ರಾಜಸ್ಥಾನ, ಮಧ್ಯಪ್ರದೇಶಕ್ಕಿಂತ ಮಹಾರಾಷ್ಟ್ರ ವಿಭಿನ್ನ ಎಂಬುದನ್ನು ಬಿಜೆಪಿ ತಿಳಿಯಬೇಕು: ಶಾಸಕರ ನಾಪತ್ತೆ ಕುರಿತು ಸಂಜಯ್ ರಾವತ್

ರಾಜಸ್ಥಾನ ಮತ್ತು ಮಧ್ಯಪ್ರದೇಶಕ್ಕಿಂತ ಮಹಾರಾಷ್ಟ್ರ ವಿಭಿನ್ನ ಎಂಬುದನ್ನು ಬಿಜೆಪಿ ತಿಳಿಯಬೇಕಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಮಂಗಳವಾರ ಹೇಳಿದ್ದಾರೆ.
ಸಂಜಯ್ ರಾವತ್
ಸಂಜಯ್ ರಾವತ್

ಮುಂಬೈ: ರಾಜಸ್ಥಾನ ಮತ್ತು ಮಧ್ಯಪ್ರದೇಶಕ್ಕಿಂತ ಮಹಾರಾಷ್ಟ್ರ ವಿಭಿನ್ನ ಎಂಬುದನ್ನು ಬಿಜೆಪಿ ತಿಳಿಯಬೇಕಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಮಂಗಳವಾರ ಹೇಳಿದ್ದಾರೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಬಳಿಕ ಶಿವಸೇನೆ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರ ನಿಕಟವರ್ತಿ ಎಂದು ಪರಿಗಣಿಸಲ್ಪಟ್ಟಿರುವ ಏಕನಾಥ್​ ಶಿಂಧೆ ಅವರು ಕೆಲ ಶಾಸಕರೊಂದಿಗೆ ನಾಪತ್ತೆಯಾಗಿದ್ದು, ಗುಜರಾತ್ ಹೋಟೆಲ್ ವೊಂದರಲ್ಲಿ ತಂಗಿದ್ದಾರೆಂದು ಹೇಳಲಾಗುತ್ತಿದೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಂಜಯ್ ರಾವತ್ ಅವರು, ಶಿವಸೇನೆಯ ಕೆಲ ಶಾಸಕರು ಹಾಗೂ ಏಕನಾಥ್ ಶಿಂಧೆಯವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಉರುಳಿಸಲು ಪ್ರಯತ್ನಗಳು ನಡೆಯುತ್ತಿವೆ. ಆದರೆ, ಮಹಾರಾಷ್ಟ್ರ ರಾಜಸ್ಥಾನ ಅಥವಾ ಮಧ್ಯಪ್ರದೇಶಕ್ಕಿಂತಲೂ ವಿಭಿನ್ನ ಎಂಬುದನ್ನು ಬಿಜೆಪಿ ಅರಿಯಬೇಕಿದೆ ಎಂದು ಹೇಳಿದ್ದಾರೆ.

ಏಕನಾಥ್ ಶಿಂಧೆ ಯಾವ ರೀತಿಯ ವ್ಯಕ್ತಿಯೆಂದು ನನಗೆ ಗೊತ್ತಿದೆ. ಅವರು ಶಿವಸೇನೆಯ ಪ್ರಾಮಾಣಿಕ ನಾಯಕ. ಯಾವುದೇ ನಿಯಮಗಳನ್ನು ಹಾಕದೆ ಅವರು ಪಕ್ಷಕ್ಕೆ ಮರಳುತ್ತಾರೆ. ನಮ್ಮ ಇತರೆ ಶಾಸಕರೂ ಕೂಡ ಗುಜರಾತ್'ನ ಸೂರತ್ ನಲ್ಲಿದ್ದಾರೆಂಬ ಮಾಹಿತಿ ಕೇಳಿ ಬಂದಿದೆ. ಹೋಟೆಲ್ ನಿಂದ ಹೊರ ಬರಲು ಅವರನ್ನು ಬಿಡುತ್ತಿಲ್ಲ ಎನ್ನಲಾಗಿದೆ. ಆದರೆ, ಖಂಡಿತವಾಗಿಯೂ ಎಲ್ಲರೂ ಹೊರ ಬಂದು ನಮ್ಮ ಜೊತೆಗೂಡುತ್ತಾರೆ. ಎಲ್ಲರೂ ಶಿವಸೇನೆಗೆ ನಿಷ್ಟಾವಂತ ನಾಯಕರಾಗಿದ್ದಾರೆ. ನಮ್ಮೆಲ್ಲಾ ನಾಯಕರನ್ನೂ ನಾನು ನಂಬುತ್ತೇನೆ, ಎಲ್ಲವೂ ಸರಿಹೋಗುತ್ತದೆ ಎಂದು ತಿಳಿಸಿದ್ದಾರೆ.

ಪ್ರಸ್ತುತದ ಬೆಳವಣಿಗೆ ಕುರಿತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಎನ್'ಸಿಪಿ ಮುಖ್ಯಸ್ಥ ಶರದ್ ಪವಾರ್ ಜೊತೆಗೆ ಮಾತುಕತೆಗಳು ನಡೆಯುತ್ತಿವೆ. ಶಾಸಕರನ್ನು ತಮ್ಮತ್ತ ಸೆಳೆದು ಸರ್ಕಾರ ರಚಿಸುವ ಕನಸು ಕಾಣುತ್ತಿರುವವರು ಈ ಪ್ರಯತ್ನದಲ್ಲಿ ಯಶಸ್ನಿಯಾಗುವುದಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com