ಮಹಾರಾಷ್ಟ್ರ: ವಿಧಾನಪರಿಷತ್ ಚುನಾವಣೆ ಬಳಿಕ ಶಿವಸೇನೆ ಶಾಸಕರೊಂದಿಗೆ ಏಕನಾಥ್​ ಶಿಂಧೆ ನಾಪತ್ತೆ, ತುರ್ತು ಸಭೆ ಕರೆದ ಉದ್ಧವ್ ಠಾಕ್ರೆ

ಮಹಾರಾಷ್ಟ್ರದಲ್ಲಿ ಶಿವಸೇನೆ ವಿಭಜನೆಯ ಹಾದಿ ಹಿಡಿಯುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿದೆ. ಇದಕ್ಕೆ ಇಂಬು ನೀಡುವಂತೆ ಇದೀಗ ಶಿವಸೇನೆ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರ ನಿಕಟವರ್ತಿ ಎಂದು ಪರಿಗಣಿಸಲ್ಪಟ್ಟಿರುವ ಏಕನಾಥ್​ ಶಿಂಧೆ ಅವರು ಕೆಲ ಶಾಸಕರೊಂದಿಗೆ...
ಏಕನಾಥ್​ ಶಿಂಧೆ
ಏಕನಾಥ್​ ಶಿಂಧೆ

ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ ವಿಭಜನೆಯ ಹಾದಿ ಹಿಡಿಯುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿದೆ. ಇದಕ್ಕೆ ಇಂಬು ನೀಡುವಂತೆ ಇದೀಗ ಶಿವಸೇನೆ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರ ನಿಕಟವರ್ತಿ ಎಂದು ಪರಿಗಣಿಸಲ್ಪಟ್ಟಿರುವ ಏಕನಾಥ್​ ಶಿಂಧೆ ಅವರು ಕೆಲ ಶಾಸಕರೊಂದಿಗೆ ಗುಜರಾತ್ ಹೋಟೆಲ್ ವೊಂದರಲ್ಲಿ ತಂಗಿದ್ದಾರೆಂದು ಹೇಳಲಾಗುತ್ತಿದ್ದು, ಈ ಬೆಳವಣಿಗೆ ಹಿನ್ನೆಲೆಯಲ್ಲಿ ಉದ್ಧವ್ ಠಾಕ್ರೆಯವರು ಪಕ್ಷದ ಎಲ್ಲಾ ಶಾಸಕರೊಂದಿಗೆ ತುರ್ತುಸಭೆ ಕರೆದಿದ್ದಾರೆಂದು ತಿಳಿದುಬಂದಿದೆ.

ಏಕನಾಥ್ ಶಿಂಧೆಯವರು ಸೋಮವಾರ ಸಂಜೆಯಿಂದಲೂ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದ್ದು, ಅವರೊಂದಿಗೆ ಹಲವು ಶಾಸಕರೂ ನಾಪತ್ತೆಯಾಗಿದ್ದಾರೆಂದು ಹೇಳಲಾಗುತ್ತಿದೆ.

20-25 ಮಂದಿ ಶಾಸಕರೊಂದಿಗೆ ಏಕನಾಥ್ ಶಿಂಧಯವರು ಗುಜರಾತ್ ಸಾಜ್ಯದ ಸೂರತ್ ನಲ್ಲಿರುವ ಹೋಟೆಲ್ ಲೆ ಮೆರಿಡಿಯನ್ ನಲ್ಲಿ ತಂಗಿದ್ದಾರೆಂದು ವರದಿಗಳು ತಿಳಿಸಿವೆ. ಹೋಟೆಲ್'ಗೆ ಗುಜರಾತ್ ರಾಜ್ಯದ ಪೊಲೀಸರು ಹೆಚ್ಚಿನ ಭದ್ರತೆಯನ್ನು ಒದಗಿಸಿದ್ದು, ಎಷ್ಟು ಮಂದಿ ಶಾಸಕರು ಹೋಟೆಲ್ ನಲ್ಲಿ ತಂಗಿದ್ದಾರೆಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಹೋಟೆಲ್ ನಲ್ಲಿ ತಂಗಿರುವ ಶಿಂಧೆಯವರು ಶೀಘ್ರದಲ್ಲಿಯೇ ಪತ್ರಿಕಾಗೋಷ್ಠಿ ನಡೆಸಲಿದ್ದು, ತಮ್ಮ ನಿಲುವು ಕುರಿತು ಸ್ಪಷ್ಟಪಡಿಸಲಿದ್ದಾರೆಂದು ಮೂಲಗಳು ತಿಳಿಸಿವೆ.

