ಶಾಸಕರ ಕುಟುಂಬಗಳಿಗೆ ನೀಡಿದ್ದ ಭದ್ರತೆ ವಾಪಸ್: ಉದ್ಧವ್ ಠಾಕ್ರೆ ಕ್ರಮಕ್ಕೆ ಏಕನಾಥ್ ಶಿಂಧೆ ಕೆಂಡಾಮಂಡಲ!

ಮಹಾರಾಷ್ಟ್ರದ ಎಂವಿಎ ಸರ್ಕಾರದ ವಿರುದ್ಧ ಬಂಡಾಯ ಎದ್ದು ಗುವಾಹಟಿಯಲ್ಲಿ ಕುಳಿತಿಕೊಂಡಿರುವ ಶಿವಸೇನೆ ಶಾಸಕರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು ಶನಿವಾರ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದಾರೆ.
ಏಕನಾಥ್ ಸಿಂಧೆ
ಏಕನಾಥ್ ಸಿಂಧೆ

ಮುಂಬೈ: ಮಹಾರಾಷ್ಟ್ರದ ಎಂವಿಎ ಸರ್ಕಾರದ ವಿರುದ್ಧ ಬಂಡಾಯ ಎದ್ದು ಗುವಾಹಟಿಯಲ್ಲಿ ಕುಳಿತಿಕೊಂಡಿರುವ ಶಿವಸೇನೆ ಶಾಸಕರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು ಶನಿವಾರ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದಾರೆ.

ಬಂಡಾಯ ಎದ್ದಿರುವ ಶಿವಸೇನೆಯ ಎಲ್ಲಾ ಶಾಸಕರ ಕುಟುಂಬಗಳಿಗೆ ನೀಡಲಾಗಿದ್ದ ವಿವಿಧ ರೀತಿಯ ಭದ್ರತೆಗಳನ್ನು ಠಾಕ್ರೆ ಹಿಂಪಡೆದುಕೊಂಡಿದ್ದಾರೆ. ಈ ಬೆಳವಣಿಗೆಗೆ ಏಕನಾಥ್ ಶಿಂಧೆಯವರು ಕೆಂಡಾಮಂಡಲಗೊಂಡಿದ್ದಾರೆ.

ಭದ್ರತೆ ಹಿಂಪಡೆದ ಹಿನ್ನೆಲೆಯಲ್ಲಿ ಠಾಕ್ರೆಯರಿಗೆ ಪತ್ರ ಬರೆದಿರುವ ಶಿಂಧೆಯವರು, ನಮ್ಮ ಕುಟುಂಬಗಳಿಗೆ ಏನಾದರೂ ಆದರೆ, ಅದಕ್ಕೆ ಸಂಪೂರ್ಣ ನೀವೇ ಹೊಣೆ ಎಂದು ಎಚ್ಚರಿಸಿದ್ದಾರೆ. ಈ ಪತ್ರವನ್ನು ಡಿಜಿಪಿಯವರಿಗೂ ನೀಡಿದ್ದಾರೆ.

ಪ್ರತೀಕಾರವಾಗಿ ನಿಯಮಗಳ ಪ್ರಕಾರ ಶಾಸಕರಿಗೆ, ಅವರ ನಿವಾಸಕ್ಕೆ ಮತ್ತು ಅವರ ಕುಟುಂಬ ಸದಸ್ಯರಿಗೆ ನೀಡಲಾಗಿದ್ದ ಭದ್ರತೆಯನ್ನು ಕಾನೂನುಬಾಹಿರವಾಗಿ ಹಿಂಪಡೆಯಲಾಗಿದೆ. "ಈ ಕೆಟ್ಟ ನಡೆ ನಮ್ಮ ಸಂಕಲ್ಪವನ್ನು ಮುರಿಯಲು ಮತ್ತು ಎನ್‌ಸಿಪಿ ಮತ್ತು ಕಾಂಗ್ರೆಸ್ ಗೂಂಡಾಗಳನ್ನು ಒಳಗೊಂಡಿರುವ ಮಹಾ ವಿಕಾಸ್ ಅಘಾಡಿ ಸರ್ಕಾರದ ಬೇಡಿಕೆಗಳಿಗೆ ಮಣಿಯಲು ಮಾಡುತ್ತಿರುವ ಮತ್ತೊಂದು ಪ್ರಯತ್ನವಾಗಿದೆ. ಇಂತಹ ನಡೆಗಳಿಂದಲೇ ಎಂವಿಎ ನಾಯಕರಿಂದ ದೂರ ಇರಲು ಮಹಾರಾಷ್ಟ್ರ ತೊರೆದಿದ್ದೇವೆ. ಕಚೇರಿಗಳಿಗೆ ದಾಳಿ ನಡೆಸಿ ಬೆದರಿಸಲಾಗುತ್ತಿದೆ.

