ಡ್ರೋನ್‌ನಿಂದ ಬೀಳಿಸಲಾದ ಐಇಡಿ, ಪಿಸ್ತೂಲ್, 5 ಲಕ್ಷ ರೂ. ನಗದನ್ನು ವಶಪಡಿಸಿಕೊಂಡ ಪೊಲೀಸರು
ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಗಡಿಯುದ್ದಕ್ಕೂ ಡ್ರೋನ್‌ನಿಂದ ಬೀಳಿಸಲಾದ ಸುಧಾರಿತ ಸ್ಫೋಟಕ ಸಾಧನಗಳು (ಐಇಡಿಗಳು), ಪಿಸ್ತೂಲ್‌ಗಳು ಮತ್ತು ನಗದನ್ನು ಪೊಲೀಸರು ಗುರುವಾರ ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Published: 24th November 2022 11:24 AM | Last Updated: 24th November 2022 05:13 PM | A+A A-

ಡ್ರೋನ್ ಮೂಲಕ ಬೀಳಿಸಲಾದ ಐಇಡಿಗಳು, 5 ಲಕ್ಷ ನಗದು, ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡ ಪೊಲೀಸರು. (ಚಿತ್ರ-ಎಎನ್ಐ)
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಗಡಿಯುದ್ದಕ್ಕೂ ಡ್ರೋನ್‌ನಿಂದ ಬೀಳಿಸಲಾದ ಸುಧಾರಿತ ಸ್ಫೋಟಕ ಸಾಧನಗಳು (ಐಇಡಿಗಳು), ಪಿಸ್ತೂಲ್‌ಗಳು ಮತ್ತು ನಗದನ್ನು ಪೊಲೀಸರು ಗುರುವಾರ ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಗಡಿಯಿಂದ ಸುಮಾರು ಐದಾರು ಕಿಲೋಮೀಟರ್ ದೂರದಲ್ಲಿರುವ ರಾಮಗಢ ಮತ್ತು ವಿಜಯಪುರದ ನಡುವೆ ಬೆಳಿಗ್ಗೆ 6.15 ರ ಸುಮಾರಿಗೆ ಸ್ಥಳೀಯ ಜನರು ಡ್ರೋನ್ ಮೂಲಕ ಸರಕು ರವಾನೆ ಮಾಡುತ್ತಿರುವುದನ್ನು ನೋಡಿದ್ದಾರೆ ಮತ್ತು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಅಭಿಷೇಕ್ ಮಹಾಜನ್ ಸುದ್ದಿಗಾರರಿಗೆ ತಿಳಿಸಿದರು.
ಬಾಂಬ್ ನಿಷ್ಕ್ರಿಯ ದಳವು ಡಿಟೋನೇಟರ್‌ಗಳೊಂದಿಗೆ ಜೋಡಿಸದ ಎರಡು ಐಇಡಿಗಳು, ಎರಡು ಚೈನೀಸ್ ಪಿಸ್ತೂಲ್‌ಗಳು, 60 ರೌಂಡ್‌ಗಳ 4 ಮ್ಯಾಗಜೀನ್‌ಗಳು ಮತ್ತು 500 ರೂ. ಮುಖಬೆಲೆಯ 5 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರ: ಆರ್ ಎಸ್ ಪುರ ವಲಯದಲ್ಲಿ ಒಳನುಸುಳುಕೋರನ ಗುಂಡಿಕ್ಕಿ ಹತ್ಯೆ
ಇವುಗಳನ್ನು ಉಕ್ಕಿನ ತಳವನ್ನು ಹೊಂದಿದ್ದ ಮರದ ಪೆಟ್ಟಿಗೆಯಲ್ಲಿ ಮುಚ್ಚಲಾಗಿದೆ. ಇದು ಗಡಿಯಾಚೆಗಿನ ಡ್ರೋನ್ ಡ್ರಾಪಿಂಗ್ ಪ್ರಕರಣವಾಗಿದ್ದು, ಈ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಎಸ್‌ಎಸ್‌ಪಿ ಹೇಳಿದರು.
'ಯಾವುದಾದರೂ ಅಹಿತಕರ ಘಟನೆಗೆ ಇವುಗಳನ್ನು ಬಳಸುವ ಯೋಜನೆ ಹೊಂದಿತ್ತು. ಆದರೆ, ಆ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಪೊಲೀಸ್ ತಂಡ ಮತ್ತು ಸ್ಥಳೀಯ ಜನರಿಗೆ ಬಹುಮಾನ ನೀಡಲಾಗುವುದು ಎಂದು ಹೇಳಿದರು.