ಈ ನಡುವೆ ಮಧ್ಯರಾತ್ರಿ ವರ್ಷಾ ಬಂಗಲೆಯಲ್ಲಿ ನಡೆದ ಸಭೆಯ ನಂತರ ಇಂದು ಮತ್ತೆ ಶಿವಸೇನೆ ಶಾಸಕರ ಸಭೆ ಕರೆಯಲಾಗಿದೆ.

ಇಂದು ಮಧ್ಯಾಹ್ನ 12 ಗಂಟೆಗೆ ಮತ್ತೊಂದು ಸಭೆ ನಿಗದಿಯಾಗಿದೆ. ಈ ಸಭೆಗೆ ಎಷ್ಟು ಶಾಸಕರು ಹಾಜರಾಗುತ್ತಾರೆ ಎಂಬುದರ ಮೇಲೆ ಮಹಾವಿಕಾಸ್ ಅಘಾಡಿಯ ಭವಿಷ್ಯ ನಿಂತಿದೆ.

ಮಹಾರಾಷ್ಟ್ರ ವಿಧಾನ ಪರಿಷತ್ತಿನ 10 ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಕಣಕ್ಕಿಳಿಸಿದ ಎಲ್ಲ ಐವರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇನ್ನು ಎನ್‍ಸಿಪಿ ಹಾಗೂ ಶಿವಸೇನೆ ತಲಾ ಎರಡು, ಕಾಂಗ್ರೆಸ್ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಐದು ಸ್ಥಾನಗಳಿಗೆ ಬಿಜೆಪಿಯಿಂದ ಪ್ರವೀಣ್ ದಾರೆಕರ್, ಪ್ರೊ. ರಾಮ್ ಶಿಂದೆ, ಉಮಾ ಖಾಪ್ರೆ, ಶ್ರೀಕಾಂತ್ ಭಾರತೀಯ ಹಾಗೂ ಪ್ರಸಾದ್ ಲಾಡ್ ಸ್ಪರ್ಧಿಸಿದ್ದರು.

ಎಂಎಲ್'ಸಿ ಚುನಾವಣೆಯಲ್ಲಿ 12 ಮಂದಿ ಶಿವಸೇನೆಯ ಶಾಸಕರು ಬಿಜೆಪಿಗೆ ಬೆಂಬಲ ನೀಡಿದ್ದು, ಕಾಂಗ್ರೆಸ್'ನ ಮೂವರು ಶಾಸಕರೂ ಕೂಡ ಅಡ್ಡ ಮತದಾನ ಮಾಡಿದ್ದಾರೆಂದು ಹೇಳಲಾಗುತ್ತಿದೆ.

ಚುನಾವಣೆ ಬಳಿಕ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜೊತೆಗೆ ಸಭೆ ನಡೆಸಿದ ಶಿಂಧೆಯವರು, ಸಭೆ ಬಳಿಕ ತಮ್ಮ ಬೆಂಬಲಿಗ ಶಾಸಕರೊಂದಿಗೆ ನೇರವಾಗಿ ಸೂರತ್‌ಗೆ ತೆರಳಿದರು ಎಂದು ಮೂಲಗಳು ತಿಳಿಸಿವೆ,

ಶಿಂಧೆ ಅವರು ಬಿಜೆಪಿಯ ಹಿರಿಯ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆಂದು ಹೇಳಲಾಗುತ್ತಿದ್ದು, ಗುಜರಾತ್ ಬಿಜೆಪಿ ಅಧ್ಯಕ್ಷ ಸಿಆರ್ ಪಾಟೀಲ್ ಶಿಂಧೆ ಅವಪನ್ನು ಬಿಜೆಪಿಗೆ ಹತ್ತಿರವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

ಶಿಂಧೆ ಮರಾಠವಾಡದ ನಿಷ್ಠಾವಂತ ಶಾಸಕರಾಗಿದ್ದು, ಮಹಾ ವಿಕಾಸ್ ಅಘಾಡಿ ಸರ್ಕಾರ ಶಿಂಧೆಯವರಲ್ಲಿ ಬೇಸರವನ್ನುಂಟು ಮಾಡಿತ್ತು. ಹೀಗಾಗಿ ರಾಜ್ಯಸಭಾ ಚುನಾವಣೆ ಮತ್ತು ಎಂಎಲ್‌ಸಿ ಚುನಾವಣೆಗಳಲ್ಲಿ ನಿಷ್ಠೆ ತೋರಲಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಇದಷ್ಟೇ ಅಲ್ಲದೆ, ಪಕ್ಷದಲ್ಲಿ ಕಿರಿಯನಾಗಿದ್ದರೂ, ಆದಿತ್ಯ ಠಾಕ್ರೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವುದು ಶಿಂಧೆ ಮತ್ತು ಠಾಕ್ರೆ ನಡುವಿನ ಅಂತರವನ್ನು ಹೆಚ್ಚಳ ಮಾಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com