ಶ್ರದ್ಧಾ ಹತ್ಯೆ ಪ್ರಕರಣ: ರಕ್ತದ ಕಲೆ ಹೋಗಿಸಲು ಅತೀವ ನೀರು ಬಳಕೆ, ಅಫ್ತಾಬ್ ಅಪರಾಧ ಸಾಬೀತಿಗೆ ನೀರಿನ ಬಿಲ್ ಪುರಾವೆ?

ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದ ತನಿಖೆಯಲ್ಲಿ ದೆಹಲಿ ಪೊಲೀಸರಿಗೆ ಹೊಸ ಮುನ್ನಡೆ ಸಿಕ್ಕಿದೆ. ಆರೋಪಿ ಅಫ್ತಾಬ್ ಪೂನಾವಾಲಾ ಫ್ಲಾಟ್‌ನಲ್ಲಿ ಬಾಕಿ ಉಳಿದಿರುವ ನೀರಿನ ಬಿಲ್ ಅನ್ನು ಪುರಾವೆಯಾಗಿ ಬಳಸಲು ದೆಹಲಿ ಪೊಲೀಸರು ಮುಂದಾಗಿದ್ದಾರೆ.
ಆರೋಪಿ ಅಫ್ತಾಬ್
ಆರೋಪಿ ಅಫ್ತಾಬ್

ನವದೆಹಲಿ: ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದ ತನಿಖೆಯಲ್ಲಿ ದೆಹಲಿ ಪೊಲೀಸರಿಗೆ ಹೊಸ ಮುನ್ನಡೆ ಸಿಕ್ಕಿದೆ. ಆರೋಪಿ ಅಫ್ತಾಬ್ ಪೂನಾವಾಲಾ ಫ್ಲಾಟ್‌ನಲ್ಲಿ ಬಾಕಿ ಉಳಿದಿರುವ ನೀರಿನ ಬಿಲ್ ಅನ್ನು ಪುರಾವೆಯಾಗಿ ಬಳಸಲು ದೆಹಲಿ ಪೊಲೀಸರು ಮುಂದಾಗಿದ್ದಾರೆ.

ದೆಹಲಿಯಲ್ಲಿ 20,000 ಲೀಟರ್ ನೀರನ್ನು ಸರ್ಕಾರ ಉಚಿತವಾಗಿ ನೀಡುತ್ತಿದೆ. ಮೂಲಗಳ ಪ್ರಕಾರ ಅಫ್ತಾಬ್ ಬಳಿ 300 ರೂಪಾಯಿ ನೀರಿನ ಬಿಲ್ ಬಾಕಿ ಇದೆ ಎಂದು ಅಫ್ತಾಬ್ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಇದನ್ನೇ ಸಾಕ್ಷ್ಯವಾಗಿ ಬಳಸಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆಂದು ತಿಳಿದುಬಂದಿದೆ.

ಅಫ್ತಾಬ್ ಮೇಲಿನ ಮಹಡಿಯಲ್ಲಿ ವಾಸಿಸುವ ಇಬ್ಬರು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಫ್ತಾಬ್ ಹೊರತುಪಡಿಸಿ ಎಲ್ಲಾ ಮಹಡಿಗಳ ನೀರಿನ ಬಿಲ್ ಶೂನ್ಯ ಬರುತ್ತಿದೆ, ಆದರೆ, ಅಫ್ತಾಬ್ ಮಾತ್ರ ಹೆಚ್ಚಿನ ನೀರು ಬಳಕೆ ಮಾಡುತ್ತಿದ್ದ. ಫ್ಲಾಟ್ ನಲ್ಲಿ 300 ರೂ ಬಾಕಿ ಬಿಲ್ ಇದೆ ಎಂದು ಹೇಳಿದ್ದಾರೆ. ಹೀಗಾಗಿ ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸಲು ಮುಂದಾಗಿದ್ದಾರೆ.

ಹತ್ಯೆ ಬಳಿಕ ರಕ್ತದ ಕಲೆಗಳನ್ನು ಹೋಗಲಾಡಿಸಲು ಅಫ್ತಾಬ್ ಹೆಚ್ಚಿನ ನೀರು ಬಳಕೆ ಮಾಡಿದ್ದು ಆಗಾಗೆ ಹೋಗಿ ಕಟ್ಟಡದ ನೀರಿನ ಟ್ಯಾಂಕ್ ಪರಿಶೀಲಿಸುತ್ತಿದ್ದ ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.

ಇನ್ನು ಮನೆಯ ಬಾಡಿಗೆ ಒಪ್ಪಂದದಲ್ಲಿ ಅಫ್ತಾಬ್ ಶ್ರದ್ಧಾ ಹೆಸರನ್ನು ಮೊದಲು ಹಾಗೂ ಕೊನೆಯಲ್ಲಿ ತನ್ನ ಹೆಸರನ್ನು ನೀಡಿರುವುದೂ ಕೂಡ ಪೊಲೀಸರಿಗೆ ತಿಳಿದುಬಂದಿದೆ.