ಮಹಾರಾಷ್ಟ್ರದಿಂದ ತೆರಳಿದ ಶಾಸಕರು ಮರಳಿ ರಾಜ್ಯಕ್ಕೆ ಬಂದರೆ ಬದಲು ಕಷ್ಟವಾಗುವಂತೆ ಮಾಡುತ್ತೇವೆಂದು ಶಿವಸೇನೆ ನಾಯಕ ಸಂಜಯ್ ರಾವತ್ ಬೆದರಿಕೆ ಹಾಕಿದ್ದಾರೆ. ಶಾಸಕರ ಭದ್ರತೆಯನ್ನು ಹಿಂತೆಗೆದುಕೊಂಡ ಕೆಲವೇ ಗಂಟೆಗಳಲ್ಲಿ ಇಬ್ಬರು ಶಾಸಕರ ಕಚೇರಿ ಮೇಲೆ ದಾಳಿ ನಡೆದಿದೆ. ರಾವತ್ ಹೇಳಿಕೆಯ ಪರಿಣಾಮವಾಗಿ ಈ ದಾಳಿಗಳು ನಡೆದಿವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಇದೇ ವೇಳೆ ಪಂಜಾಬ್ ಉದಾಹರಣೆ ನೀಡಿರುವ ಅವರು, ಇದೇ ರೀತಿಯ ಸನ್ನಿವೇಶ ಪಂಜಾಬ್ ರಾಜ್ಯದಲ್ಲೂ ನಡೆದಿದ್ದು, ಭದ್ರತೆಗಳನ್ನು ಹಿಂಪಡೆದುಕೊಳ್ಳುತ್ತಿದ್ದಂತೆಯೇ ದೊಡ್ಡ ದೊಡ್ಡ ವ್ಯಕ್ತಿಗಳನ್ನು ದರೋಡೆಕೋರರು/ಗುಂಡಾಗಳು ಗುರು ಮಾಡಿದ್ದರು. ಇದೇ ರೀತಿಯ ಪರಿಣಾಮ ರಾಜ್ಯದಲ್ಲು ಎದುರಾಗುವ ಸಾಧ್ಯತೆಗಳಿವೆ.

ನಿಯಮಗಳ ಪ್ರಕಾರ ನಮಗೆ ಅರ್ಹವಾಗಿರುವ ಭದ್ರತೆಯನ್ನು ಸರ್ಕಾರ ಕೂಡಲೇ ಜಾರಿ ಮಾಡಬೇಕು. ನಮ್ಮ ಕುಟುಂಬಕ್ಕೆ ಭದ್ರತೆ ಒದಗಿಸುವಂತೆ ಒತ್ತಾಯಿಸುತ್ತೇವೆ. ನಮ್ಮ ಕುಟುಂಬ ಸದಸ್ಯರಿಗೆ ಯಾವುದೇ ರೀತಿಯ ಹಾನಿಯುಂಟಾದರೂ ಮುಖ್ಯಮಂತ್ರಿ ಹಾಗೂ ಎಂವಿಎ ಸರ್ಕಾರ ಹೊಣೆಯಾಗುತ್ತದೆ. ಶರದ್ ಪವಾರ್, ಸಂಜಯ್ ರಾವತ್ ಹಾಗೂ ಆದಿತ್ಯಾ ಠಾಕ್ರೆ ಜವಾಬ್ದಾರರಾಗಿರುತ್ತಾರೆಂದು ತಿಳಿಸಿದ್ದಾರೆ.

ಆರೋಪ ನಿರಾಕರಿಸಿದ "ಮಹಾ' ಸರ್ಕಾರ
ಈ ನಡುವೆ ಭದ್ರತೆ ಹಿಂಪಡೆದುಕೊಂಡಿರುವ ಆರೋಪವನ್ನು ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆಯವರು ನಿರಾಕರಿಸಿದ್ದಾರೆ.

ಯಾವುದೇ ಶಾಸಕರ ಭದ್ರತೆ ಹಿಂಪಡೆಯುವಂತೆ ರಾಜ್ಯ ಗೃಹ ಇಲಾಖೆಯಾಗಲಿ, ಮುಖ್ಯಮಂತ್ರಿಗಳ ಕಚೇರಿಯಾಗಲೀ ಸೂಚನೆ ನೀಡಿಲ್ಲ. ಟ್ವಿಟರ್ ನಲ್ಲಿ ಹರಿದಾಡುತ್ತಿರುವ ತಪ್ಪು ಸಂದೇಶದಿಂದಾಗಿ ಈ ಆರೋಪಗಳು ಕೇಳಿ ಬಂದಿವೆ. ಆರೋಪಗಳು ಆಧಾರ ರಹಿತವಾಗಿವೆ ಎಂದು ಹೇಳಿದ್ದಾರೆ.

ತಾನಾಜಿ ಸಾವಂತ್ ಕಚೇರಿ ಮೇಲೆ ಶಿವಸೇನೆ ಕಾರ್ಯಕರ್ತರ ದಾಳಿ, ಪುಣೆಯಲ್ಲಿ ಭದ್ರತೆ ಹೆಚ್ಚಿಸಿದ ಪೊಲೀಸರು
ಪುಣೆಯ ಕತ್ರಾಜ್‌ನ ಬಾಲಾಜಿ ಪ್ರದೇಶದಲ್ಲಿ ಶಿವಸೇನಾ ಕಾರ್ಯಕರ್ತರು ಪಕ್ಷದ ಶಾಸಕ ತಾನಾಜಿ ಸಾವಂತ್ ಅವರ ಕಚೇರಿಯನ್ನು ಧ್ವಂಸಗೊಳಿಸಿದ್ದು, ಇತರೆ ಶಾಸಕರ ಕಚೇರಿ ಮೇಲೂ ದಾಳಿಗಳು ನಡೆಯುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಪುಣೆ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ,

ತಾನಾಜಿ ಸಾವಂತ್ ಮಹಾರಾಷ್ಟ್ರದ ರಾಜ್ಯದ ಬಂಡಾಯ ಶಾಸಕರಲ್ಲಿ ಒಬ್ಬರಾಗಿದ್ದು, ಪ್ರಸ್ತುತ ಅಸ್ಸಾಂನ ಗುವಾಹಟಿಯಲ್ಲಿ ಬೀಡುಬಿಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com