದು ದೂರಿನಲ್ಲಿ ಆರೋಪಿಸಿದ್ದರು.
ದೂರು ಸ್ವೀಕರಿಸಿದ ವಿಶೇಷ ತಂಡ ನಡೆಸಿದ ತನಿಖೆಯಲ್ಲಿ, ಸೈಬರ್ ಪೊಲೀಸರು ಧುಲೆಗೆ ಬೆದರಿಕೆ ಹಾಕಲು ಬಳಸಿದ ಫೋನ್ ಸಂಖ್ಯೆಯನ್ನು ಪತ್ತೆಹಚ್ಚಿದ್ದಾರೆ. ಕರ್ನಾಟಕದ ವ್ಯಕ್ತಿಯೊಬ್ಬರು ವಾಟ್ಸಾಪ್ ಸಂದೇಶಕ್ಕಾಗಿ ಈ ಫೋನ್ ಸಂಖ್ಯೆಯನ್ನು ಬಳಸುತ್ತಿದ್ದರು. ಪೊಲೀಸರು ಧಾರವಾಡಕ್ಕೆ ಆಗಮಿಸಿ ಎಲ್ಲ ಐವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು. ಆರೋಪಿಗಳು 'ಹ್ಯಾಂಡಿ ಲೋನ್' ಮತ್ತು ಇತರ ಅರ್ಜಿಗಳನ್ನು ಬಳಸಿಕೊಂಡು ತಮ್ಮ ಸಂತ್ರಸ್ತರಿಂದ ಹಣವನ್ನು ಸುಲಿಗೆ ಮಾಡುತ್ತಿದ್ದರು. ಪ್ರಸ್ತುತ ಅವರನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಅಂತೆಯೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವ್ಯಕ್ತಿಗಳನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಹೈದರಾಬಾದ್: ಲೋನ್ ಆ್ಯಪ್ ಕಿರುಕುಳದಿಂದ ಬೇಸತ್ತು ಯುವಕ ಆತ್ಮಹತ್ಯೆ
ಕಳೆದ ಎರಡು ವರ್ಷಗಳಲ್ಲಿ, ಸೈಬರ್ ಇಲಾಖೆಯು ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ 2,084 ದೂರುಗಳನ್ನು ಸ್ವೀಕರಿಸಿದೆ. ಎಲ್ಲಾ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) 420 (ವಂಚನೆ), 383 (ಸುಲಿಗೆ), 500 (ಮಾನನಷ್ಟ) ಮತ್ತು ಐಟಿ ಕಾಯಿದೆಯ ಇತರ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.