ಕಾಂಗ್ರೆಸ್ ಪ್ರತಿಭಟನೆ: ಪೊಲೀಸ್ ಸಿಬ್ಬಂದಿ ಕಾಲರ್ ಹಿಡಿದ ರೇಣುಕಾ ಚೌದರಿ, ಪ್ರಕರಣ ದಾಖಲು!

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದಲ್ಲಿ ನಡೆದ ಕಾಂಗ್ರೆಸ್ ನಾಯಕರ ಪ್ರತಿಭಟನೆ ವೇಳೆ ಕೈ ನಾಯಕಿ ರೇಣುಕಾ ಚೌದರಿ ಪೊಲೀಸ್ ಸಿಬ್ಬಂದಿಯ ಕಾಲರ್ ಹಿಡಿದು ಉದ್ಧಟತನ ತೋರಿರುವ ಘಟನೆ ವರದಿಯಾಗಿದೆ.
ಪೊಲೀಸ್ ಸಿಬ್ಬಂದಿ ಕೊರಳ ಪಟ್ಟಿ ಹಿಡಿದ ರೇಣುಕಾ ಚೌದರಿ
ಪೊಲೀಸ್ ಸಿಬ್ಬಂದಿ ಕೊರಳ ಪಟ್ಟಿ ಹಿಡಿದ ರೇಣುಕಾ ಚೌದರಿ

ಹೈದರಾಬಾದ್: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದಲ್ಲಿ ನಡೆದ ಕಾಂಗ್ರೆಸ್ ನಾಯಕರ ಪ್ರತಿಭಟನೆ ವೇಳೆ ಕೈ ನಾಯಕಿ ರೇಣುಕಾ ಚೌದರಿ ಪೊಲೀಸ್ ಸಿಬ್ಬಂದಿಯ ಕಾಲರ್ ಹಿಡಿದು ಉದ್ಧಟತನ ತೋರಿರುವ ಘಟನೆ ವರದಿಯಾಗಿದೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿಗೆ ಇಡಿ ಸಮನ್ಸ್‌ನ ವಿರುದ್ಧ ಕಾಂಗ್ರೆಸ್ ಪಕ್ಷ ಪ್ರತಿಭಟಿಸುತ್ತಿದೆ. ಈ ಸಂದರ್ಭ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ (Renuka Chaudhary) ಸಾರ್ವಜನಿಕವಾಗಿ ಉದ್ಧಟತನ ತೋರಿಸಿದ್ದಾರೆ. ಗುರುವಾರ ಹೈದರಾಬಾದ್‌ನಲ್ಲಿ ಪಕ್ಷದ ಪ್ರತಿಭಟನೆಯ ಸಂದರ್ಭದಲ್ಲಿ ಇತರ ಕಾರ್ಯಕರ್ತರನ್ನು ಪೊಲೀಸ್ ಸಿಬ್ಬಂದಿ ಕರೆದುಕೊಂಡು ಹೋಗುತ್ತಿದ್ದಾಗ ಪೊಲೀಸ್ ಒಬ್ಬರನ್ನು ಸಾರ್ವಜನಿಕವಾಗಿ ಕಾಲರ್‌ನಿಂದ ಹಿಡಿದುಕೊಂಡು ವಾಗ್ವಾದ ನಡೆಸಿದ್ದಾರೆ. ನಂತರ ಅವರನ್ನು ಮಹಿಳಾ ಪೊಲೀಸ್ ಅಧಿಕಾರಿಗಳು ಪೊಲೀಸ್ ವ್ಯಾನ್ ಗೆ ಎಳೆದೊಯ್ದಿದ್ದಾರೆ. 