ಶ್ರದ್ಧಾ ಹಾಗೂ ಅಫ್ತಾಬ್ ಇಬ್ಬರೂ ವಿವಾಹಿತರಲ್ಲ ಎಂಬುದು ಫ್ಲಾಟ್ ಮಾಲೀಕರಿಗೆ ತಿಳಿದಿತ್ತು. ಬ್ರೋಕರ್ ಮೂಲಕ ಇಬ್ಬರಿಗೂ ಮಾಲೀಕರು ಫ್ಲಾಟ್ ನೀಡಿದ್ದರು. ಅಫ್ತಾಬ್ ಪ್ರತೀ ತಿಂಗಳು 8 ರಿಂದ 10ರ ನಡುವೆ ಮಾಲೀಕರ ಖಾತೆಗೆ ಬಾಡಿಗೆ ಹಣವನ್ನು ಜಮಾ ಮಾಡುತ್ತಿದ್ದರು.

ಪ್ರಕರಣದ ತನಿಖೆಯಲ್ಲಿ ನೀರಿನ ಬಿಲ್ ಕೂಡ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಪೊಲೀಸರು ಆರೋಪಿಯನ್ನು ಇಂದು ಸಾಕೇತ್ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ಕಸ್ಟಡಿಗೆ ಕೋರಲಿದ್ದಾರೆ.ನ್ಯಾಯಾಲಯವು ಪೊಲೀಸರಿಗೆ ಹೆಚ್ಚಿನ ಕಸ್ಟಡಿಗೆ ನೀಡಿದ್ದೇ ಆದರೆ, ಈ ಆಯಾದಲ್ಲಿಯೂ ತನಿಖೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಅಫ್ತಾಬ್'ಗೆ ಮರಣದಂಡನೆ ವಿಧಿಸುವವರೆಗೆ ವಿಶ್ರಮಿಸುವುದಿಲ್ಲ: ಶ್ರದ್ಧಾ ತಂದೆ
ಶ್ರದ್ದಾ ವಾಲ್ಕರ್ ಳನ್ನು ಕ್ರೂರವಾಗಿ ಕೊಂದು ಹಾಕಿರುವ ಹಂತಕ ಅಫ್ತಾಬ್ ಅಮಿನ್ ಪೂನಾವಾಲನನ್ನು ನ್ಯಾಯಾಲಯ ಗಲ್ಲಿಗೇರಿಸುವವರೆಗೆ ವಿಶ್ರಮಿಸುವುದಿಲ್ಲ ಎಂದು ಶ್ರದ್ದಾ ತಂದೆ ವಿಕಾಸ್ ವಾಲ್ಕರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ವಿಕಾಸ್ ವಾಲ್ಕರ್, ಕೊಲೆಗಡುಕ ಅಫ್ತಾಬ್ ತುಂಬಾ ಚಾಣಾಕ್ಷ್ಯನಾಗಿದ್ದು, ಆತ ತನ್ನ ವಿರುದ್ಧದ ಎಲ್ಲಾ ಸಾಕ್ಷ್ಯಗಳನ್ನು ನಾಶ ಮಾಡಿದ್ದಾನೆ. ಕಳೆದ ಐದಾರು ತಿಂಗಳಿನಿಂದ ಆತ ಎಲ್ಲಾ ಪುರಾವೆ ನಾಶ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

ಸಾಕ್ಷ್ಯ ನಾಶಗೊಳಿಸಿದ್ದರಿಂದ ಸತ್ಯವನ್ನು ಹೊರತರುವುದು ಪೊಲೀಸರಿಗೆ ಕಷ್ಟವಾಗಬಹುದು. ಏನೇ ಆದರೂ ಅಫ್ತಾಬ್ ಗೆ ಮರಣದಂಡನೆ ವಿಧಿಸುವವರೆಗೆ ತನ್ನ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಅಫ್ತಾಬ್ ವಿಚಾರಣೆ ವೇಳೆ ಕೆಲವೊಮ್ಮೆ ಸುಳ್ಳು ಮತ್ತೆ ಕೆಲವು ಬಾರಿ ಸತ್ಯ ಹೇಳುತ್ತಿದ್ದಾನೆ ಎಂಬುದು ಪೊಲೀಸರಿಗೆ ತಿಳಿದಿದೆ. ಈಗಾಗಲೇ ಕೋರ್ಟ್ ಕೂಡಾ ಆತನ ಮಂಪರು ಪರೀಕ್ಷೆಗೆ ಅನುಮತಿ ನೀಡಿದ್ದು, ಇದರಿಂದ ನ್ಯಾಯ ಸಿಗಬಹುದು ಎಂದು ಭರವಸೆ ಹೊಂದಿರುವುದಾಗಿ ವಿಕಾಸ್ ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com