ಉತ್ತರ ಪ್ರದೇಶ: ತ್ರಿವಳಿ ತಲಾಖ್ ನೀಡಿ ಪತಿ, ಮೈದುನನಿಂದ ಸರಣಿ ಸಾಮೂಹಿಕ ಅತ್ಯಾಚಾರ!
ಮಹಿಳೆಯೊಬ್ಬರಿಗೆ ತ್ರಿವಳಿ ತಲಾಖ್ ನೀಡಿದ ಬಳಿಕ ಪತಿ, ಮೈದುನ ಮತ್ತು ಧರ್ಮಗುರು ಸೇರಿ ಹಲವರು ನಿರಂತರವಾಗಿ ಸಾಮೂಹಿಕ ಅತ್ಯಾಚಾರ ನಡೆಸಿರುವ ವಿದ್ರಾವಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
Published: 11th November 2022 08:17 PM | Last Updated: 12th November 2022 01:34 PM | A+A A-

ಸಂಗ್ರಹ ಚಿತ್ರ
ಶಹಜಹಾನ್‌ಪುರ: ಮಹಿಳೆಯೊಬ್ಬರಿಗೆ ತ್ರಿವಳಿ ತಲಾಖ್ ನೀಡಿದ ಬಳಿಕ ಪತಿ, ಮೈದುನ ಮತ್ತು ಧರ್ಮಗುರು ಸೇರಿ ಹಲವರು ನಿರಂತರವಾಗಿ ಸಾಮೂಹಿಕ ಅತ್ಯಾಚಾರ ನಡೆಸಿರುವ ವಿದ್ರಾವಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ಥ ಮಹಿಳೆ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ಅಂಗಡಿಗೆ ತೆರಳಿದ್ದ 5 ವರ್ಷದ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ ಯುವಕ
ಪೊಲೀಸ್ ಮೂಲಗಳ ಪ್ರಕಾರ ಮಹಿಳೆ ನೀಡಿದ ದೂರಿನ ಅನ್ವಯ, ಐದು ವರ್ಷಗಳ ಹಿಂದೆ ಸಲ್ಮಾನ್ ಎಂಬಾತ ಮಹಿಳೆಯನ್ನು ಮದುವೆಯಾಗಿದ್ದ. ಕೆಲವು ತಿಂಗಳ ಹಿಂದೆ ಗುಡ್ಡು ಹಾಜಿ ಎಂಬ ಧರ್ಮಗುರುವಿನ ಸಲಹೆಯ ಮೇರೆಗೆ ಸಲ್ಮಾನ್ ತನ್ನ ಪತ್ನಿಗೆ ತ್ರಿವಳಿ ತಲಾಖ್ (ಭಾರತದಲ್ಲಿ ನಿಷೇಧ ಮತ್ತು ಕಾನೂನು ಬಾಹಿರ) ನೀಡಿದ್ದ. ನಂತರ ಮಹಿಳೆಗೆ ತನ್ನ ಕಿರಿಯ ಸಹೋದರನನ್ನು ಮದುವೆಯಾಗಿ ಬಳಿಕ ಆತನಿಗೂ ವಿಚ್ಛೇದನ ನೀಡಿದರೆ ಆ ಬಳಿಕ ಆಕೆಯನ್ನು ಮತ್ತೆ ತನ್ನ ಹೆಂಡತಿಯಾಗಿ ಸ್ವೀಕರಿಸುವುದಾಗಿ ಹೇಳಿದ್ದಾನೆ.
ಇದನ್ನೂ ಓದಿ: 13 ವರ್ಷದ ಬಾಲಕಿ ಮೇಲೆ ಆರು ಮಂದಿ ಅಪ್ರಾಪ್ತರಿಂದ ಅತ್ಯಾಚಾರ, ಕೃತ್ಯವನ್ನು ವಿಡಿಯೋ ಮಾಡಿಕೊಂಡ ಆರೋಪಿಗಳು
ಆಕೆ ಆತನ ಮಾತನ್ನು ನಂಬಿ ಆತ ಹೇಳಿದಂತೆ ಪತಿಯಿಂದ ವಿಚ್ಚೇಧನ ಪಡೆದು ಬಳಿಕ ಆತನ ಸಹೋದರ ಇಸ್ಲಾಂನನ್ನು ಮದುವೆಯಾಗಿದ್ದಾಳೆ. ಬಳಿಕ ಆತನ ಸಹೋದರ ಇಸ್ಲಾಂ ಆಕೆಗೆ ತಲಾಖ್ ನೀಡಲು ನಿರಾಕರಿಸಿದ್ದು, ಮಾತ್ರವಲ್ಲದೇ ತನ್ನ ಅಣ್ಣ ಸಲ್ಮಾನ್ ನೊಂದಿಗೆ ಸೇರಿ ತನ್ನ ಅತ್ತಿಗೆಯ ಮೇಲೆಯೇ ಅತ್ಯಾಚಾರ ನಡೆಸಿದ್ದಾನೆ. ಮನೆಯಲ್ಲಿ ಆಕೆ ಇರುವಾಗ ಸಲ್ಮಾನ್ ಮತ್ತು ಇಸ್ಲಾಂ ಇಬ್ಬರೂ ನಿರಂತರವಾಗಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಸಲ್ಮಾನ್ ಮತ್ತು ಇಸ್ಲಾಂ ಮಾತ್ರವಲ್ಲದೇ ಇವರೊಂದಿಗೆ ಸ್ಥಳೀಯ ಧರ್ಮಗುರು ಗುಡ್ಡು ಹಾಜಿ ಎಂಬವವರೂ ಸೇರಿ ಹಲವಾರು ಸಂದರ್ಭಗಳಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ಹೇಳಿದ್ದಾರೆ.
ಮಹಿಳೆ ತನ್ನ ದೂರಿನೊಂದಿಗೆ ಸ್ಥಳೀಯ ನ್ಯಾಯಾಲಯಕ್ಕೆ ಹೋಗಿದ್ದು, ಸೋಮವಾರ ನ್ಯಾಯಾಲಯದ ಆದೇಶದ ನಂತರ ಎಫ್‌ಐಆರ್ ದಾಖಲಿಸಲಾಗಿದೆ. ದೂರಿನ ಆಧಾರದ ಮೇಲೆ ನಾವು ಗುಡ್ಡು ಹಾಜಿ, ಸಲ್ಮಾನ್, ಇಸ್ಲಾಂ ಮತ್ತು ಅವರ ಕುಟುಂಬದ ಮೂವರ ಮೇಲೆ ಗ್ಯಾಂಗ್ ರೇಪ್ (376 ಐಪಿಸಿ), ಅಸ್ವಾಭಾವಿಕ ಲೈಂಗಿಕ ಕ್ರಿಯೆ (377 ಡಿ ಐಪಿಸಿ) ಮತ್ತು ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕುಗಳ ರಕ್ಷಣೆ) ಕಾಯ್ದೆ-2019 ಸೆಕ್ಷನ್‌ಗಳ ಅಡಿಯಲ್ಲಿ ಒಟ್ಟು ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಧ್ಯ ಪ್ರದೇಶ: ಖಂಡ್ವಾದಲ್ಲಿ ನಾಲ್ಕು ವರ್ಷದ ಬಾಲಕಿ ಅತ್ಯಾಚಾರ ಎಸಗಿ ಕಬ್ಬಿನ ಗದ್ದೆಗೆ ಎಸೆದ ಪಾಪಿ!
ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ. ಪ್ರಕರಣದ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಕುಮಾರ್ ಹೇಳಿದ್ದಾರೆ.