ಮೂಲಗಳ ಪ್ರಕಾರ, ಪೊಲೀಸರ ಕೊರಳಪಟ್ಟಿ ಹಿಡಿದಿದ್ದಕ್ಕಾಗಿ ಕಾಂಗ್ರೆಸ್ ನಾಯಕಿ ಮತ್ತು ಮಾಜಿ ಸಂಸದೆ ರೇಣುಕಾ ಚೌದರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 353 ರ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ರೇಣುಕಾ ಚೌದರಿ ಅವರು, "ನಾನು ಹಲ್ಲೆ ಮಾಡಿಲ್ಲ, ನನ್ನ ಮೇಲೆ ಕೇಸ್ ಹಾಕಲಾಗಿದೆ, ನಾನು ಅದನ್ನು ಎದುರಿಸುತ್ತೇನೆ. ಅದು ಕಾನೂನು, ಆ ಯುವಕನ ವಿರುದ್ಧ ನನಗೇನೂ ಕೋಪ ಇಲ್ಲ.. ಅವನು ನನಗೆ ಏನೂ ಮಾಡಿಲ್ಲ. ನಾನು ಸಮತೋಲನವನ್ನು ಕಳೆದುಕೊಂಡು ಆ ರೀತಿ ನಡೆದುಕೊಂಡೆ. ಅವರು ನನ್ನನ್ನು ತಳ್ಳುತ್ತಿದ್ದರು, ನನ್ನ ಕಾಲಿಗೆ ತೊಂದರೆಯಾಯಿತು. ಹೀಗಾಗಿ ನಾನು ನನ್ನ ಸಮತೋಲನವನ್ನು ಕಳೆದುಕೊಳ್ಳುತ್ತಿದ್ದೆ, ಹಾಗಾಗಿ ನಾನು ಸಿಬ್ಬಂದಿ ಮೇಲೆ ಎರಗಿದೆ.. ಆದರೆ ನನ್ನ ವರ್ತನೆ ತಪ್ಪು ನಾನು ಆ ವ್ಯಕ್ತಿಗೆ ಕ್ಷಮೆಯಾಚಿಸುತ್ತೇನೆ. ಆದರೆ ನಮ್ಮ ಮೇಲೆ ದೌರ್ಜನ್ಯ ನಡೆಸಿದ್ದಕ್ಕಾಗಿ ಪೊಲೀಸರು ನನ್ನಲ್ಲಿ ಕ್ಷಮೆಯಾಚಿಸುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ ಎಂದು ಹೇಳಿದರು. 

ಕಾಂಗ್ರೆಸ್‌ನ ತೆಲಂಗಾಣ ಘಟಕವು ನೀಡಿದ "ಚಲೋ ರಾಜಭವನ" ಕರೆಯ ಭಾಗವಾಗಿ ರಾಜಭಾವನಕ್ಕೆ ಮುತ್ತಿಗೆ ಹಾಕಲು ನಡೆಸಿದ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದರಿಂದ ತೆಲಂಗಾಣದ ರಾಜಭವನದ ಬಳಿ ಸ್ವಲ್ಪ ಉದ್ವಿಗ್ನತೆ ಉಂಟಾಗಿತ್ತು. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ ಮತ್ತು ಪಕ್ಷದ ಸಂಸದ ಎ ರೇವಂತ್ ರೆಡ್ಡಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮಲ್ಲು ಭಟ್ಟಿ ವಿಕ್ರಮಾರ್ಕ ಮತ್ತು ಹಲವರನ್ನು ಪೊಲೀಸರು ರಾಜಭವನದತ್ತ ಸಾಗುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ತೆಗೆದುಕೊಂಡರು. ಪ್ರತಿಭಟನೆಯಿಂದಾಗಿ ಖೈರ್ತಾಬಾದ್ ವೃತ್ತ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಲಾಯಿತು. ಕೆಲವು ಪ್ರತಿಭಟನಾಕಾರರು ಸರ್ಕಾರಿ ಸಿಟಿ ಬಸ್‌ನ ಮೇಲೆ ಹತ್ತುತ್ತಿರುವುದು ಕಂಡುಬಂದಿತು. ಕೆಲವರು ಬಸ್‌ನ ಕಿಟಕಿ ಗಾಜುಗಳನ್ನು ಒಡೆದು ಹಾಕಿದರು. ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ಹಾಗೂ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕಳೆದ ಮೂರು ದಿನಗಳ ಕಾಲ ಜಾರಿ ನಿರ್ದೇಶನಾಲಯದಿಂದ (Enforcement Directorate) ವಿಚಾರಣೆಗೊಳಗಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ  (Rahul Gandhi) ಪರ ಕಾಂಗ್ರೆಸ್ (Congress) ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗ ಎಂದು ಕೇಂದ್ರ ಸರ್ಕಾರವನ್ನು ಆರೋಪಿಸುತ್ತಿರುವ ಕಾಂಗ್ರೆಸ್ ಈಗ ದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆ (Protest) ನಡೆಸುತ್ತಿದೆ. ನ್ಯಾಷನಲ್ ಹೆರಾಲ್ಡ್ (National Herald) ಪತ್ರಿಕೆ ಸಂಬಂಧಿಸಿದ ಅಕ್ರಮ ಹಣದ ಕುರಿತು ರಾಹುಲ್ ಗಾಂಧಿ ವಿಚಾರಣೆ ನಡೆಯುತ್ತಿದ್ದು ಇಂದು ಮಾತ್ರ ಬಿಡುವುದು ಸಿಕ್ಕಿದೆ. ಜೂ. 13ರಿಂದ 15ರ ತನಕ ರಾಹುಲ್ ಗಾಂಧಿ ವಿಚಾರಣೆ ನಡೆದಿದೆ. ಈ ವಿಚಾರಣೆಯನ್ನು ವಿರೋಧಿಸಿ ಕಾಂಗ್ರೆಸ್ ಪ್ರತಿಭಟಿಸುತ್ತಿದ್ದ ಕೈ ಕಾರ್ಯಕರ್ತರು ರಸ್ತೆಗಳಿದಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com