ಅಕ್ರಮ ಗಣಿಗಾರಿಕೆ ಪ್ರಕರಣ: ನ.3ಕ್ಕೆ ವಿಚಾರಣೆಗೆ ಹಾಜರಾಗುವಂತೆ ಜಾರ್ಖಂಡ್ ಸಿಎಂಗೆ ಇಡಿ ಸಮನ್ಸ್

ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 3ರಂದು ವಿಚಾರಣೆಗೆ ಹಾಜರಾಗುವಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಜಾರಿ ನಿರ್ದೇಶನಾಲಯ ಬುಧವಾರ ಸಮನ್ಸ್ ಜಾರಿ ಮಾಡಿದೆ.
ಹೇಮಂತ್ ಸೊರೇನ್
ಹೇಮಂತ್ ಸೊರೇನ್

ನವದೆಹಲಿ: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 3ರಂದು ವಿಚಾರಣೆಗೆ ಹಾಜರಾಗುವಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಜಾರಿ ನಿರ್ದೇಶನಾಲಯ ಬುಧವಾರ ಸಮನ್ಸ್ ಜಾರಿ ಮಾಡಿದೆ.

ಇದಕ್ಕೂ ಮುನ್ನ, ಜಾರಿ ನಿರ್ದೇಶನಾಲಯವು ಸಿಎಂ ಸೊರೇನ್ ಅವರ ನಿಕಟವರ್ತಿ ಪಂಕಜ್ ಮಿಶ್ರಾ ಮತ್ತು ಇತರೆ ಇಬ್ಬರನ್ನು ಈ ಪ್ರಕರಣದಲ್ಲಿ ಬಂಧಿಸಿತ್ತು.

ಜುಲೈನಲ್ಲಿ ರಾಜ್ಯವ್ಯಾಪಿ 18 ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಪಂಕಜ್ ಮಿಶ್ರಾನ ಬ್ಯಾಂಕ್ ಖಾತೆಗಳಿಂದ ರೂ. 11.88 ಕೋಟಿ ಮುಟ್ಟುಗೋಲು ಹಾಕಿಕೊಂಡಿತ್ತು. ಬಳಿಕ ಈ ಬಂಧನ ನಡೆದಿತ್ತು. ಮಿಶ್ರಾ ಮನೆಯಲ್ಲಿ 'ದಾಖಲೆ ಇಲ್ಲದ ರೂ.5.34 ಕೋಟಿ ರೂ ಕೂಡ ಪತ್ತೆಯಾಗಿತ್ತು.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪಂಕಜ್ ಮಿಶ್ರಾ ಮನೆಯಿಂದ ಹೇಮಂತ್ ಸೊರೇನ್ ಅವರ ಪಾಸ್‌ಪೋರ್ಟ್ ಹಾಗೂ ಅವರ ಸಹಿಯುಳ್ಳ ಕೆಲವು ಚೆಕ್‌ಗಳನ್ನು ಕೂಡ ಇ.ಡಿ ವಶಪಡಿಸಿಕೊಂಡಿತ್ತು.

ಹೇಮಂತ್ ಸೊರೇನ್ ಅವರ ರಾಜಕೀಯ ಪ್ರತಿನಿಧಿ ಪಂಕಜ್ ಮಿಶ್ರಾ, ಸಿಎಂ ಅವರ ವಿಧಾನಸಭೆ ಕ್ಷೇತ್ರ ಬರ್ಹೈಟ್‌ನಲ್ಲಿನ ಅಕ್ರಮ ಗಣಿಗಾರಿಕೆ ವ್ಯವಹಾರಗಳನ್ನು ತನ್ನ ಸಹಚರರ ಮೂಲಕ ನಿಯಂತ್ರಿಸುತ್ತಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆ.

ಪಂಕಜ್ ಮಿಶ್ರಾ ಹಾಗೂ ಅವರ ಸಹಚರರಾದ ಬಚ್ಚು ಯಾದವ್ ಮತ್ತು ಪ್ರೇಮ್ ಪ್ರಕಾಶ್ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯಿಂದ ಸೃಷ್ಟಿಯಾದ ಕೋಟ್ಯಂತರ ರೂಪಾಯಿ ಮೌಲ್ಯದ ಅಪರಾಧ ಪ್ರಕ್ರಿಯೆಗಳ ತನಿಖೆ ನಡೆಸುತ್ತಿರುವ ಇ.ಡಿ, ಈವರೆಗೂ ರೂ. 37 ಲಕ್ಷ ಮುಟ್ಟುಗೋಲು ಹಾಕಿದೆ. ಪಂಕಜ್ ಮಿಶ್ರಾ ಅಕ್ರಮವಾಗಿ ಭಾರಿ ಸಂಪತನ್ನು ವಶಪಡಿಸಿಕೊಂಡಿದ್ದು, ಈವರೆಗೂ ರೂ. 42 ಕೋಟಿ ಲೆಕ್ಕ ಸಿಕ್ಕಿದೆ ಎಂದು ಇಡಿ ತಿಳಿಸಿದೆ.

ಸಿಎಂ ಸೊರೇನ್ ಅವರ ಮಾಧ್ಯಮ ಸಲಹೆಗಾರ ಅಭಿಷೇಕ್ ಪ್ರಸಾದ್ ಅವರನ್ನು ಕೂಡ ಆಗಸ್ಟ್‌ನಲ್ಲಿ ಇ.ಡಿ ವಿಚಾರಣೆಗೆ ಒಳಪಡಿಸಿತ್ತು. ಸೊರೇನ್ ಅವರು 2021ರಲ್ಲಿ ಸ್ವತಃ ತಮಗೇ ಗಣಿಗಾರಿಕೆ ಲೀಸ್ ಅನ್ನು ನವೀಕರಿಸಿಕೊಳ್ಳುವ ಮೂಲಕ ಅಧಿಕಾರದ ದುರುಪಯೋಗ ಹಾಗೂ ಲಾಭದ ಮತ್ತೊಂದು ಹುದ್ದೆ ಹೊಂದಿರುವ ಆರೋಪ ಎದುರಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com